ಸಂಪಾದಕೀಯ: ಎಂಇಎಸ್ ಉದ್ಧಟತನ

Editorial
Editorial
Published on
ಪ್ರತಿ ಬಾರಿ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆದಾಗಲೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರು ಮಹಾಮೇಳಾವ್ ನಡೆಸುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ. ಈ ಬಾರಿಯೂ ಎಂಇಎಸ್ ಉದ್ಧಟತನ ಮುಂದುವರಿದಿದೆ.
ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ, ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ನವೆಂಬರ್ 8ರಂದು ಮಹಾಮೇಳಾವ ನಡೆಸಲು ಎಂಇಎಸ್ ಯತ್ನಿಸಿತು. ಆದರೆ, ಎಚ್ಚೆತ್ತುಕೊಂಡ ಪೊಲೀಸರು ಎಂಇಎಸ್​ನ 20ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ಮೂಲಕ, ಅವರ ಪುಂಡಾಟಿಕೆಯನ್ನು ವಿಫಲಗೊಳಿಸಿದರು. ಎಂಇಎಸ್​ನ ನಾಡವಿರೋಧಿ ನಿಲುವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿ ವರ್ಷವೂ ಅಧಿವೇಶನದ ಹೊತ್ತಲ್ಲಿ ಅಡ್ಡಿ ಉಂಟುಮಾಡಲು, ಉದ್ವಿಗ್ನತೆ ಸೃಷ್ಟಿಸಲು ಎಂಇಎಸ್ ಯತ್ನಿಸುತ್ತಲೇ ಇದೆ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಪದೇಪದೆ ಸಾಬೀತಾಗಿದ್ದರೂ ಎಂಇಎಸ್​ನ ಈ ಕುಚೋದ್ಯ ಸಹಿಸುವಂತಹುದಲ್ಲ. ಈ ಕುಮ್ಮಕ್ಕಿಗೆ ಸ್ಥಳೀಯ ಕೆಲವು ಮರಾಠಿ ಭಾಷಿಕರೂ ಕೈಜೋಡಿಸುತ್ತಿರುವುದು ವಿಷಾದನೀಯ. ಅಂಥವರನ್ನು ಗಡಿಪಾರು ಮಾಡುವ ಮೂಲಕ ರಾಜ್ಯ ಸರ್ಕಾರ ತಕ್ಕ ಪಾಠ ಕಲಿಸಬೇಕು. ಮುಗಿದುಹೋದ ವಿವಾದಗಳನ್ನು ಕೆದಕುವುದು, ಜನರ ಭಾವನೆಗಳನ್ನು ಪ್ರಚೋದಿಸುವುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳಿಗೆ ಅಭ್ಯಾಸವೇ ಆಗಿಹೋಗಿದೆ. ಅಲ್ಲದೆ, ಗಡಿವಿವಾದ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿದೆ ಎಂಬುದು ಗೊತ್ತಿದ್ದರೂ, ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ.
‘ದಾಖಲಾತಿಗಳನ್ನು ಮರಾಠಿಯಲ್ಲಿ ಮುದ್ರಿಸಿ ಕೊಡಿ’ ಎಂದು ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಎಂಇಎಸ್ ಸದಸ್ಯರು ಈ ಹಿಂದೆ ಗದ್ದಲ ನಡೆಸಿದ್ದರು. ಕನ್ನಡ ನೆಲದಲ್ಲಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಸದಸ್ಯರು ತಮಗೆ ಕನ್ನಡ ಗೊತ್ತಿಲ್ಲವೆಂದು ಹೇಳುತ್ತಿರುವುದೇ ನಾಚಿಕೆಗೇಡು. ಇವರಿಗೆ ಕನ್ನಡ ಗೊತ್ತಿಲ್ಲವೆಂದೇನಿಲ್ಲ. ಕನ್ನಡವನ್ನು, ಕನ್ನಡಿಗರನ್ನು ಅವಮಾನಿಸುವ ಉದ್ದೇಶದಿಂದಲೇ ಹೀಗೆ ಮಾಡುತ್ತಿರುವುದು ಸ್ಪಷ್ಟ. ಇಂತಹ ಉದ್ಧಟತನವನ್ನು ರಾಜ್ಯ ಸರ್ಕಾರ ಮತ್ತು ಬೆಳಗಾವಿ ಮಹಾನಗರಪಾಲಿಕೆ ದೃಢವಾದ ಆತ್ಮಬಲದಿಂದ ಮಟ್ಟ ಹಾಕಬೇಕು.
ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶದ ಕನ್ನಡ ಹಾಗೂ ಮರಾಠಿ ಭಾಷಿಕರು ಪರಸ್ಪರ ಸಾಮರಸ್ಯ ಹಾಗೂ ವಿಶ್ವಾಸದಿಂದಲೇ ಬದುಕುತ್ತಿದ್ದಾರೆ. ಆದರೆ, ಎಂಇಎಸ್ ಮತ್ತು ಮಹಾರಾಷ್ಟ್ರದ ಕೆಲ ರಾಜಕೀಯ ಬಣಗಳು ರಾಜಕೀಯ ಹಿತಾಸಕ್ತಿಗೋಸ್ಕರ ವಿವಾದವನ್ನು ಜೀವಂತವಾಗಿ ಇರಿಸುವ ಯತ್ನ ಮಾಡುತ್ತಿರುವುದು ಖಂಡನೀಯ. ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಕಿತ್ತೂರು ಕರ್ನಾಟಕದ ಕೇಂದ್ರಸ್ಥಾನವಾಗಿರುವ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಿದರೆ ಇವರಿಗೇನು ತೊಂದರೆ? ಅಧಿವೇಶನದ ಸಂದರ್ಭದಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಒದಗಿಸುವಂಥ ಪ್ರಯತ್ನ ಮಾಡುವುದು, ಜನರಲ್ಲಿ ಗೊಂದಲ, ಭಯ ಮೂಡಿಸುವುದು ಅಕ್ಷಮ್ಯ.
ರಾಜ್ಯ ಸರ್ಕಾರ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಂಇಎಸ್ ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಅಧಿವೇಶನದ ವೇದಿಕೆಯಿಂದಲೇ ನಿಖರ ಹಾಗೂ ದಿಟ್ಟ ಪ್ರತ್ಯುತ್ತರವನ್ನು ನೀಡಬೇಕು. ಕಾನೂನು ಸುವ್ಯವಸ್ಥೆಯನ್ನು ಭಂಗ ಮಾಡುವ ಪ್ರಯತ್ನ ನಡೆದರೆ, ಅಂಥವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net