ಸಂಪಾದಕೀಯ: ಚೀನಾದ ದ್ವಂದ್ವ ನೀತಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಭಾರತ ಮತ್ತು ಚೀನಾದ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಗಡಿಯಲ್ಲಿ ಚೀನಾದ ದ್ವಂದ್ವ ನೀತಿ ಎದ್ದು ಕಾಣುತ್ತಿದೆ. ಒಂದು ಕಡೆ ಶಾಂತಿಯ ಮಂತ್ರ ಜಪಿಸುತ್ತಿರುವ ಚೀನಾ, ಇನ್ನೊಂದು ಕಡೆ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಸದ್ದಿಲ್ಲದೆ ‘ಕ್ಸಿಯಾವೋಕಾಂಗ್’ ಎಂಬ ಸುಸಜ್ಜಿತ ಗಡಿ ಗ್ರಾಮಗಳನ್ನು ನಿರ್ವಿುಸುತ್ತಿದೆ. ನಾಗರಿಕ ವಸತಿಯ ನೆಪದಲ್ಲಿ ನಿರ್ವಣವಾಗುತ್ತಿರುವ ಈ ಗ್ರಾಮಗಳು ವಾಸ್ತವದಲ್ಲಿ ಚೀನಾ ಸೇನೆಗೆ ಕಾರ್ಯತಂತ್ರದ ನೆಲೆಗಳಾಗಿ ಬಳಕೆಯಾಗುವ ಸಾಧ್ಯತೆಯಿದೆ. ಗಡಿಯಲ್ಲಿ ಜನವಸತಿ ಹೆಚ್ಚಿಸುವ ಮೂಲಕ ತನ್ನ ಭೂಪ್ರದೇಶದ ಹಕ್ಕನ್ನು ಬಲಪಡಿಸಿಕೊಳ್ಳುವುದು ಮತ್ತು ಸೇನಾ ಚಟುವಟಿಕೆಗಳಿಗೆ ಪೂರಕ ಮೂಲಸೌಕರ್ಯ ಒದಗಿಸುವುದು ಚೀನಾದ ಈ ಕುತಂತ್ರದ ಹಿಂದಿನ ಮುಖ್ಯ ಉದ್ದೇಶ.

ಶಾಂತಿ ಮಾತುಕತೆಯ ನಡುವೆಯೇ ನಡೆಯುತ್ತಿರುವ ಇಂತಹ ಪ್ರಚೋದನಾಕಾರಿ ಕ್ರಮಗಳು ಉಭಯ ದೇಶಗಳ ನಡುವಿನ ನಂಬಿಕೆಯ ಕೊರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ಹಂತದಲ್ಲಿ ಭಾರತವು ರಾಜತಾಂತ್ರಿಕ ಸಂಯಮದ ಜೊತೆಗೆ ಗಡಿಯಲ್ಲಿ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸುವುದು ಅನಿವಾರ್ಯವಾಗಿದೆ. ಅಂತಾ ರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾದ ಈ ಇಬ್ಬಂದಿ ಧೋರಣೆಯನ್ನು ಬಯಲಿಗೆಳೆಯಬೇಕಾದ ತುರ್ತು ಅಗತ್ಯವಿದೆ.

