ಸಂಪಾದಕೀಯ: ಪರೀಕ್ಷಾ ವ್ಯವಸ್ಥೆಯ ವೈಫಲ್ಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ಆತಂಕಕಾರಿ ದಿನಗಳಿಗೆ ದೇಶ ಈಗ ಸಾಕ್ಷಿಯಾಗುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳ ಈಡೇರಿಕೆಗೆ ಪೂರಕವಾಗಿ ಕೆಲಸ ಮಾಡಬೇಕಾದ ರಾಷ್ಟ್ರೀಯ ಪರೀಕ್ಷಾ ಮಂಡಳಿಗಳು ಇಂದು ಒಂದಾದ ಮೇಲೊಂದರಂತೆ ಎಡವಟ್ಟುಗಳನ್ನು ಮಾಡಿಕೊಳ್ಳುತ್ತ, ವ್ಯವಸ್ಥೆಯ ಮೇಲಿದ್ದ ನಂಬಿಕೆಯ ನಾಶಕ್ಕೆ ಕಾರಣವಾಗುತ್ತಿವೆ. ಇತ್ತೀಚೆಗಷ್ಟೇ ದೇಶಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಮೌಲ್ಯಮಾಪನದ ಅಕ್ರಮಗಳ ಆಘಾತದಿಂದ ವಿದ್ಯಾರ್ಥಿಗಳು ಹೊರಬರುವ ಮುನ್ನವೇ ಸಿಬಿಎಸ್​ಇ 12ನೇ ತರಗತಿಯ ಮೌಲ್ಯಮಾಪನದಲ್ಲಿ ಭಾರಿ ಲೋಪದೋಷಗಳು ಕಂಡುಬಂದಿವೆ. ನಮ್ಮ ಇಡೀ ಶೈಕ್ಷಣಿಕ ವ್ಯವಸ್ಥೆ ಎಷ್ಟು ಲೋಪಗಳಿಂದ ಕೂಡಿದೆ ಎಂಬುದಕ್ಕೆ ಈ ಸರಣಿ ಅವಘಡಗಳು ಸಾಕ್ಷಿ.

ಸಿಬಿಎಸ್​ಇ ಇತ್ತೀಚೆಗೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಆಧುನೀಕರಿಸುವ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಆನ್​ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿತು. ಸೂಕ್ತ ಸಿದ್ಧತೆ, ಮೂಲಸೌಕರ್ಯಗಳಿಲ್ಲದೆ ತರಲಾದ ಈ ತಾಂತ್ರಿಕ ವ್ಯವಸ್ಥೆ ಇಂದು ಸುಮಾರು 18 ಲಕ್ಷ ವಿದ್ಯಾರ್ಥಿಗಳ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಉತ್ತರ ಪತ್ರಿಕೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಯಲ್ಲೇ ಭಾರಿ ನಿರ್ಲಕ್ಷ್ಯ ವಹಿಸಲಾಗಿದ್ದು, ಮೌಲ್ಯಮಾಪಕರಿಗೆ ಲಭ್ಯವಾದ ಬಹುತೇಕ ಪ್ರತಿಗಳು ಮಸುಕಾಗಿದ್ದವು. ಇದರಿಂದಾಗಿ ಸರಿಯಾದ ಉತ್ತರಗಳಿಗೂ ಅಂಕಗಳು ಸಿಕ್ಕಿಲ್ಲ. ಪರಿಣಾಮವಾಗಿ, ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವಂತಾಗಿದೆ. ಇದು ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡಿದಂತೆ.

ಪ್ರಮುಖ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಿಯುಇಟಿ ಪರೀಕ್ಷೆಯಲ್ಲೂ ತಾಂತ್ರಿಕ ದೋಷಗಳು, ಪರೀಕ್ಷಾ ಕೇಂದ್ರಗಳ ಹಠಾತ್ ಬದಲಾವಣೆ ಮತ್ತು ವಿಳಂಬದಂತಹ ದೂರುಗಳು ಕೇಳಿಬರುತ್ತಿವೆ. ಅತ್ಯಂತ ನಿರ್ಣಾಯಕ ಘಟ್ಟದಲ್ಲಿರುವ ವಿದ್ಯಾರ್ಥಿಗಳನ್ನು ಇಂತಹ ಗೊಂದಲಗಳಿಗೆ ದೂಡುವುದು ಎಷ್ಟು ಸರಿ? ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ಮತ್ತು ಸಿಬಿಎಸ್​ಇಯಂತಹ ಬೃಹತ್ ಸಂಸ್ಥೆಗಳು ಕೇವಲ ಹೊರಗುತ್ತಿಗೆ ಏಜೆನ್ಸಿಗಳನ್ನು ನೆಚ್ಚಿಕೊಂಡು, ಪರೀಕ್ಷೆಯ ಪಾವಿತ್ರ್ಯ ಮತ್ತು ಗುಣಮಟ್ಟವನ್ನು ಹಾಳು ಮಾಡುತ್ತಿವೆ.

ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮಾಫಿಯಾಗಳು ಒಂದೆಡೆ ಸಕ್ರಿಯವಾಗಿದ್ದರೆ, ಮತ್ತೊಂದೆಡೆ ಅಧಿಕಾರಶಾಹಿಯ ಅಸಮರ್ಥತೆಯಿಂದಾಗಿ ಅರ್ಹ ವಿದ್ಯಾರ್ಥಿಗಳಿಗೆ ಸಿಗಬೇಕಾದ ಶ್ರೇಯಸ್ಸು ಸಿಗುತ್ತಿಲ್ಲ. ಸರ್ಕಾರ ಮತ್ತು ಮಂಡಳಿಗಳು ತಕ್ಷಣವೇ ಎಚ್ಚೆತ್ತುಕೊಂಡು ಹೊಣೆಗಾರಿಕೆ ನಿಗದಿ ಮಾಡಬೇಕು. ಲೋಪಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಆನ್​ಸ್ಕ್ರೀನ್ ಮಾರ್ಕಿಂಗ್​ನಂತಹ ವ್ಯವಸ್ಥೆಗಳನ್ನು ಜಾರಿಗೆ ತರುವ ಮುನ್ನ ಮೌಲ್ಯಮಾಪಕರಿಗೆ ಸೂಕ್ತ ತರಬೇತಿ ಮತ್ತು ಗುಣಮಟ್ಟದ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸಬೇಕು. ಇಡೀ ಪರೀಕ್ಷಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಷ್ಕರಿಸಲು ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸ್ವಾಯತ್ತ ಸಮಿತಿಯನ್ನು ರಚಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ವಿಷಾದ ವ್ಯಕ್ತಪಡಿಸುವುದರಿಂದ ಅಥವಾ ಮಾತುಗಳಲ್ಲಿ ಜವಾಬ್ದಾರಿ ಹೊರುವುದರಿಂದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದಿಲ್ಲ. ಸರ್ಕಾರ ತಪ್ಪು ಮಾಡಿದವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸುವ ದೃಢ ಸಂಕಲ್ಪವನ್ನು ಮಾಡಬೇಕು. ಇಲ್ಲದಿದ್ದರೆ, ದೇಶದ ಶೈಕ್ಷಣಿಕ ವ್ಯವಸ್ಥೆಯ ವಿಶ್ವಾಸಾರ್ಹತೆ ಮರುಕಳಿಸಲಾಗದಷ್ಟು ಪ್ರಪಾತಕ್ಕೆ ಕುಸಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net