

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ದೇಶದ ವಿವಿಐಪಿ ಸುರಕ್ಷತಾ ವ್ಯವಸ್ಥೆಯ ಲೋಪಗಳನ್ನು ಮತ್ತೊಮ್ಮೆ ಬಯಲು ಮಾಡಿದೆ. ಪ್ರತಿ ಬಾರಿ ಇಂತಹ ಘಟನೆ ನಡೆದಾಗಲೂ ಸುರಕ್ಷತೆ, ತಾಂತ್ರಿಕತೆ ಮತ್ತು ಶಿಷ್ಟಾಚಾರ ಪಾಲನೆ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಹೆಲಿಕಾಪ್ಟರ್ ಹಾಗೂ ವಿಮಾನಗಳ ಬಳಕೆಯಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಲು ಮತ್ತು ಹವಾಮಾನ ಮುನ್ಸೂಚನೆಯ ನಿರ್ಲಕ್ಷ್ಯವನ್ನು ಸರಿಪಡಿಸಲು ನಾವು ಪದೇ ಪದೇ ಸೋಲುತ್ತಿದ್ದೇವೆ. ಇಂದಿನ ಈ ಘಟನೆಯು ನಮ್ಮ ವೈಮಾನಿಕ ನಿರ್ವಹಣಾ ವ್ಯವಸ್ಥೆಯಲ್ಲಿ ತುರ್ತು ಸುಧಾರಣೆ ಮತ್ತು ತಾಂತ್ರಿಕ ನವೀಕರಣದ ಅಗತ್ಯತೆಯನ್ನು ಬೊಟ್ಟು ಮಾಡಿ ತೋರಿಸುತ್ತಿದೆ.
ಭಾರತದಲ್ಲಿ ರಾಜಕೀಯ ನಾಯಕರ ವಿಮಾನ ಅಥವಾ ಹೆಲಿಕಾಪ್ಟರ್ ಅಪಘಾತಗಳು ಹೊಸದೇನಲ್ಲ. 2001ರಲ್ಲಿ ಮಾಧವರಾವ್ ಸಿಂಧಿಯಾ, 2002ರಲ್ಲಿ ಲೋಕಸಭಾ ಸ್ಪೀಕರ್ ಜಿ.ಎಂ.ಸಿ. ಬಾಲಯೋಗಿ, 2005ರಲ್ಲಿ ಹರಿಯಾಣದ ಸಚಿವ ಓ.ಪಿ. ಜಿಂದಾಲ್, 2009ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಇಂತಹದ್ದೇ ದುರಂತಗಳಲ್ಲಿ ಬಲಿಯಾಗಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿ, 2021ರಲ್ಲಿ ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು ಇಡೀ ದೇಶವನ್ನೇ ನಡುಗಿಸಿತ್ತು. ಈ ಪಟ್ಟಿಗೆ ಅಜಿತ್ ಪವಾರ್ ಅವರ ಹೆಸರು ಸೇರ್ಪಡೆಯಾಗಿದೆ. ಇದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ವರದಿಗಳ ಪ್ರಕಾರ, ಭಾರತದಲ್ಲಿ ಸಂಭವಿಸುವ ವಿವಿಐಪಿ ಹೆಲಿಕಾಪ್ಟರ್ ಅಪಘಾತಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಘಟನೆಗಳು ‘ಮನುಷ್ಯರ ಲೋಪ’ (ಹ್ಯೂಮನ್ ಎರರ್) ಅಥವಾ ಹವಾಮಾನ ಪರಿಸ್ಥಿತಿಯನ್ನು ಸರಿಯಾಗಿ ಅಂದಾಜಿಸದ ಕಾರಣದಿಂದಲೇ ಸಂಭವಿಸುತ್ತವೆ. ಹಳೆಯ ಏರ್ಕ್ರಾಫ್ಟ್ಗಳ ಬಳಕೆ ಮತ್ತು ತಾಂತ್ರಿಕ ನಿರ್ವಹಣೆಯ ಕೊರತೆ ಉಳಿದ ಶೇ. 30ರಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಪ್ರತಿ ವರ್ಷ ವೈಮಾನಿಕ ಭದ್ರತೆಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿದರೂ, ಗಣ್ಯರ ಪಯಣ ಇಂದಿಗೂ ಸುರಕ್ಷಿತವಾಗಿಲ್ಲ ಎಂಬುದು ಕಹಿ ಸತ್ಯ.
ಸಂಚಾರಕ್ಕೆ ಬಳಸುವ ಹೆಲಿಕಾಪ್ಟರ್ ಅಥವಾ ವಿಮಾನಗಳು ಅತ್ಯಾಧುನಿಕ ‘ಗ್ರೌಂಡ್ ಪ್ರಾಕ್ಸಿಮಿಟಿ ವಾರ್ನಿಂಗ್ ಸಿಸ್ಟಮ್ (ಜಿಪಿಡಬ್ಲ್ಯೂಎಸ್) ಮತ್ತು ಬ್ಲಾ್ಯಕ್ ಬಾಕ್ಸ್ ತಂತ್ರಜ್ಞಾನವನ್ನು ಹೊಂದಿರಬೇಕು. ಹಳೆಯ ಮಾದರಿಯ ವಿಮಾನ, ಕಾಪ್ಟರ್ಗಳನ್ನು ಹಂತ ಹಂತವಾಗಿ ಕೈಬಿಡಬೇಕು. ಹವಾಮಾನ ವೈಪರೀತ್ಯವಿದ್ದಾಗ ಯಾವುದೇ ಒತ್ತಡಕ್ಕೆ ಮಣಿಯದೆ ಹಾರಾಟವನ್ನು ರದ್ದುಗೊಳಿಸುವ ಅಧಿಕಾರ ಪೈಲಟ್ಗಳಿಗೆ ಇರಬೇಕು. ವಿವಿಐಪಿಗಳ ತುರ್ತು ಕಾರ್ಯಕ್ರಮಗಳಿಗಿಂತ ‘ಜೀವದ ಸುರಕ್ಷತೆ’ಗೆ ಮೊದಲ ಆದ್ಯತೆ ಸಿಗಬೇಕು. ಕಾಲಕಾಲಕ್ಕೆ ವಿಮಾನಗಳ ಸುರಕ್ಷತಾ ತಪಾಸಣೆ (ಸೇಫ್ಟಿ ಆಡಿಟ್) ನಡೆಯಬೇಕು. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು. ಅಜಿತ್ ಪವಾರ್ ಅವರ ಸಾವು ನಮ್ಮ ವೈಮಾನಿಕ ವ್ಯವಸ್ಥೆಯ ಲೋಪಗಳನ್ನು ಎತ್ತಿತೋರಿಸುತ್ತಿದೆ. ಇನ್ನು ಮುಂದಾದರೂ ಸರ್ಕಾರ ವೈಮಾನಿಕ ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದರೆ, ಇಂತಹ ಘಟನೆಗಳು ಮರುಕಳಿಸುವ ಅಪಾಯ ಇರುತ್ತದೆ.