ಸಂಪಾದಕೀಯ: ಗ್ರಾಹಕ ನ್ಯಾಯಕ್ಕೆ ವೇಗ ಅಗತ್ಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ದೇಶದಲ್ಲಿ ಗ್ರಾಹಕ ಹಕ್ಕುಗಳನ್ನು ರಕ್ಷಿಸಲು ಮತ್ತು ಶೋಷಣೆಮುಕ್ತ ವ್ಯಾಪಾರ ವಹಿವಾಟನ್ನು ಖಚಿತಪಡಿಸಲು ಸ್ಥಾಪಿಸಲಾದ ಗ್ರಾಹಕ ಆಯೋಗಗಳು ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿವೆ. ದೇಶಾದ್ಯಂತ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಗ್ರಾಹಕ ನ್ಯಾಯಾಲಯಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿದ್ದು, ಲಕ್ಷಾಂತರ ಪ್ರಕರಣಗಳು ವಿಲೇವಾರಿಯಾಗದೆ ಧೂಳು ತಿನ್ನುತ್ತಿವೆ. 
ಮೂಲಸೌಕರ್ಯಗಳ ತೀವ್ರ ಅಭಾವದಿಂದಾಗಿ ನ್ಯಾಯ ದೊರಕಿಸುವ ವ್ಯವಸ್ಥೆಯೇ ಮಂದಗತಿಯಲ್ಲಿ ಸಾಗುತ್ತಿದೆ. ಗ್ರಾಹಕ ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬ ನಾಗರಿಕನೂ ತನಗೆ ಆದ ಅನ್ಯಾಯಕ್ಕೆ ತ್ವರಿತ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾನೆ. ಆದರೆ, ಇಲ್ಲಿ ನ್ಯಾಯ ಪಡೆಯಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ವಣವಾಗಿರುವುದು ಅತ್ಯಂತ ವಿಷಾದನೀಯ. ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೂಲ ಉದ್ದೇಶವನ್ನೇ ಇದು ದುರ್ಬಲಗೊಳಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಗ್ರಾಹಕ ಆಯೋಗಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಖಾಲಿ ಹುದ್ದೆಗಳ ಕುರಿತು ಸುಪ್ರೀಂ ಕೋರ್ಟ್ ಸಮಗ್ರ ವರದಿ ಕೋರಿದೆ. ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಕಾನೂನು ಕೇವಲ ಪುಸ್ತಕಗಳಲ್ಲಿ ಉಳಿದರೆ ಸಾಲದು; ಅವುಗಳ ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಾದ ವ್ಯವಸ್ಥೆಯೂ ಬೇಕು. ಆಯೋಗಗಳಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಅಭಾವವಿದ್ದರೆ, ಪ್ರಕರಣಗಳ ವಿಲೇವಾರಿ ವೇಗ ಪಡೆಯುವುದು ಹೇಗೆ? ಪ್ರಸ್ತುತ ಇರುವ ಸಿಬ್ಬಂದಿಯ ಮೇಲೆಯೇ ಅತಿಯಾದ ಕೆಲಸದ ಒತ್ತಡ ಬಿದ್ದು, ನ್ಯಾಯದಾನ ವ್ಯವಸ್ಥೆ ಕುಸಿಯುವ ಹಂತಕ್ಕೆ ತಲುಪಿದೆ.
ಗ್ರಾಹಕರಿಗೆ ಸಕಾಲದಲ್ಲಿ ನ್ಯಾಯ ಒದಗಿಸಬೇಕಾದರೆ ಸರ್ಕಾರಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕಿದೆ. ಮೊದಲ ಹಂತವಾಗಿ, ಆಯೋಗಗಳಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಟ್ಟಡಗಳು, ಪೀಠೋಪಕರಣಗಳು, ಮೂಲಸೌಕರ್ಯಗಳನ್ನು ತಕ್ಷಣವೇ ಒದಗಿಸಬೇಕು. ಪ್ರತಿಯೊಂದು ಆಯೋಗಕ್ಕೂ ಸ್ವಂತ ಕಟ್ಟಡ ಮತ್ತು ಅಗತ್ಯ ಆರ್ಥಿಕ ಅನುದಾನ ನೀಡುವುದು ರಾಜ್ಯ ಸರ್ಕಾರಗಳ ಪ್ರಾಥಮಿಕ ಕರ್ತವ್ಯವಾಗಿದೆ. ಇದಲ್ಲದೆ, ಗರಿಷ್ಠ ಮಟ್ಟದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. 
ಇ-ಫೈಲಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿ, ವರ್ಚುವಲ್ ವಿಚಾರಣೆಗಳಿಗೆ ಆದ್ಯತೆ ನೀಡಬೇಕು. ದೂರದ ಊರುಗಳಿಂದ ಬರುವ ಗ್ರಾಹಕರು ಪ್ರತಿ ಸಲವೂ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲು ಡಿಜಿಟಲ್ ತಂತ್ರಜ್ಞಾನ ವರವಾಗಬಲ್ಲದು. ಪ್ರಕರಣಗಳ ನಿರ್ವಹಣೆ ಮತ್ತು ದಾಖಲೆಗಳ ಸಲ್ಲಿಕೆಯನ್ನು ಸಂಪೂರ್ಣವಾಗಿ ಗಣಕೀಕರಣ ಮಾಡುವುದರಿಂದ ಸಮಯ ಉಳಿತಾಯವಾಗುವುದಲ್ಲದೆ, ಪಾರದರ್ಶಕತೆಯೂ ಹೆಚ್ಚುತ್ತದೆ. ಸರಳ ಹಾಗೂ ತಂತ್ರಜ್ಞಾನ ಆಧಾರಿತ ವಿಚಾರಣಾ ವಿಧಾನಗಳು ಗ್ರಾಹಕರ ಶ್ರಮ, ಸಮಯ ಮತ್ತು ಹಣವನ್ನು ಉಳಿಸುತ್ತವೆ.
ಮಾರುಕಟ್ಟೆಯಲ್ಲಿ ಅನುಚಿತ ವ್ಯಾಪಾರ ವಹಿವಾಟುಗಳು ಮತ್ತು ಸೇವೆಯಲ್ಲಿನ ನ್ಯೂನತೆಗಳು ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಗ್ರಾಹಕ ನ್ಯಾಯಾಲಯಗಳ ಪಾತ್ರ ನಿರ್ಣಾಯಕವಾಗಿದೆ. ಗ್ರಾಹಕರಿಗೆ ತ್ವರಿತ ಮತ್ತು ಪರಿಣಾಮಕಾರಿ ನ್ಯಾಯ ಸಿಕ್ಕಾಗ ಮಾತ್ರವೇ ದೇಶದಲ್ಲಿ ಗ್ರಾಹಕ ಹಕ್ಕುಗಳ ನೈಜ ರಕ್ಷಣೆ ಸಾಧ್ಯ. ಸುಪ್ರೀಂ ಕೋರ್ಟ್ ಸೂಚನೆಯ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು, ತಕ್ಷಣದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗ್ರಾಹಕ ನ್ಯಾಯಪೀಠಗಳಿಗೆ ಜೀವ ತುಂಬುವ ಮೂಲಕ ಸಾರ್ವಜನಿಕರಿಗೆ ಈ ವ್ಯವಸ್ಥೆಯ ಮೇಲಿರುವ ಭರವಸೆಯನ್ನು ಮರುಸ್ಥಾಪಿಸಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net