ಸಂಪಾದಕೀಯ: ರೈತಹಿತಕ್ಕೆ ಒತ್ತು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಶುರುವಾಗಿ ತಿಂಗಳ ಮೇಲಾಯಿತು. ಕದನ ವಿರಾಮದ ಮಾತು ಆಗೀಗ ಕೇಳಿಬರುತ್ತಿದೆ ಬಿಟ್ಟರೆ ಯಾವಾಗ ನಿಲ್ಲುತ್ತದೆ ಎಂಬುದು ಖಚಿತವಿಲ್ಲ. ಯುದ್ಧನಿರತರು ತಂತಮ್ಮ ವಾದ ಮುಂದಿಡುತ್ತ ಏಟು-ಎದುರೇಟಿನ ಮಾತಾಡುತ್ತ ಕದನದ ಕಾವೇರಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ, ಯುದ್ಧದ ದುಷ್ಪರಿಣಾಮಗಳು ಹಲವು ದೇಶಗಳನ್ನು ಕಾಡುತ್ತಿವೆ. ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಆಮದು-ರಫ್ತಿಗೆ ತೊಂದರೆಯಾಗುತ್ತಿದೆ. ಇದರಿಂದ ಸಹಜವಾಗಿ ತೈಲ, ರಸಗೊಬ್ಬರ ಮತ್ತಿತರ ವಸ್ತುಗಳ ಮೇಲೆ ಪರಿಣಾಮ ಆಗುತ್ತಿದೆ. ಹೀಗಾಗಿ ಸರ್ಕಾರಗಳು ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಪೇಕ್ಷಣೀಯ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೃಷಿ ಇಲಾಖೆ ಕೆಲ ಕ್ರಮಗಳನ್ನು ಪ್ರಕಟಿಸಿರುವುದು ಗಮನಾರ್ಹ. ಮುಂಗಾರು ಹಂಗಾಮಿಗೆ ರಸಗೊಬ್ಬರದ ಸಮರ್ಪಕ ಪೂರೈಕೆಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಕೊಲ್ಲಿ ಕದನದ ಕಾರಣಕ್ಕೆ ರಸಗೊಬ್ಬರ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತು ಆಮದಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಗೋಚರಿಸಿದೆ. ಈ ಪರಿಸ್ಥಿತಿ ಎದುರಿಸಲೂ ಇಲಾಖೆ ಮುಂದಾಗಿದೆ. ಇನ್ನೊಂದೆಡೆ, ರಾಜ್ಯದಲ್ಲಿ ಯೂರಿಯಾ ಬಳಕೆ ನಿಯಂತ್ರಿಸಲು ಆಪ್ ಅಭಿವೃದ್ಧಿಪಡಿಸಲಾಗಿದೆ. ರೈತರ ಭೂ ಹಿಡುವಳಿ ಮತ್ತು ಬೆಳೆ ಮಾದರಿ ಆಧರಿಸಿ ಯೂರಿಯಾ ಮಾರಾಟ ನಿಯಂತ್ರಿಸುವುದು ಇದರ ಉದ್ದೇಶ. ಯೂರಿಯಾ ದುರುಪಯೋಗ ತಡೆಗಟ್ಟಲು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಅದೇ ಹೊತ್ತಿಗೆ, ಸಾವಯವ, ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲೂ ಇಲಾಖೆ ಚಿಂತನೆ ನಡೆಸಿದೆ. ‘ವಸುಧಾಮೃತ’ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಸಾವಯವ, ಜೈವಿಕ ಗೊಬ್ಬರ ಒದಗಿಸಲಾಗುತ್ತದೆ. ದೂರಗಾಮಿ ನೆಲೆಯಲ್ಲಿ ಸಾವಯವ ಪದ್ಧತಿಗೆ ಹೆಚ್ಚು ಒತ್ತು ನೀಡಬೇಕಾದ ಕುರಿತು ಹೆಚ್ಚೆಚ್ಚು ರೈತರು ಆಲೋಚಿಸಬೇಕಿದೆ. ಅಂದಾಗ ಸುಸ್ಥಿರ ಕೃಷಿಗೆ ಅನುಕೂಲವಾಗುತ್ತದೆ.

ಕೃಷಿಕರ ನೆರವಿಗಾಗಿ ಸರ್ಕಾರದಲ್ಲಿ ಅನೇಕ ಯೋಜನೆಗಳಿರುತ್ತವೆ. ಆದರೆ ಕೆಲವದರ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ರೈತ ಸಂಜೀವಿನಿ ಯೋಜನೆ ಇದಕ್ಕೊಂದು ಉದಾಹರಣೆ. 1996 ಮಾ.14ರಿಂದ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ಜಾರಿಯಲ್ಲಿದೆ. ರೈತ/ರೈತ ಕುಟುಂಬದವರು ಕೃಷಿ ಚಟುವಟಿಕೆ ಹಾಗೂ ಕೃಷಿ ಉತ್ಪನ್ನ ಮಾರಾಟ ಚಟುವಟಿಕೆಗಳಲ್ಲಿ ತೊಡಗಿರುವಾಗ ಸಾವು ಉಂಟಾದರೆ ಗರಿಷ್ಠ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅಂಗವೈಕಲ್ಯ ಉಂಟಾದರೂ ಪರಿಹಾರ ನೀಡಲಾಗುತ್ತದೆ. ಆದರೆ ಈ ಬಗ್ಗೆ ಕೃಷಿಕರಲ್ಲಿ ಮಾಹಿತಿ ಇಲ್ಲ ಎಂಬುದು ಅಂಕಿಅಂಶಗಳಿಂದ ದೃಢವಾಗುತ್ತದೆ. 2023-24ರಿಂದ 2025-26ರ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 29 ಜನ ರೈತರಿಗಷ್ಟೇ ಈ ಯೋಜನೆಯಡಿ ಪರಿಹಾರ ನೀಡಲಾಗಿದೆ. ಈ ಯೋಜನೆಯಡಿ ನೀಡುವ ಪರಿಹಾರ ಮೊತ್ತ 30 ವರ್ಷಗಳಿಂದ ಒಂದು ಲಕ್ಷ ರೂ. ಅಷ್ಟೇ ಇದ್ದು, ಅದನ್ನು ಗರಿಷ್ಠ 5 ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ವಿಧಾನಪರಿಷತ್​ನಲ್ಲಿ ತಿಳಿಸಿದ್ದಾರೆ. ರೈತ ಸಂಜೀವಿನಿ ಮಾತ್ರವಲ್ಲ, ಇತರ ಸರ್ಕಾರಿ ಯೋಜನೆಗಳ ಬಗ್ಗೆಯೂ ಸರ್ಕಾರದ ಜೊತೆಗೆ ಕೃಷಿ ಸಂಘಟನೆಗಳೂ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net