

ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ವಿವಾದ ದಶಕಗಳಷ್ಟು ಹಳೆಯದು. ಈಗ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳ ಸ್ಥಳ ಪರಿಶೀಲನೆಗೂ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದು ಅರ್ಥಹೀನ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್, ‘ಈ ಪರಿಶೀಲನೆಗೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದ್ದಾರೆ. ಆದರೆ ಯೋಜನೆಯ ಸಾಧಕ- ಬಾಧಕಗಳನ್ನು ಪರಿಶೀಲಿಸುವುದಕ್ಕೂ ವಿರೋಧಿಸುವುದು ಯಾವ ನ್ಯಾಯ?
ಮೇಕೆದಾಟು ಯೋಜನೆ ಕರ್ನಾಟಕದ ಪಾಲಿನ ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳ ಕುಡಿಯುವ ನೀರಿನ ಅಗತ್ಯ ಪೂರೈಸುವ ಉದ್ದೇಶ ಹೊಂದಿದೆ. ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹರಿದು ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಅಗತ್ಯವಿರುವ ಸಂದರ್ಭದಲ್ಲಿ ಬಳಸಿಕೊಳ್ಳುವುದು ಯೋಜನೆಯ ಪ್ರಮುಖ ಆಶಯ. ಇದರಿಂದ ತಮಿಳುನಾಡಿನ ಪಾಲಿನ ನೀರಿಗೆ ಧಕ್ಕೆಯಾಗುವುದಿಲ್ಲ. ಹೀಗಿರುವಾಗ ಯೋಜನೆಯ ಬಗ್ಗೆ ವಾಸ್ತವಾಂಶ ತಿಳಿದುಕೊಳ್ಳುವ ಮೊದಲೇ ವಿರೋಧ ವ್ಯಕ್ತಪಡಿಸುವುದು ರಾಜಕೀಯ ಒತ್ತಡ ಹೇರುವ ಪ್ರಯತ್ನದಂತಿದೆ.
ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬುದನ್ನು ಕರ್ನಾಟಕ ಹಲವು ಬಾರಿ ಸ್ಪಷ್ಟಪಡಿಸಿದೆ. ಈ ವಾದದ ಸತ್ಯಾಸತ್ಯತೆಯನ್ನು ನಿರ್ಧರಿಸಬೇಕಾದದ್ದು ತಾಂತ್ರಿಕ ಮತ್ತು ಕಾನೂನುಬದ್ಧ ಪರಿಶೀಲನೆಯ ಮೂಲಕವೇ ಹೊರತು ರಾಜಕೀಯ ಹೇಳಿಕೆಗಳ ಮೂಲಕವಲ್ಲ. ಕೇಂದ್ರ ಸರ್ಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ಸ್ವರೂಪ, ನೀರು ಸಂಗ್ರಹ ಸಾಮರ್ಥ್ಯ, ಪರಿಸರದ ಮೇಲಿನ ಪರಿಣಾಮ ಮತ್ತು ಕೆಳಹರಿವಿನ ನೀರಿನ ಲಭ್ಯತೆ ಕುರಿತು ಅಧ್ಯಯನ ನಡೆಸಿದರೆ ಎರಡೂ ರಾಜ್ಯಗಳಿಗೂ ಸ್ಪಷ್ಟತೆ ಸಿಗಲಿದೆ. ಪರಿಶೀಲನೆಯ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಬಹುದು.
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ರೈತರ ಹಿತಾಸಕ್ತಿ ಮತ್ತು ತಮಿಳುನಾಡಿನ ಕೃಷಿ ಅಗತ್ಯಗಳೆರಡೂ ಮುಖ್ಯ. ಆದರೆ ಒಂದು ರಾಜ್ಯದ ಅಗತ್ಯವನ್ನು ಮುಂದಿಟ್ಟುಕೊಂಡು ಮತ್ತೊಂದು ರಾಜ್ಯದ ಅಭಿವೃದ್ಧಿ ಯೋಜನೆಗೆ ಆರಂಭದಲ್ಲೇ ಅಡ್ಡಿಪಡಿಸುವುದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧ. ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳ ಆದೇಶಗಳನ್ನು ಎರಡೂ ರಾಜ್ಯಗಳು ಗೌರವಿಸಬೇಕು. ಅದೇ ರೀತಿ, ಕಾನೂನುಬದ್ಧವಾಗಿ ಯೋಜನೆ ಪರಿಶೀಲಿಸುವ ಅವಕಾಶವನ್ನೂ ನಿರಾಕರಿಸಬಾರದು.
ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಯೋಜನೆಯ ಕುರಿತು ತಮ್ಮ ನಿಲುವನ್ನು ಅಂಕಿಅಂಶ ಮತ್ತು ತಾಂತ್ರಿಕ ದಾಖಲೆಗಳೊಂದಿಗೆ ಸಮರ್ಥವಾಗಿ ಮಂಡಿಸಬೇಕು. ತಮಿಳುನಾಡಿನ ಆತಂಕಗಳಿಗೆ ವಾಸ್ತವಾಂಶಗಳ ಮೂಲಕ ಉತ್ತರ ನೀಡಬೇಕು. ರಾಜಕೀಯ ಪ್ರತಿಷ್ಠೆಗಿಂತ ಜನರ ಕುಡಿಯುವ ನೀರಿನ ಅಗತ್ಯ ಮತ್ತು ಎರಡೂ ರಾಜ್ಯಗಳ ದೀರ್ಘಕಾಲೀನ ಹಿತಾಸಕ್ತಿಗೆ ಎರಡೂ ಕಡೆಯವರು ಆದ್ಯತೆ ನೀಡಬೇಕು.
ಮೇಕೆದಾಟು ಯೋಜನೆಯ ಸ್ಥಳ ಪರಿಶೀಲನೆಯನ್ನೇ ವಿರೋಧಿಸುವ ಬದಲು, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲು ತಮಿಳುನಾಡು ಸಹಕರಿಸಬೇಕು. ಸಂವಾದ ಮತ್ತು ವೈಜ್ಞಾನಿಕ ಅಧ್ಯಯನದಿಂದ ಸಮಸ್ಯೆಗೆ ಪರಿಹಾರ ಸಿಗಬೇಕೇ ಹೊರತು ರಾಜಕೀಯ ಪ್ರೇರಿತ ವಿರೋಧ ಮತ್ತು ಅನಗತ್ಯ ಪ್ರಲಾಪದಿಂದಲ್ಲ.