

ನವದೆಹಲಿ: ಭಾರತೀಯ ರೈಲ್ವೆ ಮಹತ್ವದ ಕ್ಷಣವೊಂದಕ್ಕೆ ಸಜ್ಜಾಗುತ್ತಿದೆ. ಅತಿ ವೇಗದ ರೈಲು ಅಥವಾ ಬುಲೆಟ್ ರೈಲಿನ ಆರಂಭಕ್ಕೆ ದಿನಾಂಕ ಗೊತ್ತುಪಡಿಸಲಾಗಿದ್ದು, 2027ರ ಆಗಸ್ಟ್ 15ರಂದು ಚಾಲನೆ ದೊರೆಯಲಿದೆ. ಮುಂಬೈ-ಅಹಮದಾಬಾದ್ ನಡುವೆ ಈ ರೈಲು ಸಂಚರಿಸಲಿದ್ದು, ಭಾರತದ ಮೊದಲ ಬುಲೆಟ್ ರೈಲು ಎಂಬ ಹೆಗ್ಗಳಿಕೆ ಪಡೆಯಲಿದೆ. ಒಂದೇ ಬಾರಿ ಇಡೀ ಮಾರ್ಗ ಸೇವೆಗೆ ತೆರೆದುಕೊಳ್ಳುವುದಿಲ್ಲ. ಹಂತಹಂತವಾಗಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.
ಮೊದಲ ಹಂತದಲ್ಲಿ ಸೂರತ್ನಿಂದ ಬಿಲಿಮೋರಾವರೆಗೆ ರೈಲು ಸಂಚರಿಸಲಿದೆ. ‘ಆಗಸ್ಟ್ 15ರಂದು ಟಿಕೆಟ್ ಖರೀದಿಸಿ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದೃಢಧ್ವನಿಯಲ್ಲಿ ಹೇಳಿದ್ದಾರೆ. 508 ಕಿಮೀ ಉದ್ದದ ಈ ಮಾರ್ಗವು ಅಂತರ್ನಗರ ಪ್ರಯಾಣವನ್ನು ಸುಲಭಗೊಳಿಸಲಿದೆ; ಪ್ರಯಾಣದ ಅವಧಿಯನ್ನು ಗಮನಾರ್ಹವಾಗಿ ಕಡಿಮೆಗೊಳಿಸಲಿದೆ ಮತ್ತು ಜಾಗತಿಕ ಮಟ್ಟದ ರೈಲು ಸೇವೆಯನ್ನು ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ, ಸ್ಲೀಪರ್ ವ್ಯವಸ್ಥೆಯನ್ನು ಹೊಂದಿರುವ ವಂದೇ ಭಾರತ್ ರೈಲು ಸೇವೆಯನ್ನೂ ಶೀಘ್ರ ಆರಂಭಿಸುವುದಾಗಿ ಸಚಿವ ವೈಷ್ಣವ್ ತಿಳಿಸಿದ್ದಾರೆ.
ವೇಗದಿಂದ ಚಲಿಸುವ ವಂದೇ ಭಾರತ್ ರೈಲಿಗೆ ಈ ಮೂಲಕ ಮತ್ತೊಂದು ಮಜಲು ಸಿಗಲಿದೆ. ‘ತಮ್ಮಕ್ಷೇತ್ರದಲ್ಲಿಯೂ ವಂದೇ ಭಾರತ್ ರೈಲು ಆರಂಭಿಸುವಂತೆ ಬಹುತೇಕ ಎಲ್ಲ ಲೋಕಸಭಾ ಸದಸ್ಯರು ಕೇಳುತ್ತಿದ್ದಾರೆ. ಇದು ಈ ರೈಲಿನ ವಿಶ್ವಾಸಾರ್ಹತೆಗೆ ಸಾಕ್ಷಿ’ಎಂದೂ ಸಚಿವ ವೈಷ್ಣವ್ ಹೇಳಿದ್ದಾರೆ. ಬುಲೆಟ್ ರೈಲನ್ನು ಹೊಂದುತ್ತಿರುವ ದೇಶಗಳಲ್ಲಿ ಭಾರತ ಮೊದಲನೆಯದೇನಲ್ಲ. ಪ್ರಮುಖವಾಗಿ ಏಷ್ಯಾ ಹಾಗೂ ಯೂರೋಪ್ ವಲಯಗಳಲ್ಲಿ 20ಕ್ಕೂ ಅಧಿಕ ದೇಶಗಳಲ್ಲಿ ಬುಲೆಟ್ ರೈಲು ಅಸ್ತಿತ್ವದಲ್ಲಿದ್ದು, ಚೀನಾವು ಅತಿ ಉದ್ದದ ರೈಲ್ವೆ ಜಾಲ ಹೊಂದಿದೆ.
