ಸಂಪಾದಕೀಯ: ಉತ್ತಮ ನಿರ್ಧಾರ

Good decision
Good decision
Published on
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಡಿ.ಕೆ.ಶಿವಕುಮಾರ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಆಡಳಿತ ಚುರುಕುಗೊಳಿಸುವ ಸಂಬಂಧ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಪ್ರತ್ಯೇಕ ಸಚಿವರನ್ನು ನಿಯೋಜಿಸುವುದಾಗಿ ಘೋಷಿಸಿರುವುದು ಮಹತ್ವದ ಬೆಳವಣಿಗೆ. ಆಧುನೀಕರಣ ಮತ್ತು ತಂತ್ರಜ್ಞಾನದ ಇಂದಿನ ಯುಗದಲ್ಲೂ ಬಹುತೇಕ ಹಳ್ಳಿಗಳು ಹಲವು ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಮೂಲಸೌಕರ್ಯದಿಂದ ವಂಚಿತವಾಗಿವೆ. ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಇಂದಿಗೂ ಹಳ್ಳಿಗಳಿಗೆ ನಿರಂತರವಾಗಿ 14-15 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪರಿಣಾಮ, ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಕಿಲೋಮೀಟರ್​ಗಟ್ಟಲೇ ಸಂಚರಿಸಬೇಕಾದ ದುಸ್ಥಿತಿಯಿದೆ. ಸ್ಥಳೀಯ ಗ್ರಾಮ ಅಥವಾ ತಾಲೂಕು ಪಂಚಾಯಿತಿಗಳಲ್ಲಿ ಜನರು ಸಮಸ್ಯೆ ಹೇಳಿಕೊಂಡರೂ, ಅದಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಯಾರ ಬಳಿ ಸಮಸ್ಯೆ ಹೇಳಿಕೊಳ್ಳುವುದು ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣಿಗರ ಸಮಸ್ಯೆಗಳಿಗೆ ಸಚಿವರೇ ಕಿವಿಯಾದರೆ, ತ್ವರಿತ ಪರಿಹಾರವೂ ಸಿಗಬಹುದು. ಜತೆಗೆ, ಹಳ್ಳಿಗಳ ಚಿತ್ರಣವೂ ಬದಲಾಗಬಹುದು. ಅಭಿವೃದ್ಧಿಯ ಮುಖ್ಯ ವಾಹಿನಿಗೆ ಹಳ್ಳಿಗಳನ್ನು ಕರೆತರುವ, ಗ್ರಾಮಗಳ ಆರ್ಥಿಕ ಚಟುವಟಿಕೆ ಮತ್ತು ಸ್ವಾವಲಂಬನೆ ಹೆಚ್ಚಿಸುವ ಪ್ರಯತ್ನಗಳು ಪರಿಣಾಮಕಾರಿ ನಡೆಯಬೇಕಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿ, ನೇರವಾಗಿ ಸರ್ಕಾರದ ಮಟ್ಟದಲ್ಲೇ ಕುಂದುಕೊರತೆ ನಿವಾರಣೆಯಾಗುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಬಹುದುದಾಗಿದೆ.
ಇದೇ ಸಭೆಯಲ್ಲಿ ಮುಖ್ಯಮಂತ್ರಿಗಳು ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದೇ ಮೊದಲ ಬಾರಿಗೆ ‘ಸಾರ್ವಜನಿಕರ ಕುಂದುಕೊರತೆ ಸಚಿವಾಲಯ’ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ಸಮಸ್ಯೆಗಳನ್ನು ಆಲಿಸಲು ಮತ್ತು ಬೇಡಿಕೆಗಳನ್ನು ಈಡೇರಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮುಂದಾಗಿರುವುದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಮತ್ತು ಆಶಾದಾಯಕ ಹೆಜ್ಜೆಯಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬರುವ ಸಾರ್ವಜನಿಕರು, ಪ್ರತಿಭಟನಾಕಾರರು ಅಥವಾ ವಿವಿಧ ಸಂಘಟನೆಗಳು ತಮ್ಮ ಅಹವಾಲುಗಳನ್ನು ಸಲ್ಲಿಸಲು ಈಗ ಒಂದು ನಿರ್ದಿಷ್ಟ ವೇದಿಕೆ ಸಿಗುತ್ತದೆ. ಒಬ್ಬರೇ ಸಚಿವರು ಇದಕ್ಕೆ ಜವಾಬ್ದಾರರಾಗಿರುವುದರಿಂದ ಸಮಸ್ಯೆಗಳು ಬೇಗನೆ ಇತ್ಯರ್ಥವಾಗುತ್ತವೆ. ನಾಗರಿಕರು ತಮ್ಮ ಅಹವಾಲುಗಳಿಗಾಗಿ ಬೇರೆ ಬೇರೆ ಇಲಾಖೆಗಳ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಎಲ್ಲ ಇಲಾಖೆಗಳ ದೂರುಗಳನ್ನು ಸ್ವೀಕರಿಸಿ ಸಮನ್ವಯಗೊಳಿಸುವ ಕೇಂದ್ರಬಿಂದುವಾಗಿ ಈ ಸಚಿವಾಲಯ ಕೆಲಸ ಮಾಡುತ್ತದೆ.
ಜನರ ಬೇಡಿಕೆಗಳು ಅಥವಾ ಪ್ರತಿಭಟನೆಗಳ ಹಿಂದಿರುವ ಕಾನೂನಾತ್ಮಕ ಸಾಧ್ಯತೆಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸಿ, ಅರ್ಹರಿಗೆ ತಕ್ಷಣ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಪ್ರತ್ಯೇಕ ಸಚಿವಾಲಯವು ಎಲ್ಲ ಇಲಾಖೆಗಳಿಂದ ಬರುವ ದೂರುಗಳ ಮೇಲೆ ನಿಗಾ ಇಡುವುದರಿಂದ, ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಇಲಾಖೆಗಳಲ್ಲಿ ಕಡತಗಳು ಬಾಕಿ ಉಳಿಯುವುದು ಅಥವಾ ಅಧಿಕಾರಿಗಳು ಉದಾಸೀನತೆ ತೋರುವುದಕ್ಕೆ ಈ ಸಚಿವಾಲಯದ ಮೂಲಕ ನೇರ ಕಡಿವಾಣ ಹಾಕಬಹುದು. ಬೆಂಗಳೂರಿನಲ್ಲಷ್ಟೇ ಅಲ್ಲದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಸ್ಥಳೀಯ ಆಡಳಿತಗಳು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಈ ಸಚಿವಾಲಯವು ಮೇಲ್ವಿಚಾರಣೆ ನಡೆಸಲಿದೆ. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಈಗಾಗಲೇ 15ರಿಂದ 25 ದಿನಗಳ ಒಳಗಾಗಿ ಕಾರ್ಯಯೋಜನೆ ಮತ್ತು ಬಾಕಿ ಕೆಲಸಗಳ ವರದಿ ನೀಡಲು ಗಡುವು ವಿಧಿಸಿರುವುದು ಸೂಕ್ತ ಹೆಜ್ಜೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net