ತನ್ನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕ್ಸಿಯಾವೋಕಾಂಗ್ ಎಂಬ ಸುಸಜ್ಜಿತ ಗಡಿ ಗ್ರಾಮಗಳನ್ನು ನಿರ್ವಿುಸುತ್ತಿರುವುದು ಡ್ರಾ್ಯಗನ್ ರಾಷ್ಟ್ರದ ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿದೆ. ವಿವಾದಿತ ಪ್ರದೇಶಗಳಲ್ಲಿ ತನ್ನ ಪ್ರಜೆಗಳನ್ನು ವಾಸಿಸುವಂತೆ ಮಾಡುವ ಮೂಲಕ, ಆ ಭೂಮಿ ತನ್ನದೇ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಲು ಚೀನಾ ಯತ್ನಿಸುತ್ತಿದೆ. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಭೂಮಿಯನ್ನು ಅತಿಕ್ರಮಿಸಿ, ಅಲ್ಲಿ ಶಾಶ್ವತ ಕಟ್ಟಡಗಳನ್ನು ನಿರ್ವಿುಸಿ ಸತ್ಯ ಸಂಗತಿಗಳನ್ನು ಬದಲಿಸುವುದು ಇದರ ಉದ್ದೇಶ. ಇಲ್ಲಿ ವಾಸಿಸುವ ಜನರಿಗೆ ಮಿಲಿಟರಿ ತರಬೇತಿ ನೀಡಲಾಗುತ್ತದೆ. ಇವರು ಸೈನ್ಯಕ್ಕೆ ‘ಕಣ್ಣು ಮತ್ತು ಕಿವಿ’ಯಂತೆ ಕೆಲಸ ಮಾಡುತ್ತಾರೆ, ಅಂದರೆ ಗಡಿಯಲ್ಲಿ ಭಾರತೀಯ ಸೈನ್ಯದ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಾರೆ.

ಭಾರತದ ಗಡಿಯ ತೀರಾ ಹತ್ತಿರದಲ್ಲಿ ಚೀನಾದ ಈ ಗ್ರಾಮಗಳು ಇರುವುದರಿಂದ, ಸಂಘರ್ಷದ ಸಮಯದಲ್ಲಿ ಚೀನಾ ಸೇನೆಗೆ ರಸ್ತೆ, ಆಹಾರ ಮತ್ತು ಸಾಗಾಣಿಕೆ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ನಿರ್ಜನವಾಗಿದ್ದ ಗಡಿ ಪ್ರದೇಶಗಳಲ್ಲಿ ಜನವಸತಿ ಹೆಚ್ಚಾದಂತೆ, ಅಲ್ಲಿನ ಭೌಗೋಳಿಕ ಸ್ಥಿತಿಯೇ ಬದಲಾಗಿ ಹೋಗುತ್ತದೆ. ಒಮ್ಮೆ ನಾಗರಿಕರು ನೆಲೆಸಿದ ಮೇಲೆ ಆ ಪ್ರದೇಶವನ್ನು ವಾಪಸ್ ಪಡೆಯುವುದು ರಾಜತಾಂತ್ರಿಕವಾಗಿ ಕಷ್ಟಕರವಾಗುತ್ತದೆ.

ಚೀನಾದ ಕ್ಸಿಯಾವೋಕಾಂಗ್​ಗೆ ಪೈಪೋಟಿ ನೀಡಲು ಭಾರತವು ಅರುಣಾಚಲ ಪ್ರದೇಶ, ಸಿಕ್ಕಿಂನ ಗಡಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು (ರಸ್ತೆ, ಇಂಟರ್ನೆಟ್, ವಿದ್ಯುತ್) ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಗಡಿ ಭಾಗದ ಜನರು ವಲಸೆ ಹೋಗುವುದನ್ನು ತಡೆಯಬಹುದು. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮೂಲಕ ಗಡಿಯಲ್ಲಿ ಸರ್ವಋತು ರಸ್ತೆಗಳು, ಸುರಂಗಗಳು ಮತ್ತು ಸೇತುವೆಗಳನ್ನು ವೇಗವಾಗಿ ನಿರ್ವಿುಸಲಾಗುತ್ತಿದೆ. ಆದರೆ, ಚೀನಾದ ಈ ಏಕಪಕ್ಷೀಯ ಮತ್ತು ಧೂರ್ತ ನಿರ್ಧಾರಗಳನ್ನು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾಗಿ ಪ್ರಶ್ನಿಸಬೇಕಿದೆ. ಚೀನಾದ ಈ ನಡೆಗಳನ್ನು ತಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net