ಸಂಪಾದಕೀಯ | ಸುಧಾರಣೆಯತ್ತ ಗಮನವಿರಲಿ

ಸಂಪಾದಕೀಯ ಅಂಕಣ
ಸಂಪಾದಕೀಯ ಅಂಕಣ
Published on

ನವದೆಹಲಿ: ಈ ವರ್ಷದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕೋಲಾಹಲವನ್ನೇ ಉಂಟುಮಾಡಿದ್ದು, ಪ್ರತಿಭಟನೆಗಳೂ ಜೋರಾಗಿ ನಡೆದಿವೆ. ಇದೀಗ ದೆಹಲಿಯಾಚೆಗೂ ಹೋರಾಟ ವಿಸ್ತರಿಸಿದೆ. ಇನ್ನೊಂದೆಡೆ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಈ ವಿಷಯ ಕೈಗೆತ್ತಿಕೊಂಡು ದೆಹಲಿಯಲ್ಲಿ ಸೋಮವಾರ ಹಮ್ಮಿಕೊಂಡ ಸಂಸತ್ ಚಲೋ ಪ್ರತಿಭಟನೆ ಗದ್ದಲಕ್ಕೆ ತಿರುಗಿ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿದ್ದರು. 

ಈ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕರು ಮಂಗಳವಾರ ಪ್ರಧಾನಿ ನಿವಾಸದೆದುರು ಧರಣಿ ನಡೆಸಿದರು. ಆಗ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆ. ನೀಟ್ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಈ ವಿಷಯವಾಗಿ ಮಂಗಳವಾರ ಮೊದಲ ಬಾರಿ ಮಾತನಾಡಿದ್ದು, ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಹಾಗೆಯೇ, ಈ ಸಂಗತಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ, ಯುವಜನರು ಸರಿಯಾದ ದಾರಿಯಲ್ಲಿ ಸಾಗಲು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದೂ ಕಿವಿಮಾತು ಹೇಳಿದ್ದಾರೆ. ಒಟ್ಟಾರೆಯಾಗಿ ನೋಡಿದಾಗ, ನೀಟ್ ವಿಷಯ ರಾಜಕೀಯ ಪಕ್ಷಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಾಡಾಗಿರುವಂತೆ ತೋರುತ್ತಿದೆ. ಯಾವುದೇ ವಿಚಾರದಲ್ಲಿ ಸರ್ಕಾರದ ನೀತಿಗಳು ತಮಗೆ ಸರಿಕಂಡಿಲ್ಲ ಅಥವಾ ಯಾವುದಾದರೂ ಅಕ್ರಮ-ಹಗರಣ ನಡೆದಾಗ ದನಿಯೆತ್ತುವುದು ರಾಜಕೀಯ ಪಕ್ಷಗಳ ಹಕ್ಕು. ಹಾಗೇ, ಸಾಮಾಜಿಕ ಸಂಘಟನೆಗಳಿಗೂ ಪ್ರತಿಭಟಿಸುವ, ಪ್ರಶ್ನಿಸುವ ಹಕ್ಕಿದೆ. ಇದು ಪ್ರಜಾಪ್ರಭುತ್ವವು ತನ್ನ ಪ್ರಜೆಗಳಿಗೆ ಕೊಡಮಾಡಿರುವ ಸವಲತ್ತು. ಇದನ್ನು ಯಾರೂ ನಿರಾಕರಿಸಲಾಗದು. ಆದರೆ ಈ ರೀತಿ ಮಾಡುವಾಗ, ದೇಶದ ಹಿತದೃಷ್ಟಿ ಮುಖ್ಯೋದ್ದೇಶವಾಗಿರಬೇಕು. 

ಅದೇ ವೇಳೆ, ಸಮಾಜಘಾತುಕ ಶಕ್ತಿಗಳು ಸೇರಿಕೊಂಡು ಹೋರಾಟದ ಹಾದಿ ತಪ್ಪಿಸದಂತೆ ಕಟ್ಟೆಚ್ಚರವೂ ಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಶಾಸನಸಭೆಗಳು ಚರ್ಚೆಯ ವೇದಿಕೆಗಳಾಗಿರುತ್ತವೆ. ಅಲ್ಲಿ ತಂತಮ್ಮ ನಿಲುವು, ವಾದಸರಣಿಯನ್ನು ಮಂಡಿಸಿ, ವಿಷಯದ ಸಾಧಕ-ಬಾಧಕ ವಿವೇಚಿಸುವ ಅವಕಾಶ ಇರುತ್ತದೆ. ನೀಟ್ ಪ್ರತಿಭಟನೆಯ ಈ ಸಂದರ್ಭವು ಕೇವಲ ಹಗ್ಗಜಗ್ಗಾಟಕ್ಕೆ ಸೀಮಿತವಾಗದೆ ಸಂಸತ್ತಿನ ಒಳ-ಹೊರಗೆ ರಚನಾತ್ಮಕ ಸಂವಾದಕ್ಕೆ ವೇದಿಕೆಯಾಗಲಿ; ನೀಟ್ ಮಾತ್ರವಲ್ಲ, ಶಿಕ್ಷಣ ರಂಗದ ಒಟ್ಟಾರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಪ್ರಯತ್ನ ಆಗಲೆಂಬುದು ಆಶಯ. ಈಗಂತೂ ತಂತ್ರಜ್ಞಾನದ ನೆರವೂ ಇರುವುದರಿಂದ ಅನುಕೂಲತೆ ಹೆಚ್ಚಿದೆ. 

ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಪರೀಕ್ಷೆಗಳನ್ನು ಹೇಗೆ ಅಚ್ಚುಕಟ್ಟಾಗಿ ನಡೆಸಬಹುದು ಎಂಬುದಕ್ಕೆ ನಮ್ಮ ಕರ್ನಾಟಕದಲ್ಲಿಯೇ ಉತ್ತಮ ನಿದರ್ಶನ ಇದೆ. ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಪ್ರತಿ ವರ್ಷ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಸಿಇಟಿ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಹೊರರಾಜ್ಯಗಳಲ್ಲೂ ಮೆಚ್ಚುಗೆಯ ಮಾತುಗಳಿವೆ. ಹಾಗೇ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ವು ಪರೀಕ್ಷೆ ನಡೆದ ಕೆಲವೇ ಹೊತ್ತಿನಲ್ಲಿ ಫಲಿತಾಂಶ ಪ್ರಕಟಿಸುವ ದಾಖಲೆ ಹೊಂದಿದೆ. ಇಂಥ ಮಾದರಿಗಳನ್ನು ಇತರೆಡೆಯವರೂ ಗಮನಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net