ಸಂಪಾದಕೀಯ | ಬೆಳವಣಿಗೆಗೆ ಬಲ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Editorial: ದೇಶದ ಆರ್ಥಿಕತೆ, ಕೃಷಿ, ಕೈಗಾರಿಕೆ ಮತ್ತು ಉತ್ಪಾದನಾ ವಲಯಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಲ್ಲ ಕೆಲ ಪ್ರಮುಖ ಬೆಳವಣಿಗೆಗಳು ಬುಧವಾರ ಘಟಿಸಿವೆ. ಮೊಬೆಲ್ ತಯಾರಿಕಾ ರಂಗ, ಯೂರಿಯಾ ಉತ್ಪಾದನೆ ಮತ್ತು ಸೆಮಿ ಕಂಡಕ್ಟರ್ ಕ್ಷೇತ್ರಗಳಿಗೆ ಸಂಬಂಧಿಸಿ ಕೇಂದ್ರ ಸಚಿವ ಸಂಪುಟವು ಕೆಲ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದೇ ವೇಳೆ, ಭಾರತ ಮತ್ತು ಬ್ರಿಟನ್ ನಡುವಣ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು (ಸಿಇಟಿಎ) ಅಧಿಕೃತವಾಗಿ ಜಾರಿಗೆ ಬಂದಿದೆ. 
ಭಾರತೀಯ ಮೊಬೈಲ್ ಬ್ರ್ಯಾಂಡ್​ಗಳನ್ನು ಜಾಗತಿಕ ವೇದಿಕೆಗೆ ಒಯ್ಯಲು ಮತ್ತು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು 62,500 ಕೋಟಿ ರೂ. ಮೊತ್ತದ ‘ಮೊಬೈಲ್ ಪಿಎಲ್​ಐ 2.0’ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಮುಂದಿನ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ. ಇದರಿಂದ 15 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ರಫ್ತು ಹಾಗೂ 60,000 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಭಾರತವು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದನಾ ದೇಶವಾಗಿದ್ದು, ಭಾರತದ ಪ್ರಮುಖ ರಫ್ತು ವಸ್ತ್ತುಗಳಲ್ಲಿ ಸ್ಮಾರ್ಟ್​ಫೋನ್​ಗಳು ಸಹ ಸೇರಿವೆ. 
ದೇಶದಲ್ಲಿ ವಾರ್ಷಿಕ 40 ಮಿಲಿಯನ್ ಟನ್ ಯೂರಿಯಾ ಅಗತ್ಯವಿದ್ದು, 30 ಮಿಲಿಯನ್ ಟನ್ ದೇಶೀಯವಾಗಿ ಉತ್ಪಾದನೆಯಾಗುತ್ತಿದೆ. ಉಳಿದ 10 ಮಿಲಿಯನ್ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸಚಿವ ಸಂಪುಟವು ‘ರಾಷ್ಟ್ರೀಯ ಯೂರಿಯಾ ಹೂಡಿಕೆ ನೀತಿಗೆ ಅನುಮೋದನೆ ನೀಡಿದೆ. ಈ ನೀತಿಯಡಿ ದೇಶದಲ್ಲಿ 8 ರಿಂದ 9 ಹೊಸ ಅನಿಲ ಆಧಾರಿತ ಯೂರಿಯಾ ಸ್ಥಾವರಗಳನ್ನು ಸ್ಥಾಪಿಸಲಾಗುವುದು. ಇದರಿಂದ ದೇಶದ ಉತ್ಪಾದನಾ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿ 10 ಮಿಲಿಯನ್ ಟನ್ ಯೂರಿಯಾ ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ದೇಶಕ್ಕೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಕೂಡ ಉಳಿತಾಯವಾಗುತ್ತದೆ.
ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸಲು ಮತ್ತು ಚಿಪ್ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಂಪುಟವು 1.27 ಲಕ್ಷ ಕೋಟಿ ರೂ. ವೆಚ್ಚದ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ ಯೋಜನೆಗೆ ಅಂಗೀಕಾರ ನೀಡಿದೆ. ಈ ಯೋಜನೆಯಲ್ಲಿ ಚಿಪ್ ವಿನ್ಯಾಸಕ್ಕೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಈ ಎಲ್ಲ ಕ್ರಮಗಳು ಉದ್ಯೋಗ ಸೃಷ್ಟಿ ಮತ್ತು ದೇಶದ ಆರ್ಥಿಕತೆಗೆ ಇಂಬು ನೀಡುವ ಸಾಧ್ಯತೆಗಳನ್ನು ಹೊಂದಿವೆ. ಇನ್ನೊಂದೆಡೆ, 2025ರ ಜೂನ್​ನಲ್ಲಿ ಲಂಡನ್​ನಲ್ಲಿ ಭಾರತ ಮತ್ತು ಬ್ರಿಟನ್ ಮಧ್ಯೆ ಆದ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಇದೀಗ ಜಾರಿಗೆ ಬಂದಿದೆ. ಇದರಿಂದಾಗಿ ಭಾರತದಿಂದ ಬ್ರಿಟನ್​ಗೆ ರಫ್ತಾಗುವ ಬಹುತೇಕ ವಸ್ತುಗಳು ಸುಂಕರಹಿತವಾಗಲಿದೆ. 
ಅದೇ ಹೊತ್ತಿಗೆ, ಬ್ರಿಟನ್​ನಿಂದ ಭಾರತಕ್ಕೆ ಬರುವ ಹಲವು ಉತ್ಪನ್ನಗಳ ಮೇಲೆ ಸುಂಕ ಇರುವುದಿಲ್ಲ. ಕೆಲ ಕೃಷಿ ಆಧಾರಿತ ಉತ್ಪನ್ನಗಳನ್ನು ಭಾರತ ಈ ಯಾದಿಯಿಂದ ಹೊರಗಿಟ್ಟಿದೆ. ಒಮ್ಮೆಲೇ ಎಲ್ಲ ವಸ್ತುಗಳು ಸುಂಕರಹಿತವಾಗುವುದಿಲ್ಲ; ಐದತ್ತು ವರ್ಷಗಳಲ್ಲಿ ಹಂತಹಂತವಾಗಿ ಅನುಷ್ಠಾನಕ್ಕೆ ಬರುತ್ತದೆ. ಇದೇನೇ ಇದ್ದರೂ, ಕೊಲ್ಲಿ ಸಂಘರ್ಷ, ರಷ್ಯಾ-ಯೂಕ್ರೇನ್ ಸಮರ ಮತ್ತಿತರ ಜಾಗತಿಕ ಬಿಕ್ಕಟ್ಟುಗಳ ನಡುವೆ ದೇಶದ ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೈವಿಧ್ಯಮಯ ವ್ಯಾಪಾರ ಒಪ್ಪಂದಗಳು ನೆರವಾಗುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net