ಸಂಪಾದಕೀಯ | ಕಾನೂನು ಎಲ್ಲರಿಗೂ ಒಂದೇ

ಸಂಪಾದಕೀಯ | ಕಾನೂನು ಎಲ್ಲರಿಗೂ ಒಂದೇ
Published on: 

ಭಾರತದ ಬೃಹತ್ ಮಾರುಕಟ್ಟೆಯಲ್ಲಿ ತಮ್ಮ ಒಡೆತನದ ಉಪಗ್ರಹ ಆಧಾರಿತ ಇಂಟರ್​ನೆಟ್ ಸೇವೆ ಸ್ಟಾರ್​ಲಿಂಕ್ ಆರಂಭಿಸುವ ಪ್ರಕ್ರಿಯೆ ತಡವಾಗುತ್ತಿದೆ ಎಂಬ ಅಸಮಾಧಾನದಿಂದ ಉದ್ಯಮಿ ಎಲಾನ್ ಮಸ್ಕ್ ಭಾರತೀಯ ನೀತಿ-ನಿಯಮಗಳನ್ನೇ ಪ್ರಶ್ನಿಸುತ್ತಿರುವುದು ತೀರಾ ಅಸಮಂಜಸ ನಡೆ. ಭಾರತದ ಪ್ರಮುಖ ಉದ್ಯಮಿ ಮುಕೇಶ್ ಅಂಬಾನಿ ಅವರ ಹೆಸರನ್ನು ನೆಪವಾಗಿಟ್ಟುಕೊಂಡು ಕೇಂದ್ರ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವುದು ಜಾಗತಿಕ ಉದ್ಯಮಿಯೊಬ್ಬರ ನಡವಳಿಕೆಗೆ ಶೋಭೆ ತರುವಂಥದ್ದಲ್ಲ.

ಉಪಗ್ರಹ ತರಂಗಾಂತರ ಮತ್ತು ಸ್ಯಾಟಲೈಟ್ ಬ್ರಾಡ್​ಬ್ಯಾಂಡ್ ಸಂಪರ್ಕವು ಸಾಮಾನ್ಯ ವಾಣಿಜ್ಯ ವ್ಯಾಪಾರವಷ್ಟೇ ಅಲ್ಲ. ಅದು ದೇಶದ ಆಂತರಿಕ ಭದ್ರತೆ, ಸಾರ್ವಭೌಮತೆ ಹಾಗೂ ಕೋಟ್ಯಂತರ ನಾಗರಿಕರ ದತ್ತಾಂಶ ಸಂರಕ್ಷಣೆಗೆ ನೇರವಾಗಿ ತಳುಕು ಹಾಕಿಕೊಂಡಿರುವ ಗಂಭೀರವಾದ ವಿಚಾರ. ನೂತನ ದೂರಸಂಪರ್ಕ ಕಾಯ್ದೆಯ ಅಡಿಯಲ್ಲಿ ಭಾರತ ಸರ್ಕಾರವು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಉಪಗ್ರಹ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವ ಬದಲು ಆಡಳಿತಾತ್ಮಕವಾಗಿ ಹಂಚಿಕೆ ಮಾಡಲು ಒಪ್ಪಿಕೊಂಡಿದೆ. ಇದು ವಾಸ್ತವವಾಗಿ ಸ್ಟಾರ್​ಲಿಂಕ್ ಸೇರಿದಂತೆ ಜಾಗತಿಕ ಸಂಸ್ಥೆಗಳ ಬೇಡಿಕೆಯ ಪರವಾಗಿಯೇ ಇರುವ ತೀರ್ವನ. ಹೀಗಿದ್ದರೂ, ಕೇವಲ ಸ್ಪೆಕ್ಟ್ರಮ್ ಹಂಚಿಕೆಯ ವಿಧಾನವೊಂದೇ ಪರವಾನಗಿಗೆ ಅಂತಿಮ ಮಾನದಂಡವಾಗುವುದಿಲ್ಲ ಎಂಬುದನ್ನು ಮಸ್ಕ್ ಅರಿಯಬೇಕಿದೆ.

