ಸಂಪಾದಕೀಯ: ದೇಶದ ಭದ್ರತೆಯೇ ಪರಮೋಚ್ಚ

Editorial
Editorial
Published on
ದೇಶದ ಗಡಿಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಭದ್ರತಾ ಪಡೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಾರ ಗೌರವ ಇದೆ. ದೇಶದ ಸಾರ್ವಭೌಮತ್ವವು ಗಡಿ ಭದ್ರತಾ ಪಡೆ (ಬಿಎಸ್​ಎಫ್) ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ನಿಷ್ಠೆಯ ಮೇಲೆ ನಿಂತಿದೆ. ಆದರೆ ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್​ಎಫ್ ಸಬ್​ಇನ್​ಸ್ಪೆಕ್ಟರೊಬ್ಬರು ಜಾನುವಾರುಗಳ ಅಕ್ರಮ ಕಳ್ಳಸಾಗಣೆಗೆ ಅವಕಾಶ ಮಾಡಿಕೊಟ್ಟಿದ್ದು ಜನಮಾನಸವನ್ನು ಕಲಕಿದೆ. ಆ ತಪ್ಪಿಗಾಗಿ ಅವರನ್ನು ಸೇವೆಯಿಂದ ವಜಾ ಮಾಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ ಅತ್ಯಂತ ಅರ್ಥಪೂರ್ಣ ಮತ್ತು ಕಠಿಣ ಸಂದೇಶವನ್ನು ರವಾನಿಸಿದೆ.
ಜನರಲ್ ಸೆಕ್ಯುರಿಟಿ ಫೋರ್ಸ್ ಕೋರ್ಟ್ (ಜಿಎಸ್​ಎಫ್​ಸಿ) ನೀಡಿದ್ದ ವಜಾ ಶಿಕ್ಷೆಯನ್ನು ಪ್ರಶ್ನಿಸಿ ಆ ವ್ಯಕ್ತಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಸುಪ್ರೀಂ ಕೋರ್ಟ್ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದೆ. ಗಡಿ ಕಾಯುವ ಹೊಣೆ ಹೊತ್ತ ಅಧಿಕಾರಿಯೇ ಹಣದ ಆಮಿಷಕ್ಕೆ ಅಥವಾ ಇನ್ನಾವುದೋ ಕಾರಣಕ್ಕೆ ಅಕ್ರಮಗಳಿಗೆ ಸಹಕರಿಸಿರುವುದು ದೇಶದ್ರೋಹಕ್ಕೆ ಸಮಾನವಾದ ಅಪರಾಧ. ಗಡಿಯಲ್ಲಿ ನಡೆಯುವ ಪ್ರತಿಯೊಂದು ಅಕ್ರಮ ಚಟುವಟಿಕೆಯೂ ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುತ್ತದೆ. ಕಳ್ಳಸಾಗಣೆದಾರರಿಗೆ ದಾರಿ ಮಾಡಿಕೊಡುವ ಮೂಲಕ ಈ ಅಧಿಕಾರಿ ಕೇವಲ ಕಾನೂನು ಉಲ್ಲಂಘನೆ ಮಾಡಿಲ್ಲ, ಬದಲಾಗಿ ಕೋಟ್ಯಂತರ ಭಾರತೀಯರ ನಂಬಿಕೆಗೆ ದ್ರೋಹ ಬಗೆದಿದ್ದಾರೆ.
ಅಧಿಕಾರಿ ಸುದೀರ್ಘ ಕಾಲ ಬಿಎಸ್​ಎಫ್​ನಲ್ಲಿದ್ದು, ಈ ಹಿಂದೆ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ ಎಂದು ಅವರ ಪರ ವಾದಿಸಿದ ವಕೀಲರು ಹೇಳಿ, ಶಿಕ್ಷೆಯನ್ನು ಕಡಿಮೆ ಮಾಡಲು ಕೋರಿದ್ದರು. ಆದರೆ, ನ್ಯಾಯಮೂರ್ತಿಗಳು ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಶಿಸ್ತು ಎಂಬುದು ಕೇವಲ ಒಂದು ಪದವಲ್ಲ, ಅದು ಭದ್ರತಾಪಡೆಯ ಅಡಿಪಾಯ. ಒಮ್ಮೆ ಕಳ್ಳಸಾಗಣೆಗೆ ಸಹಕರಿಸಿದರೆ, ಅದು ಇಡೀ ಪಡೆಯ ಶಿಸ್ತನ್ನು ಗಾಳಿಗೆ ತೂರಿದಂತೆ ಎಂಬ ನ್ಯಾಯಾಲಯದ ನಿಲುವು ಶ್ಲಾಘನೀಯ. ದೀರ್ಘಾವಧಿಯ ಸೇವೆ ಇಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಮರೆಮಾಚಲು ಅಥವಾ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಲೈಸೆನ್ಸ್ ಆಗಬಾರದು.
ಸಶಸ್ತ್ರ ಪಡೆಗಳು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಶತ್ರುಗಳ ಒಳನುಸುಳುವಿಕೆ, ಅಕ್ರಮ ಸಾಗಾಟ ಮತ್ತು ಭಯೋತ್ಪಾದನೆ ಭೀತಿಯ ನಡುವೆ ಅಧಿಕಾರಿಗಳು ಎಚ್ಚರ ತಪ್ಪಿದರೆ ಇಡೀ ರಾಷ್ಟ್ರವೇ ಸಂಕಷ್ಟಕ್ಕೆ ಸಿಲುಕಬಹುದು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಇತರ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ವೃತ್ತಿಪರತೆ ಮತ್ತು ರಾಷ್ಟ್ರಭಕ್ತಿಗಿಂತ ವೈಯಕ್ತಿಕ ಲಾಭ ದೊಡ್ಡದಲ್ಲ ಎಂಬುದನ್ನು ಎತ್ತಿ ತೋರಿಸಿದೆ.
ಸುಪ್ರೀಂ ಕೋರ್ಟ್​ನ ಈ ಆದೇಶ ನ್ಯಾಯಾಂಗ ಪ್ರಕ್ರಿಯೆ ಮೇಲೆ ಜನರಿಟ್ಟಿರುವ ವಿಶ್ವಾಸವನ್ನು ಹೆಚ್ಚಿಸಿದೆ. ರಕ್ಷಕರು ‘ಭಕ್ಷಕರಾದಾಗ’ ಅವರಿಗೆ ಕಠಿಣ ಶಿಕ್ಷೆಯೇ ಮದ್ದು. ದೇಶದ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸುಪ್ರೀಂ ಕೋರ್ಟ್​ನ ನಿಲುವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net