_1784656178442.webp?w=480&auto=format%2Ccompress&fit=max)
_1784656178442.webp?w=480&auto=format%2Ccompress&fit=max)
ಭಾರತೀಯ ಪರಂಪರೆಯು ಕುಟುಂಬ ವ್ಯವಸ್ಥೆಗೆ ಪ್ರಾಮುಖ್ಯ ನೀಡಿದ್ದು, ಇದರಲ್ಲಿ ದಾಂಪತ್ಯಕ್ಕೂ ಅಷ್ಟೇ ಮಹತ್ವವಿದೆ. ಮುಕ್ತ ಸಮಾಜದ ಪರಿಕಲ್ಪನೆಯ ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ಇದು ಅಚ್ಚರಿಯ ವಿಷಯ. ಆದರೆ ಬದಲಾದ ಕಾಲಘಟ್ಟದಲ್ಲಿ, ನಮ್ಮಲ್ಲಿಯೂ ವಿವಾಹ ವಿಚ್ಛೇದನಗಳು ಜಾಸ್ತಿಯಾಗುತ್ತಿದ್ದು, ಕಳವಳ ಮೂಡಿಸಿದೆ.
ಇದಕ್ಕೆ ಕಾರಣಗಳು ಹಲವಿವೆಯಾದರೂ, ಪರಿಣಾಮ ಮಾತ್ರ ಗಂಭೀರವಾದುದು. ಆಯಾ ಕುಟುಂಬ ಮಾತ್ರವಲ್ಲ, ಒಟ್ಟಾರೆ ಸಮಾಜ ಹಾಗೂ ದೇಶದ ಮೇಲೂ ಇದರಿಂದ ದುಷ್ಪರಿಣಾಮಗಳು ಆಗುತ್ತವೆ ಎಂಬುದನ್ನು ಮರೆಯಬಾರದು. ಈ ಪ್ರವೃತ್ತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ತಂತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿವಿಧ ಹಂತದ ನ್ಯಾಯಾಲಯಗಳು ಕೊಡುತ್ತಿರುವ ತೀರ್ಪುಗಳು ಮತ್ತು ವಿಚಾರಣೆ ಸಂದರ್ಭದಲ್ಲಿ ಹೊರಗೆಡಹುತ್ತಿರುವ ಅಭಿಪ್ರಾಯಗಳು ಗಮನಾರ್ಹ.
‘ಹಿಂದೂ ಕಾನೂನಿನ ಪ್ರಕಾರ, ವಿವಾಹವೆಂಬುದು ಒಂದು ಪವಿತ್ರ ಸಂಸ್ಕಾರವೇ ಹೊರತು ಕೇವಲ ಒಂದು ಒಪ್ಪಂದವಲ್ಲ’ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಈಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿರುವುದು ಉಲ್ಲೇಖನೀಯ. ದಾಂಪತ್ಯದಲ್ಲಿ ಬಿರುಕು ಮೂಡಿರುವ ಕಾರಣ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದ ಮಾತುಗಳು ಅವಲೋಕನಾರ್ಹ. ಪತ್ನಿಯೊಂದಿಗೆ ಸಂಸಾರ ನಡೆಸಲು ಆಸಕ್ತಿಯಿಲ್ಲ ಎಂಬ ಪತಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರೀತಿಸಿ ಮದುವೆಯಾಗಿ, ಈಗ ವಯಸ್ಕಳಾಗುವ ಹಂತದಲ್ಲಿರುವ ಹೆಣ್ಣುಮಗುವಿಗೆ ತಂದೆಯಾಗಿರುವ ವ್ಯಕ್ತಿ ತನಗೆ ಮದುವೆ ಮೇಲೆ ಆಸಕ್ತಿ ಉಳಿದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಕೇಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ.
