ಇಲ್ಲದೆ ಇರುವ ವಿವಾದಗಳನ್ನು ಸೃಷ್ಟಿಸುವುದು, ಸತ್ಯವನ್ನು ಅಲ್ಲಗಳೆಯುವುದು ಡ್ರ್ಯಾಗನ್ ರಾಷ್ಟ್ರ ಚೀನಾದ ಚಾಳಿಯಾಗಿಬಿಟ್ಟಿದೆ. ಚೀನಾದ ಭಾರತವಿರೋಧಿ ಕಾರ್ಯತಂತ್ರಗಳು ಯಾವಾಗಲೂ ಒಂದಿಲ್ಲೊಂದು ರೂಪದಲ್ಲಿ ದೇಶದ ಗಮನಕ್ಕೆ ಬರುತ್ತಿರುತ್ತವೆ. ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದು, ಆ ರಾಷ್ಟ್ರದೊಂದಿಗೆ ಸ್ನೇಹ ವೃದ್ಧಿಸುವುದು, ಭಾರತದ ಈಶಾನ್ಯ ರಾಜ್ಯಗಳ ಗಡಿಯಲ್ಲಿ ರಸ್ತೆ&ಸೇತುವೆ ಯೋಜನೆಗಳ ಮೂಲಕ ಒತ್ತಡ ಸೃಷ್ಟಿಸುವುದು& ಹೀಗೆ ಒಂದಿಲ್ಲ ಒಂದು ಬಗೆಯಲ್ಲಿ ಕಿರುಕುಳ ನೀಡುತ್ತಲೇ ಇರುತ್ತದೆ. ಮಾತ್ರವಲ್ಲ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಒದಗಿಸಲು ಚೀನಾ ಅಡ್ಡಗಾಲು ಹಾಕುತ್ತಲೇ ಇದೆ. ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆದುಕೊಂಡರೆ ತನ್ನ ಕುತಂತ್ರಗಳಿಗೆ, ಅತಿಯಾದ ವಿಸ್ತರಣಾ ನೀತಿಗೆ ಸೋಲಾಗುತ್ತದೆ ಎಂಬ ಸ್ಪಷ್ಟ ಅರಿವು ಚೀನಾಕ್ಕಿದೆ. ಹಾಗಾಗಿಯೇ, ವಿನಾಕಾರಣ ಅದು ಭಾರತದೊಂದಿಗೆ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿದೆ.