ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪ್ರತಿಯೊಂದು ಮನೆಗೂ ಮೂರು ಬಾರಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಕ್ರಿಯೆಯ ಉದ್ದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ತಂತ್ರಜ್ಞಾನದ ಅರಿವಿಲ್ಲದ ಅಥವಾ ಗ್ರಾಮೀಣ ಭಾಗದ ಜನರಿಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳು, ನಾಡಕಚೇರಿಗಳು ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಇದರ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಈ ಬಾರಿ ಮತದಾರರಿಗೆ ನೀಡಲಾಗುವ 2 ಅರ್ಜಿ ನಮೂನೆಗಳಲ್ಲಿ ಪ್ರತ್ಯೇಕ ಕ್ಯೂಆರ್ ಕೋಡ್ ಇರಲಿದೆ. ಇದರ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಲು ಜನರಿಗೆ ಸುಲಭವಾಗಲಿದೆ. ಡಿಜಿಟಲ್ ಮತ್ತು ಸಮೂಹ ಮಾಧ್ಯಮಗಳ ಮೂಲಕ, "ಇದು ಹೆಸರು ತೆಗೆದುಹಾಕುವ ಪ್ರಕ್ರಿಯೆಯಲ್ಲ, ಬದಲಿಗೆ ಪಟ್ಟಿಯನ್ನು ದೋಷಮುಕ್ತಗೊಳಿಸುವ ಪ್ರಕ್ರಿಯೆ' ಎಂಬ ಸಕಾರಾತ್ಮಕ ಸಂದೇಶವನ್ನು ಚುನಾವಣಾ ಆಯೋಗ ಬಿತ್ತರಿಸಬೇಕು.