ಹಿಂದೂ ಕಾನೂನಿನಲ್ಲಿ ಮದುವೆ ಕೇವಲ ಒಪ್ಪಂದವಲ್ಲ, ಬದಲಾಗಿ ಜೀವಿತಾವಧಿಯ ಸಂಸ್ಕಾರವಾಗಿದೆ’ಎಂದು ಹೇಳಿತು. ಎಲ್ಲ ಯತ್ನಗಳ ಹೊರತಾಗಿಯೂ, ಇನ್ನು ಒಂದಾಗಿ ಬದುಕಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪಿದಾಗಷ್ಟೆ ವಿಚ್ಛೇದನವನ್ನು ಆಯ್ಕೆಯಾಗಿ ನೀಡಲಾಗಿದೆ. ಆದರೆ ಚಿಕ್ಕಪುಟ್ಟ ಕಾರಣಕ್ಕೂ ವಿಚ್ಛೇದನ ಹಂತಕ್ಕೆ ಹೋಗುವ ಪ್ರಕರಣಗಳು ಹೆಚ್ಚುತ್ತಿವೆಯೆಂಬುದು ಅಂಕಿಅಂಶಗಳಿಂದ ಮತ್ತು ವಿವಾಹ ಸಮಾಲೋಚಕರ ಹೇಳಿಕೆಗಳಿಂದ ತಿಳಿದುಬರುವ ಸಂಗತಿ. ಬದಲಾದ ಸಾಮಾಜಿಕ ವಾತಾವರಣ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಒತ್ತು, ಹೊಂದಾಣಿಕೆಯ ಕೊರತೆ, ಆರ್ಥಿಕ ಸ್ವಾವಲಂಬನೆ ಮುಂತಾದ ಕಾರಣಗಳು ಈ ಪ್ರವೃತ್ತಿಯ ಹಿನ್ನೆಲೆಯಲ್ಲಿವೆ.
ಕಾರಣಗಳು ಏನೇ ಇದ್ದರೂ, ವಿಚ್ಛೇದನದಿಂದಾಗುವ ಪರಿಣಾಮಗಳನ್ನು ಉಪೇಕ್ಷಿಸುವಂತಿಲ್ಲ. ಅದರಲ್ಲೂ ಮಕ್ಕಳ ಮೇಲೆ ಆಗುವ ಪರಿಣಾಮ ಇನ್ನೂ ಹೆಚ್ಚು. ಈ ವಾಸ್ತವವನ್ನು ಅರಿತು, ಬದುಕಿನಲ್ಲಿ ಎದುರಾಗುವ ಚಿಕ್ಕಪುಟ್ಟ ತೊಂದರೆ, ಹೊಂದಾಣಿಕೆ ಕೊರತೆಯಂತಹ ಸಮಸ್ಯೆಗಳನ್ನು ದೊಡ್ಡದಾಗಿ ಮಾಡದೆ, ಒಟ್ಟಿಗೆ ಸಾಗಿದರೆ ದಾಂಪತ್ಯ ಉಳಿಯುತ್ತದೆ. ಈಗ ವಿಭಕ್ತ ಕುಟುಂಬಗಳು ಹೆಚ್ಚಿರುವುದು ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಮನೆಯಲ್ಲಿ ದಂಪತಿ ಮತ್ತು ಒಂದು ಅಥವಾ ಎರಡು ಮಕ್ಕಳು ಮಾತ್ರ ಇರುವುದರಿಂದಾಗಿ, ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಭಾವನಾತ್ಮಕ ಬೆಂಬಲದ ಕೊರತೆ ಎದುರಾಗುತ್ತಿದೆ.
ಅದಲ್ಲದೆ, ಹಿರಿಯರ ಸಲಹೆ ಅಥವಾ ಕಿವಿಮಾತಿಗೂ ಆಸ್ಪದ ಇಲ್ಲದಂತಾಗಿದೆ. ಪರಸ್ಪರರ ಮೇಲೆ ದೋಷಾರೋಪ ಹೊರಿಸುವುದನ್ನು ಬಿಟ್ಟು, ದಾಂಪತ್ಯ ಬಂಧದ ಮಹತ್ವ ಅರಿತು ತಾಳ್ಮೆ, ವಿವೇಚನೆಯಿಂದ ವರ್ತಿಸಿದರೆ ನೆಮ್ಮದಿಯಿಂದ ಬಾಳ್ವೆ ನಡೆಸಬಹುದು. ಸಮಾಜ, ದೇಶದ ಆರೋಗ್ಯಕ್ಕೂ ಇದು ಪೂರಕ.