ಸಂಪಾದಕೀಯ; ಕೊಲ್ಲಿ ಕಳವಳ

Editorial
Editorial
Published on
ಮಧ್ಯಪ್ರಾಚ್ಯ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆ ಮುರಿದುಬಿದ್ದಿದೆ. ಎರಡೂ ಪಕ್ಷಗಳು ತಂತಮ್ಮ ಷರತ್ತುಗಳಿಗೆ ಪಟ್ಟುಹಿಡಿದಿದ್ದರಿಂದ ಸಂಧಾನ ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರೊಂದಿಗೆ, ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಮಧ್ಯಪ್ರಾಚ್ಯ ವಲಯದಲ್ಲಿ ನಡೆಯುತ್ತಿರುವ ಸಮರ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದು ಆ ವಲಯದ ದೇಶಗಳು ಮಾತ್ರವಲ್ಲ, ಜಾಗತಿಕವಾಗಿ ಆತಂಕ ಮೂಡಿಸಿದೆ.
ವಿಶ್ವ ಭೂಪಟದಲ್ಲಿ ಸದ್ಯ ಯಾವುದೇ ಮಹತ್ವ ಹೊಂದಿರದಿದ್ದರೂ, ಅಮೆರಿಕ ಮತ್ತು ಇರಾನ್ ತಮ್ಮದೇ ಆದ ಕಾರಣಗಳನ್ನು ಹೊಂದಿರುವುದರಿಂದಾಗಿ ಪಾಕಿಸ್ತಾನವು ಈ ಮಾತುಕತೆಯ ಮಧ್ಯಸ್ಥಿಕೆ ವಹಿಸುವ ಸನ್ನಿವೇಶ ನಿರ್ವಣವಾಯಿತು. ಯಾವುದೇ ಸಂಧಾನ ಸಭೆಯ ಮೇಜಿನಲ್ಲಿ ಕೂಡ್ರುವಾಗ, ಸಂಬಂಧಿಸಿದ ಎರಡೂ ಪಕ್ಷಗಳು ಕೆಲಮಟ್ಟಿಗೆ ಹೊಂದಾಣಿಕೆ ಮತ್ತು ಕೊಡುಕೊಳ್ಳುವಿಕೆಗೆ ತಯಾರಿರಬೇಕಾಗುತ್ತದೆ. ಆದರೆ ಇಲ್ಲಿ ಆರಂಭದಿಂದಲೂ ಆ ಲಕ್ಷಣವೇ ಕಾಣಲಿಲ್ಲ. ಅಮೆರಿಕವು ಇರಾನಿನ ಪರಮಾಣು ಕಾರ್ಯಕ್ರಮ ಸ್ಥಗಿತಕ್ಕೆ ಹಾಗೂ ಹೊಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕೆಂಬ ಪಟ್ಟನ್ನು ಸ್ವಲ್ಪವೂ ಸಡಿಲಿಸಲಿಲ್ಲ. ಆದರೆ ಈ ಇರಾನ್ ಈ ಎರಡೂ ಪ್ರಸ್ತಾವಗಳಿಗೆ ಒಪು್ಪವ ಸಾಧ್ಯತೆಯೇ ಇರಲಿಲ್ಲ.
ಪರಮಾಣು ಕಾರ್ಯಕ್ರಮ ಶಾಂತಿಯುತ ಉದ್ದೇಶಗಳಿಗೆ ಎಂದು ಅದು ವಾದಿಸುತ್ತಿದೆ. ಅಲ್ಲದೆ, ತನಗೆ ಯುದ್ಧನಷ್ಟ ತುಂಬಿಕೊಡಬೇಕೆಂದೂ, ಭವಿಷ್ಯದಲ್ಲಿ ಯುದ್ಧ ನಡೆಯದೆನ್ನುವ ಗ್ಯಾರಂಟಿ ನೀಡಬೇಕೆಂದೂ ಅದು ವಾದಿಸುತ್ತಿದೆ. ಒಟ್ಟಿನಲ್ಲಿ ಮಾತುಕತೆ ಯಾವುದೇ ಪ್ರಗತಿ ಇಲ್ಲದೆ ಮುರಿದುಬಿದ್ದಿದೆ. ಈಗಿರುವ ಪ್ರಶ್ನೆ- ಮುಂದೇನು ಎಂಬುದು. ಅತ್ತ, ಇಸ್ರೇಲ್ ಲೆಬನಾನ್ ಮೇಲೆ ದಾಳಿ ತೀವ್ರಗೊಳಿಸಿದೆ. ಇತ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಮುಜ್ ಜಲಸಂಧಿ ಮೇಲೆ ಅಮೆರಿಕವೇ ಹಿಡಿತ ಸಾಧಿಸಲಿದೆ ಎಂದು ಗುಡುಗಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದ ಯುದ್ಧನೌಕೆಗಳು ಜಲಸಂಧಿಯತ್ತ ಸಾಗುತ್ತಿವೆಯೆಂಬ ವರದಿಗಳಿವೆ.
