_1774201701006.webp?w=480&auto=format%2Ccompress&fit=max)
_1774201701006.webp?w=480&auto=format%2Ccompress&fit=max)
ಭಯೋತ್ಪಾದನೆಯ ಸ್ವರೂಪ ಬದಲಾಗಿದ್ದು, ಈ ಸಂಘಟನೆಗಳು ನೇಮಕಾತಿಯ ವಿಧಾನವನ್ನೂ ಬದಲಿಸಿಕೊಂಡಿವೆ. ಜಾಗತಿಕ ಭಯೋತ್ಪಾದನೆ ಸೂಚ್ಯಂಕ-2026 ಮಹತ್ವದ ಸಂಗತಿಗಳನ್ನು ಅನಾವರಣಗೊಳಿಸಿದ್ದು, ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ. ಹಿಂದೆಲ್ಲ ಯುವಕರನ್ನು ಒಂದು ಕಡೆ ಕಲೆಹಾಕಿ, ಅವರಿಗೆ ತರಬೇತಿ ನೀಡಿ, ಕೈಗೆ ಬಂದೂಕು ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವೇದಿಕೆಗಳ ಮುಖಾಂತರವೇ ಉಗ್ರರ ಭರ್ತಿ ನಡೆಯುತ್ತಿದ್ದು, ಯುವಕರು ವೇಗವಾಗಿ ಇಂಥ ಸಂಘಟನೆಗಳತ್ತ ಆಕರ್ಷಿತರಾಗುತ್ತಿರುವುದು ಆತಂಕದ ಸಂಗತಿ. ಅಲ್ಲದೆ, ಯುವಕರನ್ನು ಮೂಲಭೂತವಾದದ ಹಾದಿಗೆ ತರಲು ಉಗ್ರ ಸಂಘಟನೆಗಳು ಈಗ ತಿಂಗಳು ಅಥವಾ ವರ್ಷಗಳನ್ನು ವ್ಯಯಿಸುತ್ತಿಲ್ಲ. ಒಂದೆರಡು ವಾರಗಳಲ್ಲೇ ಈ ಪ್ರಕ್ರಿಯೆ ಮುಗಿಸುತ್ತಿದ್ದು, ‘ನೇಮಕಾತಿ’ ವೇಗವನ್ನು ಹೆಚ್ಚಿಸಿವೆ.
ಯುವಕರಲ್ಲಿ ಹಿಂಸೆಯ ಬಗ್ಗೆ ಇರುವ ಭೀತಿಯನ್ನು ಹೋಗಲಾಡಿಸಲು, ಹಿಂಸಾಕೃತ್ಯಗಳನ್ನು ‘ಮೀಮ್್ಸ’ ಮೂಲಕ ಪರಿಚಯಿಸುತ್ತಿವೆ. ಮುಖ್ಯವಾಗಿ, ಆನ್ಲೈನ್ ಗೇಮಿಂಗ್ ಪ್ಲಾಟ್ಫಾಮರ್್ಗಳಲ್ಲಿ ಹದಿಹರೆಯದ ವಯಸ್ಸಿನವರ ಜತೆಗೆ ಸ್ನೇಹ ಬೆಳೆಸಿ, ಕೆಲವೇ ದಿನಗಳಲ್ಲಿ ಅವರ ವಿಶ್ವಾಸ ಗಳಿಸಿ, ಅವರಿಗೆ ಭಯೋತ್ಪಾದಕ ಕೃತ್ಯಗಳಿಗಾಗಿ ತರಬೇತಿ ನೀಡುತ್ತಿವೆ. ಮೂಲಭೂತವಾದಿ ಸಂಘಟನೆಗಳ ಜಾಲವು ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಗುರುತಿಸಿ, ಬಳಿಕ ಅವರನ್ನು ಟೆಲಿಗ್ರಾಮ್ ಅಥವಾ ಸಿಗ್ನಲ್ನಂಥ ಆಪ್ ಮೂಲಕ ಸಂಪರ್ಕ ಮಾಡಿ, ಬ್ರೖೆನ್ ವಾಶ್ ಮಾಡುತ್ತಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಹೆಚ್ಚಿರುವುದು ಕಳವಳದ ವಿಚಾರ.
