ಸಂಪಾದಕೀಯ: ಹೆದ್ದಾರಿ ಸುರಕ್ಷಿತವಾಗಲಿ

‘ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಳಪೆ ಸ್ಥಿತಿಯ ಬಗ್ಗೆ ದೂರುಗಳು ಬಂದಿದ್ದವು. ಇದರ ನಂತರ 700ರಿಂದ 800 ಯೋಜನೆಗಳ ಪರಿಶೀಲನೆ ನಡೆಸಲಾಯಿತು. ಹೆದ್ದಾರಿಗಳ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.
ಸಂಪಾದಕೀಯ: ಹೆದ್ದಾರಿ ಸುರಕ್ಷಿತವಾಗಲಿ
WEB
Published on: 

‘ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಳಪೆ ಸ್ಥಿತಿಯ ಬಗ್ಗೆ ದೂರುಗಳು ಬಂದಿದ್ದವು. ಇದರ ನಂತರ 700ರಿಂದ 800 ಯೋಜನೆಗಳ ಪರಿಶೀಲನೆ ನಡೆಸಲಾಯಿತು. ಹೆದ್ದಾರಿಗಳ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ದೇಶದ ಆರ್ಥಿಕ ಪ್ರಗತಿಗೆ ವೇಗ ನೀಡಲು ಮತ್ತು ಮೂಲಸೌಕರ್ಯ ಬಲಪಡಿಸಲು ಸುಸಜ್ಜಿತ ಹೆದ್ದಾರಿಗಳ ನಿರ್ಮಾಣ ಅತ್ಯಗತ್ಯ ನಿಜ. ಆದರೆ, ಅದೇ ವೇಗದಲ್ಲಿ ಈ ಹೆದ್ದಾರಿಗಳು ಮೃತ್ಯುಕೂಪಗಳಾಗಿ ಬದಲಾಗುತ್ತಿದ್ದು, ಅಪಘಾತ ಹಾಗೂ ಸಾವು-ನೋವುಗಳ ಪ್ರಮಾಣ ಸಾರ್ವಜನಿಕರಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಆದ್ದರಿಂದ, ಹೆದ್ದಾರಿಗಳನ್ನು ಕೇವಲ ವಿಸ್ತರಿಸುವುದಷ್ಟೇ ಅಲ್ಲ, ಅವುಗಳನ್ನು ಸಂಪೂರ್ಣ ಸುರಕ್ಷಿತವಾಗಿಸುವುದು ಇಂದಿನ ತುರ್ತು ಆದ್ಯತೆಯಾಗಬೇಕಿದೆ.ಕಳೆದೊಂದು ದಶಕದಲ್ಲಿ ದೇಶದಾದ್ಯಂತ ಎಕ್ಸ್​ಪ್ರೆಸ್​ವೇಗಳು ಹಾಗೂ ಚತುಷ್ಪಥ ರಸ್ತೆಗಳ ಜಾಲ ಅಭೂತಪೂರ್ವ ವೇಗದಲ್ಲಿ ಬೆಳೆದಿದೆ. ನಗರಗಳ ನಡುವಿನ ಅಂತರ ಗಂಟೆಗಳಿಂದ ನಿಮಿಷಗಳಿಗೆ ಇಳಿದಿರುವುದು ಸುಲಭ ಪ್ರಯಾಣಕ್ಕೆ ಕಾರಣವಾಗಿದೆ. ಆದರೆ, ರಸ್ತೆ ನಿರ್ವಣದ ವೇಗಕ್ಕೆ ನೀಡಿದಷ್ಟೇ ಮಹತ್ವವನ್ನು ಗುಣಮಟ್ಟ ನಿಯಂತ್ರಣ ಮತ್ತು ವೈಜ್ಞಾನಿಕ ವಿನ್ಯಾಸಕ್ಕೆ ನೀಡಲಾಗಿದೆಯೇ ಎನ್ನುವ ಪ್ರಶ್ನೆ ಸದಾ ಕಾಡುತ್ತಿದೆ. ಲೋಕಾರ್ಪಣೆಯಾದ ಕೆಲವೇ ತಿಂಗಳುಗಳಲ್ಲಿ ರಸ್ತೆಗಳಲ್ಲಿ ಭಾರೀ ಗುಂಡಿಗಳು ಬೀಳುವುದು, ತೇಪೆ ಹಚ್ಚುವಂತಾಗುವುದು ಮತ್ತು ಮೊದಲ ಮಳೆಗೇ ಮೇಲ್ಮೈ ಕೊಚ್ಚಿಹೋಗುವುದು ಸಾಮಾನ್ಯ ದೃಶ್ಯಗಳಾಗಿವೆ. ಇದು ಸಾರ್ವಜನಿಕರ ತೆರಿಗೆ ಹಣದ ಅಪವ್ಯಯವಲ್ಲದೆ ಬೇರೇನೂ ಅಲ್ಲ. ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರು ಹಾಗೂ ಮೇಲ್ವಿಚಾರಣೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ಮತ್ತು ಆರ್ಥಿಕ ದಂಡ ವಿಧಿಸದಿದ್ದರೆ ಅಪಸವ್ಯಗಳು ಮುಂದುವರಿಯುತ್ತಲೇ ಇರುತ್ತವೆ.