ಇರಾನ್ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಯುದ್ಧ ಮತ್ತೆ ಜೋರಾಗಬಹುದೇ ಎಂಬ ಅನುಮಾನ ಮೂಡುವಂತಾಗಿದೆ. ಇದು ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಮರವಾಗಿದ್ದರೂ, ಇದರ ಪರಿಣಾಮ ಅನೇಕ ದೇಶಗಳ ಮೇಲೆ ಆಗಿದೆ, ಆಗುತ್ತಿದೆ. ಮುಖ್ಯವಾಗಿ ಈ ವಲಯವು ಜಾಗತಿಕ ದೇಶಗಳಿಗೆ ತೈಲ ಪೂರೈಕೆಯ ಮುಖ್ಯ ಮಾರ್ಗವಾಗಿರುವುದರಿಂದಾಗಿ, ಇಲ್ಲಿ ತೊಂದರೆಯಾದಲ್ಲಿ ಸರಣಿ ಪರಿಣಾಮಗಳು ಉಂಟಾಗುತ್ತವೆ. ತೈಲ ಬೆಲೆ ಏರಿದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಸರಕುಸಾಗಣೆ ವೆಚ್ಚ ಹೆಚ್ಚುತ್ತದೆ. ಆಗ ವಸ್ತುಗಳ ಬೆಲೆ ಏರುವುದಕ್ಕೆ ಹಾದಿಯಾಗುತ್ತದೆ.
ಹೀಗಾಗಿ ಯುದ್ಧಕ್ಕೆ ಸಂಬಂಧವೇ ಇಲ್ಲದ ಯಾವುದೋ ದೂರ ದೇಶದ ಜನಸಾಮಾನ್ಯರು ಕೂಡ ವಿನಾಕಾರಣ ಸಂಕಷ್ಟಕ್ಕೆ ಒಳಗಾಗುವಂತಾಗುತ್ತದೆ. ಇನ್ನು, ಭಾರತ ಸರ್ಕಾರವು ದೇಶದ ಇಂಧನ ಭದ್ರತೆಗೆ ಸಂಬಂಧಿಸಿ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಮಸ್ಯೆ ಆಗದೆಂಬ ಭರವಸೆಯನ್ನು ಜನರಿಗೆ ನೀಡಿದೆ. ಹೀಗಿದ್ದರೂ, ಯುದ್ಧ ಮತ್ತೆ ತೀವ್ರತೆ ಪಡೆದು ಹಲವು ದಿನಗಳ ಕಾಲ ಮುಂದುವರಿದಲ್ಲಿ ಪರಿಸ್ಥಿತಿ ಹೀಗೇ ಇರುತ್ತದೆಂದು ಹೇಳಲಾಗದು. ಸಮರದಲ್ಲಿ ತೊಡಗಿರುವ ದೇಶಗಳು ತಂತಮ್ಮ ಹಿತಾಸಕ್ತಿ ಜೊತೆಗೆ ಜಾಗತಿಕ ಹಿತವನ್ನೂ ಗಮನಿಸಿ ಸಮರ ನಿಲ್ಲಿಸಿದರೆ ಅದು ಜಗತ್ತಿಗೆ ಒಳಿತು ಮಾಡುವ ಸಂಗತಿಯೂ ಹೌದು. ಆ ವಿವೇಕ ಮೂಡೀತೇ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net