2025ರಲ್ಲಿ ಜಗತ್ತಿನಾದ್ಯಂತ ಭಯೋತ್ಪಾದಕ ದಾಳಿಗಳಿಗೆ 5,582 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಶೇಕಡ 70ರಷ್ಟು ಸಾವುಗಳು ಕೇವಲ ಐದು ದೇಶಗಳಲ್ಲೇ ಸಂಭವಿಸಿವೆ. ಇಸ್ಲಾಮಿಕ್ ಸ್ಟೇಟ್, ಜಮಾತ್ ನುಸ್ರತ್, ತಹರಿಕ್ ಎ ತಾಲಿಬಾನ್-ಪಾಕಿಸ್ತಾನ್, ಅಲ್ ಶಬಾಬ್- ಇವು ಜಗತ್ತಿನ ಅಪಾಯಕಾರಿ ಉಗ್ರ ಸಂಘಟನೆಗಳಾಗಿ, ಹಿಂಸಾಕೃತ್ಯವನ್ನು ಹೆಚ್ಚಿಸಿವೆ. ಮತ್ತೊಂದೆಡೆ, ಬೇರೆ ರಾಷ್ಟ್ರಗಳಿಗೆ ಭಯೋತ್ಪಾದನೆ ರಫ್ತು ಮಾಡುವ ಪಾಕಿಸ್ತಾನ ಈಗ ಸ್ವತಃ ಭಯೋತ್ಪಾದಕ ದಾಳಿಗಳಿಂದ ನಲುಗಿ ಹೋಗಿದ್ದು ಮಾತ್ರವಲ್ಲದೆ, ವಿಶ್ವದಲ್ಲೇ ಭಯೋತ್ಪಾದನೆಯಿಂದ ಪೀಡಿತವಾದ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 2025ರ ವರ್ಷವೊಂದರಲ್ಲೇ ಪಾಕಿಸ್ತಾನದಲ್ಲಿ 1045 ಉಗ್ರ ದಾಳಿಗಳಾಗಿದ್ದು 1,139 ಜನರು ಬಲಿಯಾಗಿದ್ದಾರೆ. ಇದಲ್ಲದೆ, ಆಫ್ರಿಕಾದ 10ರಲ್ಲಿ 6 ರಾಷ್ಟ್ರಗಳು ಉಗ್ರ ಜಾಲದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿವೆ.
ಭಾರತದಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಶೇಕಡ 43ರಷ್ಟು ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ. ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ನೇಪಾಳದಲ್ಲೂ ಪರಿಸ್ಥಿತಿ ಸುಧಾರಿಸಿದೆ. ಆದರೆ, ಜಾಗತಿಕ ಸ್ತರದಲ್ಲಿ ಉಗ್ರ ಸಂಘಟನೆಗಳ ಕರಾಳ ಜಾಲ ವ್ಯಾಪಿಸುತ್ತಿದ್ದು, ಇದನ್ನು ತಡೆಯಲೇ ಬೇಕಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟು ಮೂಡಿಲ್ಲ ಎಂಬುದು ಬೇಸರದ ಸಂಗತಿ. ಭಯೋತ್ಪಾದನೆ ಎಂಬುದು ಇಡೀ ಜಗತ್ತಿಗೆ ಅಪಾಯಕಾರಿ. ಅದನ್ನು ನಿಗ್ರಹಿಸಲು ಜಾಗತಿಕ ಸಮುದಾಯ ಒಂದಾಗಬೇಕಿದೆ ಮತ್ತು ಹೋರಾಟದ ತಂತ್ರವನ್ನು ಕೂಡ ಬಲಶಾಲಿಯಾಗಿಸಬೇಕಿದೆ. ಆಗ ಮಾತ್ರ, ಭಯೋತ್ಪಾದನೆಮುಕ್ತ ಜಗತ್ತಿನ ಕನಸು ಸಾಕಾರಗೊಳ್ಳಲು ಸಾಧ್ಯ.