ಮಾರಾಟಗಾರರು ಹಾಲಿಗೆ ಯೂರಿಯಾ, ಸಕ್ಕರೆ, ಡಿಟರ್ಜೆಂಟ್ ಪೌಡರ್, ಸ್ಟಾರ್ಚ್ ಮುಂತಾದ ರಾಸಾಯನಿಕಗಳನ್ನು ಸೇರಿಸುತ್ತಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ತಜ್ಞರ ಪ್ರಕಾರ, ಯೂರಿಯಾ ಮಿಶ್ರಿತ ಹಾಲನ್ನು ದೀರ್ಘಾವಧಿ ಬಳಕೆ ಮಾಡಿದರೆ ಮನುಷ್ಯರ ಮೂತ್ರಪಿಂಡ ಮತ್ತು ಯಕೃತ್ನಲ್ಲಿ ಗಂಭೀರ ಸಮಸ್ಯೆಗಳು ತಲೆದೋರುತ್ತವೆ. ಡಿಟರ್ಜೆಂಟ್ ಅಂಶಗಳು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತವೆ. ಮಕ್ಕಳಲ್ಲಿ ಪೋಷಕಾಂಶವನ್ನು ಕುಂಠಿತಗೊಳಿಸಿ ಬೆಳವಣಿಗೆಗೆ ತಡೆ ಒಡ್ಡುತ್ತವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಹಲವು ಅಧ್ಯಯನಗಳು ಸಹ ಕಲಬೆರಕೆ ಆಹಾರ ಸೇವನೆ ಮನುಷ್ಯರಲ್ಲಿ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿವೆ.