ಸಂಪಾದಕೀಯ: ಐತಿಹಾಸಿಕ ಒಪ್ಪಂದ

Editorial
Editorial
Published on
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಅದರ ಪ್ರಕಾರ ಅಮೆರಿಕ ಭಾರತದ ಮೇಲೆ ವಿಧಿಸಿದ್ದ ಶೇಕಡ 50ರಷ್ಟು ಸುಂಕವನ್ನು ಶೇಕಡ 18ಕ್ಕೆ ಇಳಿಸಿರುವುದು ಮಹತ್ವದ ಬೆಳವಣಿಗೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಅಮೆರಿಕಕ್ಕೆ ಬರುವ ಉತ್ಪನ್ನಗಳ ಮೇಲೆ 2025ರ ಏಪ್ರಿಲ್​ನಲ್ಲಿ ಶೇ.25 ಪ್ರತಿಸುಂಕ ಹೇರಿದ್ದರು.
ಅಲ್ಲದೆ, ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುತ್ತಿದೆ ಎಂಬ ಕಾರಣಕ್ಕೆ ಆಗಸ್ಟ್​ನಲ್ಲಿ ಮತ್ತೆ ಶೇ.25 ಸುಂಕ ಹೇರಿದ್ದರು. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಸಂಬಂಧ ಹಲವು ಸುತ್ತಿನ ಮಾತುಕತೆ ನಡೆದಿತ್ತಾದರೂ, ಅದು ನಿರ್ಣಾಯಕ ಹಂತಕ್ಕೆ ಬಂದಿರಲಿಲ್ಲ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಟ್ರಂಪ್ ಆ ಬಳಿಕ ಸಾಮಾಜಿಕ ಜಾಲತಾಣ ‘ಟ್ರೂತ್’ನಲ್ಲಿ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದರ ಬಗ್ಗೆ ಅಧಿಕೃತವಾಗಿ ಘೋಷಿಸಿದರು.
ಭಾರತೀಯ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.50ರಿಂದ 18ಕ್ಕೆ ಇಳಿಸಿರುವ ಹಿನ್ನೆಲೆಯಲ್ಲಿ ಭಾರತದ ರಫ್ತು ವಲಯಕ್ಕೆ ನಿಸ್ಸಂದೇಹವಾಗಿ ಉತ್ತೇಜನ ಸಿಗಲಿದ್ದು, ಜಾಗತಿಕವಾಗಿಯೂ ವ್ಯಾಪಾರ ರಂಗದಲ್ಲಿ ಭಾರತದ ಮನ್ನಣೆ ಹೆಚ್ಚಲಿದೆ. ಚೀನಾಗೆ 37%, ವಿಯೆಟ್ನಾಂಗೆ 20%, ಬಾಂಗ್ಲಾದೇಶಕ್ಕೆ 20%, ಮಲೇಷ್ಯಾ 19%, ಕಾಂಬೋಡಿಯಾ 19%, ಥಾಯ್ಲೆಂಡ್ 19% ಹಾಗೂ ಪಾಕಿಸ್ತಾನಕ್ಕೆ 18%ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತಿದೆ. ಜಾಗತಿಕವಾಗಿ ಅಮೆರಿಕ ವಿರೋಧಿ ಒಕ್ಕೂಟಗಳು ಬಲಗೊಳ್ಳುತ್ತಿರುವುದರಿಂದ ಟ್ರಂಪ್ ಈ ದಿಢೀರ್ ನಿರ್ಧಾರ ಕೈಗೊಂಡರು ಎಂದು ವಿಶ್ಲೇಷಿಸಲಾಗುತ್ತಿದೆ. ಯುರೋಪಿಯನ್ ಒಕ್ಕೂಟದೊಂದಿಗೆ ಭಾರತ ಐತಿಹಾಸಿಕ ವ್ಯಾಪಾರ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಟ್ರಂಪ್ ಮೆತ್ತಗಾಗಿದ್ದಾರೆ.
ಭಾರತ ವಿಶಾಲವಾದ ಮಾರುಕಟ್ಟೆ ಮತ್ತು ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಿರುವುದರಿಂದ ಅಭಿವೃದ್ಧಿಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ವ್ಯಾಪಾರ ಪಾಲುದಾರಿಕೆ ಹೆಚ್ಚಿಸಲು ಒಲವು ತೋರಿವೆ. ಹಾಗಾಗಿ, ಅಮೆರಿಕ ತಡವಾಗಿಯಾದರೂ ಎಚ್ಚೆತ್ತುಕೊಂಡು ಜಾಣ್ಮೆಯ ನಿರ್ಧಾರವನ್ನು ಪ್ರಕಟಿಸಿದೆ.
ಅಮೆರಿಕ ಮತ್ತು ಭಾರತ ಶೀಘ್ರದಲ್ಲೇ ವ್ಯಾಪಾರ ಒಪ್ಪಂದದ ಕುರಿತಂತೆ ಜಂಟಿ ಹೇಳಿಕೆ ಹೊರಡಿಸಲಿದ್ದು, ಆ ಬಳಿಕ ಒಪ್ಪಂದದ ಹೆಚ್ಚಿನ ವಿವರಗಳು ತಿಳಿಯಲಿವೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ‘ಭಾರತದಲ್ಲಿ ಕಾರ್ವಿುಕರ ಸಹಭಾಗಿತ್ವ ಹೆಚ್ಚಿರುವ ಜವಳಿ, ಪ್ಲಾಸ್ಟಿಕ್, ಚಮೋದ್ಯಮ, ಹವಳ ಮತ್ತು ಆಭರಣ, ಸಾವಯವ ರಾಸಾಯನಿಕಗಳು, ರಬ್ಬರ್ ಉತ್ಪನ್ನಗಳು, ಯಂತ್ರೋಪಕರಣಗಳು, ವಿಮಾನ ತಯಾರಿಕಾ ವಲಯಗಳಿಗೆ ಈ ಒಪ್ಪಂದವು ದೊಡ್ಡ ಅವಕಾಶಗಳ ಬಾಗಿಲು ತೆರೆಯಲಿದೆ’ ಎಂದಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸುವ ಬಗ್ಗೆ ಯಾವುದೇ ನಿರ್ಧಾರ ಇನ್ನು ಕೈಗೊಂಡಿಲ್ಲ. ಈ ವಿಷಯದಲ್ಲೂ ಸರ್ಕಾರ ಭಾರತದ ಹಿತವನ್ನು ರಕ್ಷಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ವ್ಯಾಪಾರ ರಂಗದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಿಸಿರುವುದು ಉತ್ತಮ ಬೆಳವಣಿಗೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net