ಸ್ಪೇನ್ ಮತ್ತು ಜಪಾನ್ ನಂತರದ ಸ್ಥಾನಗಳಲ್ಲಿವೆ. ಬುಲೆಟ್ ರೈಲು ಬೃಹತ್ ಯೋಜನೆಯಾಗಿದ್ದು, ಹಣಕಾಸು ಹೊಂದಿಸುವುದು ಮತ್ತು ಭೂಸ್ವಾಧೀನ ದೊಡ್ಡ ಸವಾಲು. ಇದರೊಂದಿಗೆ ಗುಣಮಟ್ಟದ ಕಾಮಗಾರಿಯನ್ನು ಖಚಿತಪಡಿಸಿಕೊಳ್ಳುವುದು ಮತ್ತೊಂದು ಸವಾಲು. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಜಪಾನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಸುಮಾರು 1.20 ಲಕ್ಷ ಕೋಟಿ ರೂ. ಅಂದಾಜು ವೆಚ್ಚವನ್ನು ಹೊಂದಿದೆ. ಕರೊನಾ ಕಾರಣಕ್ಕೆ ಕಾಮಗಾರಿ ಇನ್ನಷ್ಟು ವಿಳಂಬವಾಯಿತು.
ಭಾರತದಂತಹ ದೇಶಕ್ಕೆ ರೈಲುಗಳಿಂದಾಗುವ ಪ್ರಯೋಜನ ದೊಡ್ಡದು. ನಗರ-ನಗರಗಳನ್ನು ಬೆಸೆಯುವ ರೈಲಿನ ಜೊತೆಗೆ, ಮಹಾನಗರಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆಯಿಂದಾಗುವ ಲಾಭ ಅನೇಕ. ಪ್ರಯಾಣ ವೆಚ್ಚ ಉಳಿಸುವುದಲ್ಲದೆ, ಪ್ರಯಾಣದ ಅವಧಿ ಮತ್ತು ಸಂಚಾರ ದಟ್ಟಣೆ ತಗ್ಗಿಸುವಲ್ಲಿಯೂ ಇದರ ಕೊಡುಗೆಯಿದೆ. ಬೆಂಗಳೂರನ್ನೇ ತೆಗೆದುಕೊಂಡರೆ, ಮೆಟ್ರೋ ರೈಲು ಸೇವೆ ಆರಂಭವಾದ ನಂತರದಲ್ಲಿ ಆಗಿರುವ ಬದಲಾವಣೆ ಸ್ಪಷ್ಟಗೋಚರ. ಒಂದು ಕಾಲದಲ್ಲಿ ‘ಚಲಿಸುವ ಶೌಚಗೃಹ’ ಎಂದು ವ್ಯಂಗ್ಯವಾಗಿ ಕರೆಸಿಕೊಳ್ಳುತ್ತಿದ್ದ ಭಾರತೀಯ ರೈಲ್ವೆ, ಕಾಲಕ್ರಮೇಣ ಬದಲಾವಣೆಗೆ ಒಡ್ಡಿಕೊಳ್ಳುತ್ತ ಬುಲೆಟ್ ರೈಲು ಹೊಂದುವ ಹಂತಕ್ಕೆ ಬಂದಿರುವುದು ಸಣ್ಣ ಸಾಧನೆಯಲ್ಲ.
ಹೀಗಿದ್ದರೂ, ಜಾಲ ವಿಸ್ತರಣೆ, ಹಳಿ ಮೇಲ್ದರ್ಜೆಗೇರಿಸುವುದು, ಜಾಗತಿಕ ಮಟ್ಟಕ್ಕೆ ಅನುಗುಣವಾಗಿ ಸೇವೆ ಸುಧಾರಣೆ, ಪ್ರಯಾಣಿಕರ ಸುರಕ್ಷತೆ, ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದು...ಹೀಗೆ ಆಗಬೇಕಾದ ಕೆಲಸಗಳೂ ಸಾಕಷ್ಟಿವೆ ಎಂಬುದನ್ನು ಮರೆಯುವಂತಿಲ್ಲ.