

ಕೋಟ್ಯಂತರ ಭಾರತೀಯರ ತ್ಯಾಗ, ಬಲಿದಾನದಿಂದ ದೇಶಕ್ಕೆ ದೊರೆತ ಸ್ವಾತಂತ್ರ್ಯಕ್ಕೀಗ ಎಂಭತ್ತರ ಹರೆಯ. ಈ ದಿನವನ್ನು ಇಡೀ ರಾಷ್ಟ್ರ ಅತ್ಯಂತ ವಿಜೃಂಭಣೆ ಮತ್ತು ಭಕ್ತಿಯಿಂದ ಆಚರಿಸಿಕೊಳ್ಳುತ್ತಿದೆ. ಸಾರ್ವಭೌಮತ್ವದ ಸಂಕೇತವಾಗಿ ದೇಶದೆಲ್ಲೆಡೆ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಈ ಸಮಯವು ಗತಕಾಲದ ಸ್ಮರಣೆಗಷ್ಟೇ ಸೀಮಿತವಲ್ಲ. ದೇಶ ಸಾಧಿಸಿದ ಪ್ರಗತಿಯ ಸಿಂಹಾವಲೋಕನ ಹಾಗೂ ಭವಿಷ್ಯದ ದಿಕ್ಕನ್ನು ಕಂಡುಕೊಳ್ಳುವ ಆತ್ಮಾವಲೋಕನದ ಸಂದರ್ಭವಿದು.
ಬಡತನ, ಕ್ಷಾಮ, ನಿರಕ್ಷರತೆ, ದೇಶ ವಿಭಜನೆ ಮುಂತಾದ ಸಮಸ್ಯೆಗಳ ನಡುವೆ ನಮ್ಮ ದೇಶ 1947ರಲ್ಲಿ ಸ್ವತಂತ್ರವಾದಾಗ ‘ಭಾರತದಲ್ಲಿ ಪ್ರಜಾಪ್ರಭುತ್ವ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ಹಲವಾರು ವಿದೇಶಿ ವಿಶ್ಲೇಷಕರು ಭವಿಷ್ಯ ನುಡಿದಿದ್ದರು. ಆದರೆ ಭಾರತ ಅದನ್ನು ಸುಳ್ಳು ಮಾಡಿ, ಜಗತ್ತಿನ ಅತಿ ದೊಡ್ಡ ಹಾಗೂ ಯಶಸ್ವಿ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಮುನ್ನಡೆದಿದೆ. ಕೃಷಿ ಕ್ಷೇತ್ರದಲ್ಲಿ ‘ಹಸಿರು ಕ್ರಾಂತಿ’ಯ ಮೂಲಕ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರಯಾನ ಹಾಗೂ ಆದಿತ್ಯ-ಎಲ್1 ಯಶಸ್ಸಿನ ಮೂಲಕ ನಮ್ಮ ವಿಜ್ಞಾನಿಗಳು ಭಾರತದ ಧ್ವಜವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.
ಭಾರತ ಇಂದು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಮಾಹಿತಿ ತಂತ್ರಜ್ಞಾನ, ಯುಪಿಐ ಆಧಾರಿತ ಡಿಜಿಟಲ್ ಕ್ರಾಂತಿ, ನವೋದ್ಯಮ (ಸ್ಟಾರ್ಟಪ್) ಹಾಗೂ ಬೃಹತ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದು ಅವರ ಜೀವನಮಟ್ಟವನ್ನು ಮಧ್ಯಮ ವರ್ಗಕ್ಕೆ ಎತ್ತರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಜಾಗತಿಕ ರಾಜಕೀಯ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ಮುನ್ನಡೆಯೂ ಗಮನಾರ್ಹವಾಗಿದೆ.
ಈ ಎಲ್ಲ ಸಾಧನೆಗಳ ನಡುವೆಯೂ, ದೇಶದ ಎದುರು ಹಲವು ಸವಾಲುಗಳಿವೆ. ಆರ್ಥಿಕ ಪ್ರಗತಿಯ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗಬೇಕಿದೆ. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಯುವಜನತೆಗೆ ಆಧುನಿಕ ಕೌಶಲ ಆಧಾರಿತ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ದಿನದಿನಕ್ಕೂ ಬದಲಾಗುತ್ತಿರುವ ತಂತ್ರಜ್ಞಾನದ ವಿಷಯಗಳನ್ನು ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಸಿ, ಯುವಜನರನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಅಣಿಗೊಳಿಸಬೇಕಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಗುಣಮಟ್ಟದ ಸುಧಾರಣೆ, ಹವಾಮಾನ ವೈಪರೀತ್ಯದ ಅಪಾಯಗಳನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳು, ರೈತರ ಆದಾಯ ವೃದ್ಧಿ, ಕೃಷಿ ಕ್ಷೇತ್ರದ ಅನಿಶ್ಚಿತತೆ ಕೊನೆಗಾಣಿಸುವುದು ನಮ್ಮ ಆದ್ಯತೆಗಳಾಗಬೇಕು. ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಾದ ಸೌಹಾರ್ದ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಆಗಬೇಕು.
ಸ್ವಾತಂತ್ರ್ಯ ಎಂದರೆ ಹಕ್ಕುಗಳನ್ನು ಅನುಭವಿಸುವುದಷ್ಟೇ ಅಲ್ಲ, ರಾಷ್ಟ್ರದ ಪ್ರಗತಿಗಾಗಿ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು. ಕೇಂದ್ರ ಸರ್ಕಾರ 2047ರೊಳಗೆ ಸಾಧಿಸಲು ಉದ್ದೇಶಿಸಿರುವ ‘ವಿಕಸಿತ ಭಾರತ’ದ ಕನಸು ನನಸಾಗಲು ಪ್ರತಿಯೊಬ್ಬ ನಾಗರಿಕನೂ ಕೊಡುಗೆ ನೀಡಬೇಕಿದೆ. ದೇಶದ ಒಗ್ಗಟ್ಟು, ವೈವಿಧ್ಯ ಕಾಯ್ದುಕೊಳ್ಳುವುದರ ಜತೆಗೆ ನವಭಾರತದ ನಿರ್ವಣಕ್ಕಾಗಿ ಎಲ್ಲರೂ ಶ್ರಮಿಸುವ ದೃಢ ಸಂಕಲ್ಪ ಮಾಡೋಣ.