

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಹೆಸರುಬೇಳೆ ಬೆಳೆದ ರೈತರು ನಡೆಸಿದ ಪ್ರತಿಭಟನೆಯು ಕೃಷಿ ಕ್ಷೇತ್ರದ ದೀರ್ಘಕಾಲದ ಸಂಕೀರ್ಣ ಸಮಸ್ಯೆಯೊಂದನ್ನು ಮತ್ತೆ ಮುನ್ನೆಲೆಗೆ ತಂದಿದೆ. ಬೇಸಿಗೆಯಲ್ಲಿ ಬೆಳೆದ ಹೆಸರುಬೇಳೆಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕ್ವಿಂಟಲ್ಗೆ -₹8,768 ಆಗಿದ್ದರೆ, ಮಾರುಕಟ್ಟೆಯಲ್ಲಿ ಅದು ಕೇವಲ -₹7,000ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಇದರಿಂದ ಕಂಗಾಲಾದ ರೈತರು ಆಕ್ರೋಶ ವ್ಯಕ್ತಪಡಿಸತೊಡಗಿದರು. ಅವರ ಆಕ್ರೋಶವನ್ನು ತಣ್ಣಗಾಗಿಸಲು ಮಧ್ಯಪ್ರದೇಶ ಸರ್ಕಾರವು ಒಟ್ಟು ಉತ್ಪಾದನೆಯ ಶೇ. 25ರಷ್ಟಿದ್ದ ಖರೀದಿ ಮಿತಿಯನ್ನು ಶೇ. 60ಕ್ಕೆ ಏರಿಸಿದೆ. ಆದರೆ, ಇದು ತಾತ್ಕಾಲಿಕ ಶಮನದ ಕ್ರಮವೇ ಹೊರತು, ರೈತರ ಮೂಲಭೂತ ಆರ್ಥಿಕ ಸಮಸ್ಯೆಗೆ ಶಾಶ್ವತ ಉತ್ತರವಲ್ಲ.
ಇಂದು ಪಂಜಾಬ್, ಹರಿಯಾಣದ ಭತ್ತ, ಗೋಧಿ ಬೆಳೆಗಾರರು ಮಾತ್ರವಲ್ಲದೆ, ಬೇಳೆಕಾಳು ಎಣ್ಣೆಕಾಳು ಬೆಳೆಯುವ ವಿವಿಧ ರಾಜ್ಯಗಳ ರೈತರೂ ಎಂಎಸ್ಪಿ ಕೇಳುತ್ತಿದ್ದಾರೆ. ಭಾರತ ಈಗಲೂ ಬೇಳೆಕಾಳು, ಖಾದ್ಯ ತೈಲಗಳಿಗಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಜತೆಗೆ ಇವು ಕಡಿಮೆ ನೀರು, ರಸಗೊಬ್ಬರ ಬಳಸುವ ಬೆಳೆಗಳು. ಇಂತಹ ಬೆಳೆಗಳಿಗೆ ಖಚಿತ ಬೆಂಬಲ ಬೆಲೆ ನೀಡುವುದರಲ್ಲಿ ತರ್ಕವಿದೆ; ಇದರಿಂದ ನೀರು ಹೆಚ್ಚು ಹೀರುವ ಭತ್ತ ಮತ್ತು ಕಬ್ಬಿನಂತಹ ಬೆಳೆಗಳಿಂದ ರೈತರು ಬೇಳೆಕಾಳುಗಳತ್ತ ಮುಖ ಮಾಡಲು ಸಾಧ್ಯವಾಗುತ್ತದೆ.
