ಸಂಪಾದಕೀಯ: ದೇಶವಿರೋಧಿ ಕೃತ್ಯಗಳಿಗೆ ಅವಕಾಶ ಸಲ್ಲ

ದೇಶದ ಎಲ್ಲ ನಾಗರಿಕರಿಗೆ ಪ್ರತಿಭಟಿಸುವ ಹಕ್ಕನ್ನು ಪ್ರಜಾಪ್ರಭುತ್ವ ನೀಡಿದೆ. ನ್ಯಾಯಯುತ ಬೇಡಿಕೆಗಳಿಗಾಗಿ ಸರಿಯಾದ ಮಾರ್ಗದಲ್ಲಿ ಪ್ರತಿಭಟನೆ ನಡೆಸುವುದು ತಪ್ಪಲ್ಲ. ಆದರೆ, ಪ್ರತಿಭಟನೆಯ ಹೆಸರಿನಲ್ಲಿ ರಾಷ್ಟ್ರವಿರೋಧಿ ಕೃತ್ಯಗಳಿಗೆ ಆಸ್ಪದ ನೀಡುವುದು, ದೇಶದ ವಿರುದ್ಧವೇ ಪಿತೂರಿ ನಡೆಸುವುದು ಖಂಡಿತ ಶಿಕ್ಷಾರ್ಹ ಅಪರಾಧ. "ಬಾಂಗ್ಲಾದೇಶ ನಮಗೆ ದಾರಿ ತೋರಿಸಿದೆ' ಎಂದು ಹೋರಾಟಗಾರ್ತಿ ನೇಹಾ ಬೋರಾ ಸಿಜೆಪಿ ಪ್ರತಿಭಟನೆಯ ವೇಳೆ ಹೇಳಿರುವ ಮಾತುಗಳು ನಿಜಕ್ಕೂ ಆತಂಕಕಾರಿ ಮತ್ತು ಈ ದೇಶದ ಯುವಕರ ದಾರಿ ತಪ್ಪಿಸುವಂಥದು. ಮಾತ್ರವಲ್ಲ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿಯ ದೃಷ್ಟಿಯಿಂದ ತೀವ್ರ ಆತಂಕಕಾರಿಯಾಗಿದೆ.
ಸಂಪಾದಕೀಯ: ದೇಶವಿರೋಧಿ ಕೃತ್ಯಗಳಿಗೆ ಅವಕಾಶ ಸಲ್ಲ
Published on: 

ದೇಶದ ಎಲ್ಲ ನಾಗರಿಕರಿಗೆ ಪ್ರತಿಭಟಿಸುವ ಹಕ್ಕನ್ನು ಪ್ರಜಾಪ್ರಭುತ್ವ ನೀಡಿದೆ. ನ್ಯಾಯಯುತ ಬೇಡಿಕೆಗಳಿಗಾಗಿ ಸರಿಯಾದ ಮಾರ್ಗದಲ್ಲಿ ಪ್ರತಿಭಟನೆ ನಡೆಸುವುದು ತಪ್ಪಲ್ಲ. ಆದರೆ, ಪ್ರತಿಭಟನೆಯ ಹೆಸರಿನಲ್ಲಿ ರಾಷ್ಟ್ರವಿರೋಧಿ ಕೃತ್ಯಗಳಿಗೆ ಆಸ್ಪದ ನೀಡುವುದು, ದೇಶದ ವಿರುದ್ಧವೇ ಪಿತೂರಿ ನಡೆಸುವುದು ಖಂಡಿತ ಶಿಕ್ಷಾರ್ಹ ಅಪರಾಧ. "ಬಾಂಗ್ಲಾದೇಶ ನಮಗೆ ದಾರಿ ತೋರಿಸಿದೆ' ಎಂದು ಹೋರಾಟಗಾರ್ತಿ ನೇಹಾ ಬೋರಾ ಸಿಜೆಪಿ ಪ್ರತಿಭಟನೆಯ ವೇಳೆ ಹೇಳಿರುವ ಮಾತುಗಳು ನಿಜಕ್ಕೂ ಆತಂಕಕಾರಿ ಮತ್ತು ಈ ದೇಶದ ಯುವಕರ ದಾರಿ ತಪ್ಪಿಸುವಂಥದು. ಮಾತ್ರವಲ್ಲ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿಯ ದೃಷ್ಟಿಯಿಂದ ತೀವ್ರ ಆತಂಕಕಾರಿಯಾಗಿದೆ.

ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಕ್ಷೋಭೆ, ಸಾಂವಿಧಾನಿಕ ಬಿಕ್ಕಟ್ಟು ಹಾಗೂ ಹಿಂಸಾತ್ಮಕ ಅರಾಜಕತೆಯನ್ನು ಮಾದರಿಯಾಗಿ ಬಿಂಬಿಸುವುದು ಪ್ರಜಾಸತ್ತಾತ್ಮಕ ಹೋರಾಟದ ಲಕ್ಷಣವಲ್ಲ. ಇಂತಹ ಮಾತುಗಳು ಸುಲಭವಾಗಿ ಯುವಜನರ ಭಾವನೆಗಳನ್ನು ಕೆರಳಿಸಿ, ಅವರನ್ನು ಅರಾಜಕತೆಯ ಹಾದಿಗೆ ತಳ್ಳುವ ಅಪಾಯ ಹೊಂದಿರುತ್ತವೆ. ಯಾವುದೇ ನಾಗರಿಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಮುರಿದುಬೀಳುವಂತೆ ಪ್ರಚೋದಿಸುವುದು ಸ್ವೀಕಾರಾರ್ಹವಲ್ಲ.

