_1765908241076.webp?w=480&auto=format%2Ccompress&fit=max)
_1765908241076.webp?w=480&auto=format%2Ccompress&fit=max)
ದೇಶದ ಬಹುದೊಡ್ಡ ಉದ್ಯೋಗ ಖಾತರಿ ಯೋಜನೆ ಮನರೇಗಾವನ್ನು (ಮಹಾತ್ಮ ಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಸ್ಕಿಮ್ ರದ್ದುಗೊಳಿಸಿ, ವರ್ಷದ 125 ದಿನ ಉದ್ಯೋಗ ಒದಗಿಸುವ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್’ (ಗ್ರಾಮೀಣ) (ವಿಜಿ-ಜಿ ರಾಮ್ಜಿ ವಿಬಿ ಜಿಆರ್ಎಎಂಜಿ) ಮಸೂದೆ-2025ನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ. ಮನರೇಗಾ ಗ್ರಾಮೀಣ ಭಾಗದ ಪ್ರಮುಖ ಯೋಜನೆಯಾಗಿತ್ತು ಹಾಗೂ ಸ್ಥಳೀಯವಾಗಿ ಅಭಿವೃದ್ಧಿ ಕಾಮಗಾರಿಗಳು ಕೂಡ ನಡೆದಿದ್ದವು. ಅಂತೆಯೇ ಕೆಲ ಗೊಂದಲ ಹಾಗೂ ಅಪಸವ್ಯ ಕೂಡ ಹೊಂದಿತ್ತು. ಕೇಂದ್ರದ ಯೋಜನೆಯಾಗಿದ್ದರೂ ಆಯಾ ರಾಜ್ಯಗಳು ಕೆಲ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡಿದ್ದವು.
ವಿಜಿ-ಜಿ ರಾಮ್ಜಿ ಹೊಸ ಯೋಜನೆಯ ಬಗ್ಗೆ ರಾಜಕೀಯ ಸಮರ್ಥನೆ ಮತ್ತು ವಿರೋಧ ಎರಡೂ ಕೇಳಿಬಂದಿವೆ. ಆದರೆ, ಸುಧಾರಣೆಯ ಆಶಯ ಇರಿಸಿಕೊಂಡು ಮತ್ತು ಹಳೆಯ ಯೋಜನೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಉದ್ಯೋಗ ಖಾತ್ರಿಯ ಹೊಸ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದರೆ, ಈ ಬೆಳವಣಿಗೆ ಪೂರಕ ಎನ್ನಬಹುದು. ಆದರೆ, ಇದು ಕಾನೂನು ಆಗಲು ಒಂದಿಷ್ಟು ಪ್ರಕ್ರಿಯೆ ನಡೆಯಬೇಕಿದೆ. ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು, ಅಲ್ಲಿ ಅಂಗೀಕಾರ ದೊರೆತ ಬಳಿಕ ಮೇಲ್ಮನೆ ರಾಜ್ಯಸಭೆಯ ಅಂಗೀಕಾರವನ್ನು ಪಡೆದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುತ್ತದೆ.
ಪ್ರಸ್ತುತ ಮಸೂದೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ. 125 ದಿನಗಳ ಉದ್ಯೋಗ ಖಾತ್ರಿಯನ್ನು ಇದು ನೀಡಲಿದೆ ಮತ್ತು ಸ್ಥಳೀಯ ಯೋಜನೆಗಳ ಜತೆಗೆ ವಿಕಸಿತ ಗ್ರಾಮ ಪಂಚಾಯತ್ ಯೋಜನೆಯೊಂದಿಗೆ ಸೇರ್ಪಡೆಗೊಳಿಸಲಾಗುತ್ತದೆ. ವಾರಕ್ಕೊಮ್ಮೆ ಕೂಲಿ ಪಾವತಿ ಮಾಡಬೇಕಿದ್ದು, ಹದಿನೈದು ದಿನಕ್ಕಂತೂ ಕಡ್ಡಾಯ. ಹಾಗಾಗಿ, ಸುಧಾರಣೆಯ ಅಂಶಗಳನ್ನು ಹೊಂದಿದ್ದು, ಇದರ ಜಾರಿಯಲ್ಲಿ ಮತ್ತೆ ಲೋಪವಾಗಬಾರದು. ಏಕೆಂದರೆ, ಮನರೇಗಾ ಕೂಡ ಉತ್ತಮ ಆಶಯ ಹೊಂದಿದ್ದ ಯೋಜನೆಯೇ. ಅನುಷ್ಠಾನದಲ್ಲಿ ಆದ ಎಡವಟ್ಟುಗಳಿಂದ ನಿರೀಕ್ಷಿತ ಫಲಿತಾಂಶ ಕಾಣಲಿಲ್ಲ.
ಗ್ರಾಮೀಣ ಭಾಗದ ಜನರು ಕೆಲಸ ಹುಡುಕಿಕೊಂಡು ದೂರದ ಮಹಾನಗರಗಳಿಗೆ ಅಥವಾ ನೆರೆಯ ರಾಜ್ಯಗಳಿಗೆ ವಲಸೆ ಹೋಗುವ ಪ್ರಮಾಣ ಹೆಚ್ಚುತ್ತಿದೆ. ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಮುಗಿದ ಮೇಲೆ ದಿನನಿತ್ಯ ಕೆಲಸ ಸಿಗುವುದಿಲ್ಲ ಎಂಬ ಕಾರಣಕ್ಕೆ ಇವರಿಗೆ ಊರುಗಳನ್ನು ತೊರೆಯುವ ಅನಿವಾರ್ಯತೆ ಇದೆ. ಈ ಸಮಸ್ಯೆ ದೇಶದ ಬಹುತೇಕ ರಾಜ್ಯಗಳಲ್ಲಿ ಇದ್ದು, ವಲಸೆ ಸಮಸ್ಯೆ ಗಂಭೀರವಾಗಿದೆ. ಹೀಗೆ ವಲಸೆ ಹೋಗುವ ಕಾರ್ವಿುಕರು ಕೂಡ ನಗರಗಳಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ, ನಮ್ಮ ಗ್ರಾಮಗಳ ಅಗತ್ಯ, ಸ್ಥಳೀಯ ಸಂಪನ್ಮೂಲ ಮತ್ತು ಅಭಿವೃದ್ಧಿಯ ಸಮಗ್ರ ಸ್ವರೂಪವನ್ನು ಗಮನದಲ್ಲಿ ಇರಿಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಹೊಸ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಖಾತರಿಯನ್ನು ನಿರ್ಬಂಧಗಳಿಲ್ಲದೆ ಅಥವಾ ಕಠಿಣ ನಿಯಮಗಳಿಲ್ಲದೆ ಒದಗಿಸಬೇಕು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಗ್ರಾಮೀಣ ಜನರ ಬದುಕು ಸಕಾರಾತ್ಮಕವಾಗಿ ಬದಲಾಗುವ ನಿಟ್ಟಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಯಾಗಲಿ. ಪ್ರತಿಪಕ್ಷಗಳ ಸಲಹೆ, ಅಭಿಪ್ರಾಯವನ್ನು ಆಲಿಸಿ, ಅಗತ್ಯ ಸುಧಾರಣೆಗಳು ಬೇಕಿದ್ದರೆ ಸೇರಿಸುವ ಮೂಲಕ ಮಸೂದೆಯನ್ನು ಮತ್ತಷ್ಟು ಬಲಪಡಿಸಲಿ.