ಭಾರತೀಯ ದೂರಸಂಪರ್ಕ ಇಲಾಖೆ ಮತ್ತು ಗೃಹ ಸಚಿವಾಲಯ ವಿಧಿಸಿರುವ ಭದ್ರತಾ ಷರತ್ತುಗಳು ಯಾವುದೇ ಕಂಪನಿಗೂ ರಿಯಾಯಿತಿ ನೀಡುವುದಿಲ್ಲ. ಉಪಗ್ರಹ ಇಂಟರ್​ನೆಟ್ ಒದಗಿಸುವ ಯಾವುದೇ ಸಂಸ್ಥೆಯು ಭಾರತೀಯ ಬಳಕೆದಾರರ ಡೇಟಾ ಟ್ರಾಫಿಕ್​ನ್ನು ದೇಶದೊಳಗೇ ಇರಿಸಲು ಇಲ್ಲಿಯೇ ಕೇಂದ್ರಗಳನ್ನು ಸ್ಥಾಪಿಸುವುದು ಕಡ್ಡಾಯ. ಜತೆಗೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದಂತೆ ಕಾನೂನುಬದ್ಧ ಪ್ರತಿಬಂಧಕ ವ್ಯವಸ್ಥೆಗಳಿಗೆ ಸರ್ಕಾರಿ ಏಜೆನ್ಸಿಗಳಿಗೆ ಪ್ರವೇಶಾವಕಾಶ ಕಲ್ಪಿಸುವುದು ಮತ್ತು ದತ್ತಾಂಶವನ್ನು ವಿದೇಶಿ ಸರ್ವರ್​ಗಳಿಗೆ ರವಾನಿಸದಿರುವ ಸ್ಪಷ್ಟ ಭರವಸೆಯನ್ನು ದೂರಸಂಪರ್ಕ ಇಲಾಖೆ ಬಯಸುತ್ತದೆ. ದೇಶೀಯ ಉದ್ಯಮಗಳಿರಲಿ ಅಥವಾ ಗ್ಲೋಬಲ್ ದೈತ್ಯ ಸಂಸ್ಥೆಗಳಿರಲಿ, ರಾಷ್ಟ್ರೀಯ ಸುರಕ್ಷತೆಯ ಈ ಮಾನದಂಡಗಳು ಎಲ್ಲರಿಗೂ ಸಮಾನ.

ಸ್ಟಾರ್​ಲಿಂಕ್ ಈ ಭದ್ರತಾ ನಿಯಮಾವಳಿಗಳಿಗೆ ಅಧಿಕೃತವಾಗಿ ಬದ್ಧತೆ ತೋರುವಲ್ಲಿ ಮೀನಮೇಷ ಎಣಿಸುತ್ತಿದೆ ಎನ್ನಲಾದ ಹಿನ್ನೆಲೆಯಲ್ಲಿ ಪರವಾನಗಿ ವಿಳಂಬವಾಗುತ್ತಿದೆಯೇ ಹೊರತು, ಯಾವುದೇ ದೇಶೀಯ ಕಂಪನಿಯ ಪರವಾಗಿ ಸರ್ಕಾರ ನಿಂತಿಲ್ಲ ಎಂಬುದು ಸುಸ್ಪಷ್ಟ. ಜಾಗತಿಕ ಮಟ್ಟದಲ್ಲಿ ತಾವೆಷ್ಟೇ ಪ್ರಭಾವಶಾಲಿಯಾಗಿದ್ದರೂ, ಪ್ರಜಾಪ್ರಭುತ್ವದ ನಿಯಮಬದ್ಧ ಚೌಕಟ್ಟನ್ನು ಮೀರಲು ಸಾಧ್ಯವಿಲ್ಲ. ಮಸ್ಕ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸುವ ಬದಲು, ಸ್ಥಳೀಯ ಕಾನೂನುಗಳನ್ನು ಗೌರವಿಸಿ, ಭದ್ರತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ವಿವೇಕಯುತವಾಗಿ ಹೆಜ್ಜೆ ಇಡುವುದೇ ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net