ಸಂಪಾದಕೀಯ ; ಲೋಪಗಳನ್ನು ನಿವಾರಿಸಿ

ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆ
ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆ
Published on
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್​ಐಆರ್​) ವಿರೋಧಿಸಿ ಪ್ರತಿಪಕ್ಷಗಳ ನಾಯಕರು ಮಂಗಳವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಎಸ್​ಐಆರ್​ ಕುರಿತಂತೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಚರ್ಚೆಯ ಬೇಡಿಕೆಗೆ ಸರ್ಕಾರ ಸಮ್ಮತಿಸಿದ್ದು, ಡಿಸೆಂಬರ್​ 9ರಂದು ಎಸ್​ಐಆರ್​ ಕುರಿತಂತೆ ಲೋಕಸಭೆಯಲ್ಲಿ ಚಿಂತನ&ಮಂಥನ ನಡೆಯಲಿದೆ. "ಮತದಾನ ಪ್ರತಿಯೊಬ್ಬ ನಾಗರಿಕರ ಹಕ್ಕು. ದೇಶದ ಬಡ ಮತ್ತು ದುರ್ಬಲ ಸಮುದಾಯದ ಜನರ ಹಕ್ಕನ್ನು ಕಸಿಯಲು ಎಸ್​ಐಆರ್​ ಅನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಈ ಮೂಲಕ ಚುನಾವಣೆಯನ್ನು ಏಕಪಕ್ಷೀಯವನ್ನಾಗಿ ಮಾಡಲಾಗುತ್ತಿದೆ' ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ. ಎಸ್​ಐಆರ್​ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ ಮತ್ತು ಈ ಪ್ರಕ್ರಿಯೆಯಲ್ಲಿನ ನ್ಯೂನತೆ ಸರಿಪಡಿಸಿ, ಲೋಪಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕಿದೆ. ಮುಖ್ಯವಾಗಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ನಡೆಯಬೇಕು. ರಾಜಕೀಯ ಹಸ್ತಕ್ಷೇಪ ಇರಬಾರದು.
ದೇಶದ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಎಸ್​ಐಆರ್​ ಈ ಹಿಂದೆಯೂ ನಡೆದಿದ್ದು, ಚುನಾವಣಾ ಆಯೋಗ ಕಾಲಕಾಲಕ್ಕೆ ನಡೆಸುತ್ತಲೇ ಬಂದಿರುವ ಸ್ವಾಭಾವಿಕ ಪ್ರಕ್ರಿಯೆ. ಆದರೆ, ಈ ಬಾರಿ ಈ ಪ್ರಕ್ರಿಯೆಯನ್ನೇ ಸಂಕೀರ್ಣ ಮತ್ತು ಕ್ಲಿಷ್ಟಗೊಳಿಸಲಾಗಿದ್ದು, ನೌಕರರಲ್ಲೂ ಅಸಮಾಧಾನ ಮೂಡಿಸಿದೆ. ಗಡುವಿನೊಳಗೆ ಪ್ರಕ್ರಿಯೆ ಮುಗಿಸುವ ಉದ್ದೇಶದಿಂದ ಅತಿಯಾದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದೇಶದಲ್ಲಿ ಇದುವರೆಗೂ ಹೃದಾಯಾಘಾತ ಮತ್ತು ಆತ್ಮಹತ್ಯೆಯಿಂದ 29 ಮತಗಟ್ಟೆ ಅಧಿಕಾರಿಗಳು (ಬಿಎಲ್​ಒ) ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ತೀವ್ರ ದುಃಖದ ಸಂಗತಿ.
ಬೂತ್​ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಪ್ರತಿ ಮನೆಗೂ ತೆರಳಿ ಅರ್ಜಿ (ನಮೂನೆ) ನೀಡಿ, ಅವನ್ನು ಭರ್ತಿ ಮಾಡಿಸಬೇಕು ಮತ್ತು ಭರ್ತಿ ಮಾಡಿದ ಅರ್ಜಿಗಳಲ್ಲಿನ ವಿವರಗಳನ್ನು ಆನ್​ಲೈನ್​ ಮೂಲಕ ತುಂಬಬೇಕು. ಅಲ್ಲದೆ, ಈ ಪ್ರಕ್ರಿಯೆ ಹೇಗೆ ನಡೆಸಬೇಕು, ತಾಂತ್ರಿಕ ತೊಂದರೆಗಳು ಎದುರಾದರೆ ಬಗೆಹರಿಸುವುದು ಹೇಗೆ ಎಂಬ ಕುರಿತಂತೆ ಬಿಎಲ್​ಒಗಳಿಗೆ ಸೂಕ್ತ ತರಬೇತಿ ನೀಡಲಾಗಿಲ್ಲ. ಕೈಪಿಡಿ ನೀಡಲಾಗಿದ್ದರೂ, ಅದರಲ್ಲೂ ಹಲವು ಗೊಂದಲಗಳಿವೆ. ಆ್ಯಪ್​ನಲ್ಲಿ ವಿವರ ಭರ್ತಿ ಮಾಡುವಾಗ ಆ್ಯಪ್​ ಸರಿಯಾಗಿ ಕೆಲಸ ಮಾಡದೆ ಸಿಬ್ಬಂದಿ ಹೈರಾಣಾಗಿದ್ದಾರೆ. ಅಲ್ಲದೆ, ಎಲ್ಲ ಮತದಾರರನ್ನು ಎಸ್​ಐಆರ್​ ಪ್ರಕ್ರಿಯೆಗೆ ಒಳಪಡಿಸಬೇಕಿರುವುದರಿಂದ ಸಂಬಂಧಪಟ್ಟ ಸಿಬ್ಬಂದಿ ಒಂದೇ ದಿನ ನೂರಾರು ಮನೆಗೆ ಭೇಟಿ ನೀಡುವ ಒತ್ತಡವಿದೆ. ಇದು ಪ್ರಾಯೋಗಿಕವಾಗಿ ಸಾಧ್ಯವಾಗದ ಸಂಗತಿ. ಈ ಎಲ್ಲ ಕ್ರಮಗಳಿಂದ ಬೂತ್​ ಮಟ್ಟದ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಿದ್ದು, ಆರೋಗ್ಯದ ಸಮಸ್ಯೆಗಳನ್ನು ಸೃಷ್ಟಿಸಿದೆ. ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ. ಎಸ್​ಐಆರ್​ ಗಡುವನ್ನು ಡಿ.11ರವರೆಗೆ ವಿಸ್ತರಿಸಲಾಗಿರುವುದೂ ಹೌದಾದರೂ, ಪ್ರಜಾತಾಂತ್ರಿಕ ವ್ಯವಸ್ಥೆಯ ಬಹುಮುಖ್ಯ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬಾರದು, ಲೋಪಗಳಿಗೆ ಅವಕಾಶ ನೀಡಬಾರದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net