ಸಂಪಾದಕೀಯ; ಜಾಗರೂಕ ನಡೆ ಅಗತ್ಯ

Editorial
Editorial
Published on
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ರಾಜಕೀಯ ಸ್ಥಿತ್ಯಂತರಗಳು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಶಕ್ತಿಯನ್ನು ಹೊಂದಿವೆ. ಭಾರತಕ್ಕೆ ನೇಪಾಳ ನೆರೆರಾಷ್ಟ್ರ ಮಾತ್ರವಲ್ಲ, ಸಾವಿರಾರು ವರ್ಷಗಳ ಸಾಂಸ್ಕೃತಿಕ, ಧಾರ್ವಿುಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿರುವ ಕೊಂಡಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ರಾಜಕೀಯ ಅಸ್ಥಿರತೆ ಮತ್ತು ವಿದೇಶಿ ಶಕ್ತಿಗಳ ಹಸ್ತಕ್ಷೇಪ ಭಾರತದ ಪಾಲಿಗೆ ಕಳವಳಕಾರಿ ಸಂಗತಿಯಾಗಿದೆ.
ನೇಪಾಳದ ರಾಜಕೀಯ ಸದಾ ಚಲನಶೀಲ ಮತ್ತು ಅಸ್ಥಿರತೆಯಿಂದ ಕೂಡಿದೆ. ಅಲ್ಲಿನ ಕಮ್ಯುನಿಸ್ಟ್ ಪಕ್ಷಗಳ ಮೈತ್ರಿ ಮತ್ತು ವಿಘಟನೆಗಳು ಭಾರತಕ್ಕಿಂತ ಹೆಚ್ಚಾಗಿ ಚೀನಾದತ್ತ ವಾಲುವುದು ಭಾರತದ ಪಾಲಿಗೆ ದೊಡ್ಡ ತಲೆನೋವಾಗಿದೆ. ಚೀನಾ ತನ್ನ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ (ಬಿಆರ್​ಐ) ಮೂಲಕ ನೇಪಾಳದಲ್ಲಿ ಮೂಲಸೌಕರ್ಯ ಹೂಡಿಕೆಯನ್ನು ಹೆಚ್ಚಿಸುತ್ತಿದೆ. ಇದು ಕೇವಲ ಆರ್ಥಿಕ ಸಹಾಯವಾಗಿ ಉಳಿಯದೆ, ನೇಪಾಳದ ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ತಂತ್ರವಾಗಿ ಮಾರ್ಪಡುತ್ತಿದೆ. ನೇಪಾಳದಲ್ಲಿ ಚೀನಾದ ಪ್ರಭಾವ ಹೆಚ್ಚಾದಷ್ಟೂ ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದೇ ಇರುತ್ತದೆ.
ಭಾರತ ಮತ್ತು ನೇಪಾಳದ ನಡುವೆ ಸುಮಾರು 1,850 ಕಿಲೋಮೀಟರ್​ಗಳಿಗೂ ಹೆಚ್ಚು ಮುಕ್ತ ಗಡಿ ಇದೆ. ಇದು ಎರಡೂ ದೇಶಗಳ ಜನರ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವುದು ಒಳ್ಳೆಯದಾದರೂ ಇದು ಭಯೋತ್ಪಾದನೆ, ಕಳ್ಳಸಾಗಾಣಿಕೆ ಮತ್ತು ನಕಲಿ ನೋಟು ಜಾಲದಂತಹ ಚಟುವಟಿಕೆಗಳಿಗೆ ದಾರಿಯಾಗಬಾರದು. ನೇಪಾಳದ ರಾಜಕೀಯ ಅಸ್ಥಿರತೆಯ ಲಾಭ ಪಡೆದು ಭಾರತ ವಿರೋಧಿ ಶಕ್ತಿಗಳು ಅಲ್ಲಿ ನೆಲೆಯೂರದಂತೆ ನೋಡಿಕೊಳ್ಳುವುದು ಭಾರತದ ಆದ್ಯತೆಯಾಗಬೇಕು.
ಕೇಂದ್ರ ಸರ್ಕಾರ ತನ್ನ ‘ನೆರೆಹೊರೆ ಮೊದಲು’ (ನೇಬರ್​ಹುಡ್ ಫಸ್ಟ್) ನೀತಿಯಡಿ ನೇಪಾಳದೊಂದಿಗೆ ದೃಢವಾದ ಸಂಬಂಧವನ್ನು ಹೊಂದಲು ಬಯಸುತ್ತದೆ. ಜಲವಿದ್ಯುತ್ ಯೋಜನೆಗಳು, ರೈಲ್ವೆ ಸಂಪರ್ಕ ಮತ್ತು ವ್ಯಾಪಾರ ಒಪ್ಪಂದಗಳ ಮೂಲಕ ನೇಪಾಳದ ಅಭಿವೃದ್ಧಿಗೆ ಭಾರತ ನಿರಂತರವಾಗಿ ಸಹಕರಿಸುತ್ತಿದೆ. ಆದರೆ, ಈ ಸಹಕಾರ ಏಕಪಕ್ಷೀಯವಾಗಿರಬಾರದು. ನೇಪಾಳದ ನಾಯಕತ್ವ ಭಾರತದ ಭದ್ರತಾ ಸೂಕ್ಷ್ಮತೆಗಳನ್ನು ಗೌರವಿಸುವುದು ಅತ್ಯಗತ್ಯ.
ನೇಪಾಳದ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಭಾರತದ ಪರವಾದ ಒಲವು ಮೂಡುವಂತೆ ಮಾಡಬೇಕು. ಭಾರತ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ನೇಪಾಳದ ವಿಶ್ವಾಸ ಗಳಿಸಬೇಕು. ಜನಸಾಮಾನ್ಯರ ಮಟ್ಟದಲ್ಲಿರುವ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ‘ಸಾಫ್ಟ್ ಪವರ್’ಅನ್ನು ಪರಿಣಾಮಕಾರಿಯಾಗಿ ಬಳಸಬೇಕು.
ನೇಪಾಳದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗುವುದು ಭಾರತದ ಹಿತದೃಷ್ಟಿಯಿಂದ ಒಳ್ಳೆಯದು. ಆದರೆ, ಅಲ್ಲಿನ ಆಂತರಿಕ ಬದಲಾವಣೆಗಳು ಚೀನಾದ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಕೆಯಾಗದಂತೆ ಭಾರತ ಜಾಗರೂಕತೆಯಿಂದ ಇರಬೇಕು. ಸೌಹಾರ್ದಯುತ ಸಂಬಂಧದ ಜತೆಗೆ ರಾಷ್ಟ್ರೀಯ ಹಿತಾಸಕ್ತಿಯೇ ಪರಮೋಚ್ಚವಾಗಿರಬೇಕು. ನೇಪಾಳದ ವಿಷಯದಲ್ಲಿ ಭಾವನಾತ್ಮಕತೆಯ ಜತೆಗೆ ವಾಸ್ತವಿಕ ಮತ್ತು ಕಠಿಣ ರಾಜತಾಂತ್ರಿಕತೆಯನ್ನು ಪ್ರದರ್ಶಿಸಬೇಕಾದ ಸಮಯವಿದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net