ಆದರೆ, ಎಲ್ಲ ಬೆಳೆಗಳನ್ನು ಸರ್ಕಾರವೇ ಎಂಎಸ್ಪಿ ದರದಲ್ಲಿ ಖರೀದಿ ಮಾಡುವುದು ಯಾವುದೇ ಸರ್ಕಾರಕ್ಕೂ ಸಾಧ್ಯವಿಲ್ಲದ ಮಾತು. ಅದರಿಂದ ಸರ್ಕಾರದ ಖಜಾನೆಗೆ ಭಾರಿ ಹೊರೆಯಾಗುತ್ತದೆ. ಭೌತಿಕ ಖರೀದಿಯಾಗಲಿ ಅಥವಾ ಬೆಲೆ ವ್ಯತ್ಯಾಸ ಪಾವತಿಯಾಗಲಿ ಭಾರತೀಯ ಕೃಷಿ ರಂಗಕ್ಕೆ ದೀರ್ಘಕಾಲೀನ ಹಾಗೂ ಸುಸ್ಥಿರ ಪರಿಹಾರ ನೀಡಲಾರವು.
ದೇಶದ ಕೃಷಿ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಿದೆ. ರೈತರಿಗೆ ಇಂದು ಬೆಲೆ ಬೆಂಬಲಕ್ಕಿಂತ (ಪ್ರೖೆಸ್ ಸಪೋರ್ಟ್) ಹೆಚ್ಚಾಗಿ ಆದಾಯ ಬೆಂಬಲ (ಇನ್ಕಮ್ ಸಪೋರ್ಟ್) ಬೇಕಾಗಿದೆ. ಎಕರೆಗೆ ಇಂತಿಷ್ಟು ಎಂದು ನಿಗದಿಪಡಿಸಿ ನೀಡುವ ಕನಿಷ್ಠ ಆದಾಯ ಭದ್ರತೆಯು (ಮಿನಿಮನ್ ಇನ್ಕಮ್ ಸಪೋರ್ಟ್-ಎಂಐಎಸ್) ರೈತರಿಗೆ ನೈಜ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ. ಇಂತಹ ನೇರ ಆದಾಯದ ಭರವಸೆ ಸಿಕ್ಕಾಗ, ರೈತರು ಸರ್ಕಾರಿ ಖರೀದಿಯನ್ನು ಕಾಯದೆ ಮಾರುಕಟ್ಟೆಯ ನೈಜ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಸರ್ಕಾರಗಳು ಮಾರುಕಟ್ಟೆಯ ನೈಸರ್ಗಿಕ ಕಾರ್ಯಚಟುವಟಿಕೆಯನ್ನು ತಮ್ಮ ಕೃತಕ ಮಧ್ಯಪ್ರವೇಶದ ಮೂಲಕ ನಿಯಂತ್ರಿಸುವ ಬದಲಿಗೆ, ಮಾರುಕಟ್ಟೆಯನ್ನೇ ಬಲಪಡಿಸುವ ಕೆಲಸ ಮಾಡಬೇಕು. ಕೃಷಿ ಸಂಶೋಧನೆ, ಸುಧಾರಿತ ನೀರಾವರಿ, ಗ್ರಾಮೀಣ ಮೂಲಸೌಕರ್ಯ, ಕೃಷಿ ಉತ್ಪನ್ನ ಸಂಸ್ಕರಣೆ, ಸಮಗ್ರ ಬೆಳೆ ವಿಮೆ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡುವುದೇ ರೈತರಿಗೆ ನೀಡಬಹುದಾದ ಅತ್ಯುತ್ತಮ ಮತ್ತು ದೀರ್ಘಕಾಲೀನ ಬೆಂಬಲ. ಎಂಎಸ್ಪಿ ಹಾಗೂ ಅತಿಯಾದ ಸಬ್ಸಿಡಿಗಳು ಮಾರುಕಟ್ಟೆಯ ಸ್ವರೂಪವನ್ನು ಕೆಡಿಸುವುದಲ್ಲದೆ, ಅಂತಿಮವಾಗಿ ಅನಗತ್ಯ ಆರ್ಥಿಕ ನಷ್ಟಕ್ಕೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ನೇರ ಆದಾಯ ಬೆಂಬಲ ನೀಡುವ ಸುಧಾರಿತ ನೀತಿಗಳನ್ನು ಜಾರಿಗೆ ತರಬೇಕಿದೆ.