ಗೋವಾ ಪ್ರವಾಸೋದ್ಯಮಕ್ಕೆ ಹೆಸರಾದ ರಾಜ್ಯ. ದೇಶದ ಎಲ್ಲ ರಾಜ್ಯಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯೇನೋ ಹೆಚ್ಚುತ್ತಿದೆ. ಆದರೆ, ಪ್ರವಾಸಿಗರನ್ನು ನಿರ್ವಹಿಸಬೇಕಾದ ವ್ಯವಸ್ಥೆ ಸನ್ನದ್ಧಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕವಾಗಿದೆ. ಗೋವಾ 41 ದೊಡ್ಡ ಕ್ಲಬ್ಗಳು ಮತ್ತು 1747 ಬಾರ್ಗಳನ್ನು ಹೊಂದಿದೆ. ಹೊಸ ನಿರ್ವಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಕ್ರಿಸ್ವುಸ್ ಮತ್ತು ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಅಸುರಕ್ಷಿತ ಕಟ್ಟಡ, ಪ್ರದೇಶಗಳಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆದರೆ ಜೀವರಕ್ಷಣೆಯ ಹೊಣೆ ಯಾರದ್ದು? ಪ್ರವಾಸೋದ್ಯಮದಿಂದ ಆದಾಯ ಪಡೆಯುವ ಕ್ಲಬ್, ರೆಸ್ಟೋರೆಂಟ್ಗಳು ಸುರಕ್ಷೆಯ ನಿಯಮಗಳನ್ನು ಪರಿಣಾಮಕಾರಿಯಾಗಿ ಪಾಲಿಸಬೇಕು. ಅಗ್ನಿ ಶಮನಕ್ಕೆ ಸಂಬಂಧಿಸಿ ಸೂಕ್ತ ವ್ಯವಸ್ಥೆ ಮಾಡಿರಬೇಕು. ಕಟ್ಟಡ ನಿರ್ಮಾಣ ಇಕ್ಕಟ್ಟಾದ ಪ್ರದೇಶದಲ್ಲಿ ಅಥವಾ ತಪು್ಪ ವಿನ್ಯಾಸದಲ್ಲಿ ಮಾಡಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬುದಕ್ಕೆ ಗೋವಾದ ದುರಂತ ಸಾಕ್ಷಿಯಾಗಿದ್ದು, ಈ ಘಟನೆಯಿಂದ ಸಂಬಂಧಿತ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.