ಅಲ್ಲದೆ, ದೇಶೀಯ ಪ್ರತಿಭಟನೆಗಳ ಹಿಂದೆ ವಿದೇಶಿ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆಯೇ ಎಂಬ ಪ್ರಶ್ನೆ ದೀರ್ಘಕಾಲದಿಂದಲೂ ಚರ್ಚೆಯಲ್ಲಿದೆ. "ಪ್ರತಿಭಟನೆಗಳಿಗಾಗಿ ಕೆಜೆಪಿಗೆ ವಿದೇಶದಿಂದ ಅಕ್ರಮ ಹಣಕಾಸು ನೆರವು ಹರಿದುಬರುತ್ತಿದೆ' ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್​ ಆರೋಪಿಸಿರುವುದು ಈ ಆತಂಕಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಈ ಕುರಿತಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿದ್ದು, ಹೋರಾಟದ ಹೆಸರಲ್ಲಿ ರಾಷ್ಟ್ರದ್ರೋಹಿ ಶಕ್ತಿಗಳು ಹುಟ್ಟದಂತೆ ಗಮನ ಹರಿಸಬೇಕಿದೆ.

ಭಾರತದಂತಹ ಬೃಹತ್​ ಮತ್ತು ಪ್ರಗತಿಪರ ಆರ್ಥಿಕತೆಯ ದೇಶದಲ್ಲಿ ಆಂತರಿಕ ಅಸ್ಥಿರತೆ ಸೃಷ್ಟಿಸಲು ಅಂತಾರಾಷ್ಟ್ರೀಯ ಪಟ್ಟಭದ್ರ ಶಕ್ತಿಗಳು ಪ್ರಯತ್ನಿಸುವುದು ಹೊಸತೇನಲ್ಲ. ಸಣ್ಣಪುಟ್ಟ ಅಸಮಾಧಾನಗಳನ್ನೇ ಬಂಡವಾಳವಾಗಿಸಿಕೊಂಡು, ವಿದೇಶಿ ನಿಧಿಯ ಬಲದಿಂದ ದೇಶದಲ್ಲಿ ಬಿರುಕು ಮೂಡಿಸುವ ತಂತ್ರಗಾರಿಕೆ ನಡೆಯುತ್ತಿದ್ದರೆ, ಅದು ಅತ್ಯಂತ ಗಂಭೀರ ಅಪರಾಧವಾಗುತ್ತದೆ. ಆರ್ಥಿಕ ಅಪರಾಧಗಳು ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್​ಸಿಆರ್​ಎ) ಉಲ್ಲಂಘನೆಗಳ ಬಗ್ಗೆ ಸಮಗ್ರ ತನಿಖೆಯಾಗಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರವಿರೋಧಿ ಶಕ್ತಿಗಳು ಸಾಮಾಜಿಕ ಚಳವಳಿಗಳೊಳಗೆ ನುಸುಳದಂತೆ ತಡೆಯುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ.

ದೇಶದ ಸಾರ್ವಭೌಮತೆಗೆ ಸವಾಲೊಡ್ಡುವ, ಹಿಂಸೆಗೆ ಪ್ರಚೋದನೆ ನೀಡುವ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಭಟನೆಗಳಿಗೆ ಹರಿದುಬರುತ್ತಿರುವ ಅಕ್ರಮ ಹಣಕಾಸಿನ ಜಾಲ, ಹವಾಲಾ ಮತ್ತು ವಿದೇಶಿ ಎನ್​ಜಿಒಗಳ ಪಾತ್ರದ ಬಗ್ಗೆ ತನಿಖಾ ಸಂಸ್ಥೆಗಳು ಕಣ್ಣಿಡಬೇಕು. ಯಾವುದೇ ರಾಷ್ಟ್ರವು ಹೊರಗಿನ ಶತ್ರುಗಳಿಗಿಂತ ಹೆಚ್ಚಾಗಿ ಒಳಗಿನ ಅರಾಜಕತೆಯಿಂದ ದುರ್ಬಲಗೊಳ್ಳುತ್ತದೆ. ಪ್ರತಿಭಟನೆಯ ಹಕ್ಕು ಎಷ್ಟು ಪವಿತ್ರವೋ, ದೇಶದ ಭದ್ರತೆ ಮತ್ತು ಸಾರ್ವಭೌಮತೆಯನ್ನು ಕಾಪಾಡುವುದು ಅಷ್ಟೇ ಮಹತ್ವದ್ದು. ಸಾರ್ವಜನಿಕರೂ ಹೋರಾಟಗಳ ಹಿಂದಿರುವ ಅಜೆಂಡಾಗಳನ್ನು ವಿವೇಚನೆಯಿಂದ ಗಮನಿಸಬೇಕು. ಹೋರಾಟದ ಹೆಸರಿನಲ್ಲಿ ಸಮಾಜಘಾತುಕ ಶಕ್ತಿಗಳು ತಲೆಯೆತ್ತದಂತೆ ಜಾಗರೂಕತೆ ವಹಿಸುವುದು ಇಂದಿನ ತುರ್ತು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net