ದೇಶದಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಅಲ್ಲದೆ, ನಾಪತ್ತೆಯಾದವರ ಪೈಕಿ ಶೇಕಡ 15ರಷ್ಟು ಮಕ್ಕಳು ಎಲ್ಲಿ ಹೋದರು, ಏನಾದರು ಎಂಬುದು ಪತ್ತೆಯಾಗುತ್ತಿಲ್ಲ ಎಂಬುದು ಕಳವಳದ ಸಂಗತಿ. ಈ ಸಮಸ್ಯೆ ದೊಡ್ಡ ಪಿಡುಗಾಗಿ ಕಾಡುತ್ತಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಮಾರಕವಾಗಿ ಪರಿಣಮಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಮಾನವ ಕಳ್ಳಸಾಗಾಣಿಕೆ ಜಾಲಗಳು ಸಕ್ರಿಯವಾಗಿದ್ದು, ಇವು ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಿ ಅಪಹರಣ ಮಾಡುತ್ತಿವೆ. ಬಳಿಕ ಅವರನ್ನು ಸಮಾಜವಿರೋಧಿ ಕೃತ್ಯಗಳಿಗೆ ನೂಕಲಾಗುತ್ತದೆ. ಮಾನವ ಕಳ್ಳಸಾಗಾಣಿಕೆ ಜಾಲಗಳ ವಿರುದ್ಧ ತನಿಖೆ ಮತ್ತು ಕ್ರಮದ ಪ್ರಮಾಣ ಮುಂಚೆಗಿಂತ ಸುಧಾರಣೆಯಾಗಿದ್ದರೂ, ಈ ವಿಷಯದಲ್ಲಿ ರಾಜ್ಯಗಳ ನಡುವೆ ಸಮನ್ವಯ ಮತ್ತು ಸಹಕಾರ ಅತ್ಯಗತ್ಯವಾಗಿದೆ. ಇಂಥ ಪ್ರಕರಣಗಳ ಜಾಡು ಹಿಡಿದು ಪೊಲೀಸರು ಇತರ ರಾಜ್ಯಕ್ಕೆ ಹೋದಾಗ ಸ್ಥಳಿಯ ಪೊಲೀಸರ ಸಹಕಾರ ಸಿಗದೆ ಪ್ರಕರಣಗಳ ತನಿಖೆ ತಾರ್ಕಿಕ ಅಂತ್ಯ ಕಾಣುತ್ತಿಲ್ಲ.