ಹೆದ್ದಾರಿಗಳಲ್ಲಿನ ಮಾರಣಾಂತಿಕ ಅಪಘಾತಗಳಿಗೆ ಕೇವಲ ಅತಿಯಾದ ವೇಗ ಅಥವಾ ಚಾಲಕರ ಅಜಾಗರೂಕತೆಯನ್ನಷ್ಟೇ ದೂಷಿಸುವುದು ಸರಿಯಲ್ಲ. ರಸ್ತೆಗಳ ಅವೈಜ್ಞಾನಿಕ ಇಳಿಜಾರು, ತಪ್ಪು ತಿರುವುಗಳು, ಕಳಪೆ ಸೂಚನಾ ಫಲಕಗಳು ಮತ್ತು ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೂ ಪ್ರಮುಖ ಕಾರಣಗಳಾಗಿವೆ. ವಿಶ್ವದರ್ಜೆಯ ರಸ್ತೆಗಳನ್ನು ನಿರ್ವಿುಸುತ್ತಿದ್ದೇವೆ ಎಂದು ಹೆಮ್ಮೆಪಡುವಾಗ, ಅಂತಾರಾಷ್ಟ್ರೀಯ ಮಟ್ಟದ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಪಾಲಿಸುವುದು ಅನಿವಾರ್ಯ. ಹೆದ್ದಾರಿಗಳಿಗೆ ವಾಹನಗಳು ಪ್ರವೇಶಿಸುವ ಮತ್ತು ನಿರ್ಗಮಿಸುವ ದ್ವಾರಗಳ ಸಮರ್ಪಕ ನಿರ್ವಹಣೆ, ಪಾದಚಾರಿಗಳು ಹಾಗೂ ಜಾನುವಾರುಗಳು ಹಠಾತ್ ರಸ್ತೆಗೆ ಬಾರದಂತೆ ತಡೆಯುವ ಭದ್ರತಾ ಬೇಲಿಗಳು, ಅಪಾಯಕಾರಿ ಬ್ಲಾ್ಯಕ್ ಸ್ಪಾಟ್​ಗಳ ಶಾಶ್ವತ ನಿವಾರಣೆ ಮತ್ತು ರಾತ್ರಿ ವೇಳೆಯ ಸಮರ್ಪಕ ದೀಪಾಲಂಕಾರಗಳು ಕಾಮಗಾರಿಯ ಮೂಲ ವಿನ್ಯಾಸದಲ್ಲೇ ಇರಬೇಕು. ಟೋಲ್ ಶುಲ್ಕ ಸಂಗ್ರಹಣೆಯಲ್ಲಿ ತೋರುವ ನಿಖರತೆ ಮತ್ತು ಉತ್ಸಾಹವನ್ನು ರಸ್ತೆಗಳ ದೈನಂದಿನ ನಿರ್ವಹಣೆ ಹಾಗೂ ತುರ್ತು ಆಂಬುಲೆನ್ಸ್ ಸೇವೆ ಒದಗಿಸುವಲ್ಲಿ ತೋರದಿರುವುದು ದೊಡ್ಡ ವೈಪರೀತ್ಯ. ದುಬಾರಿ ಟೋಲ್ ಪಾವತಿಸುವ ಸವಾರನಿಗೆ ಸುಗಮ, ಸುರಕ್ಷಿತ ಹಾಗೂ ತೊಂದರೆರಹಿತ ಪ್ರಯಾಣದ ಹಕ್ಕಿದೆ. ಹೆದ್ದಾರಿ ವಿಸ್ತರಣೆಯ ಅಂಕಿ-ಅಂಶಗಳು ಕೇವಲ ಪ್ರಗತಿಯ ಸಂಕೇತವಲ್ಲ; ಆ ರಸ್ತೆಗಳಲ್ಲಿ ಸಾಗುವ ಪ್ರತಿಯೊಬ್ಬ ನಾಗರಿಕನೂ ಸುರಕ್ಷಿತವಾಗಿ ಗಮ್ಯಸ್ಥಾನ ತಲುಪುವುದೇ ನೈಜ ಅಭಿವೃದ್ಧಿಯ ಮಾನದಂಡ. ಗುಣಮಟ್ಟ ಪರೀಕ್ಷೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸರ್ಕಾರದ ಮಾತು ಗುತ್ತಿಗೆದಾರರ ಉತ್ತರದಾಯಿತ್ವ ಮತ್ತು ರಸ್ತೆ ಸುರಕ್ಷತೆಯ ಅನುಷ್ಠಾನದಲ್ಲಿ ಕೃತಿಯಾಗಿ ಹೊರಹೊಮ್ಮಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net