ಸಂಪಾದಕೀಯ: ದೂರದೃಷ್ಟಿಯ ಬಜೆಟ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಸತತ ಒಂಬತ್ತನೇ ಬಾರಿ ಬಜೆಟ್ ಮಂಡಿಸುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಸೃಷ್ಟಿಸಿದ್ದಾರೆ. ಜಾಗತಿಕ ವಲಯದಲ್ಲಿ ಅರಾಜಕತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ಸುಂಕ ಸಮರದ ಬಳಿಕ ದೇಶದ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲು ಹಾಗೂ ಬೆಳವಣಿಗೆಗೆ ವೇಗ ನೀಡಲು ವಿತ್ತ ಸಚಿವೆ ಯಾವೆಲ್ಲ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಜನಸಾಮಾನ್ಯರಲ್ಲಿಯೂ ನೆಲೆಸಿತ್ತು.

ಜನಪ್ರಿಯ ಘೋಷಣೆಗಳಿಗೆ ಮುಗಿಬೀಳದೆ, 2047ರ ಹೊತ್ತಲ್ಲಿ ‘ಅಮೃತ್ ಭಾರತ್’ದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ದೂರಗಾಮಿ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ತಕ್ಷಣವೇ ಇವು ಫಲಿತಾಂಶ ನೀಡದಿದ್ದರೂ, ಮುಂಬರುವ ವರ್ಷಗಳಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಪೂರಕ ಹೆಜ್ಜೆಯಾಗಿವೆ. ಪ್ರಸಕ್ತ ವರ್ಷ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದರೂ, ಆ ರಾಜ್ಯಗಳಿಗೆ ಭರ್ಜರಿ ಕೊಡುಗೆಗಳನ್ನು ನೀಡದೆ, ಸಣ್ಣಪುಟ್ಟ ಉಡುಗೊರೆಗಳನ್ನು ಘೋಷಿಸಲಾಗಿದೆ. ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಹಾಗೂ ಸ್ಥಿರತೆ ಕಾಪಾಡುವುದು, ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಮತ್ತು ‘ಎಲ್ಲರ ಜತೆಗೆ ಎಲ್ಲರ ವಿಕಾಸ’ ಈ ಮೂರು ಮಂತ್ರಗಳ ಆಧಾರದ ಮೇಲೆ ಬಜೆಟ್ ರೂಪಿಸಲಾಗಿದ್ದು, ಕ್ಯಾನ್ಸರ್, ಮಧುಮೇಹ ಸೇರಿದಂತೆ 17 ಕಾಯಿಲೆಗಳ ಔಷಧದ ಬೆಲೆ ಅಗ್ಗವಾಗಲಿರುವುದು ಸಮಾಧಾನಕರ ಬೆಳವಣಿಗೆ.

ಬದಲಾಗುತ್ತಿರುವ ತಂತ್ರಜ್ಞಾನದ ವೇಗವನ್ನು ಗ್ರಹಿಸಿ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಬಹುಭಾಷಾ ಎಐ ‘ಭಾರತ್ ವಿಸ್ತಾರ್’ ಮೂಲಕ ರೈತರಲ್ಲಿ ಕೃಷಿ ಸಾಕ್ಷರತೆ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ವ್ಯವಸ್ಥೆ ಪ್ರಗತಿಗೆ ಪೂರಕವಾಗಿದೆ. ಇದೇ ಮೊದಲ ಬಾರಿಗೆ ಕಂಟೆಂಟ್ ರೂಪಿಸುವವರಿಗೆ ಅಂದರೆ ರೀಲ್ ನಿರ್ವಿುಸುವುದನ್ನು ಕಲಿಸಲು 15 ಸಾವಿರ ಶಾಲೆ-ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಶನ್ ಲ್ಯಾಬ್ಸ್

ಗಳನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ. ಮೂರು ಹೊಸ ಆಯುರ್ವೆದಿಕ ಏಮ್್ಸ ಆರಂಭವಾಗಲಿದ್ದು, ಇದರಿಂದ ಪಾರಂಪರಿಕ ವೈದ್ಯಕೀಯ ಪದ್ಧತಿಗೆ ಉತ್ತೇಜನ ದೊರೆಯಲಿದೆ. ಮೂಲಸೌಕರ್ಯ ವೃದ್ಧಿಗೆ ಒತ್ತು ನೀಡಲಾಗಿದ್ದು, ಬಜೆಟ್ ಮೊತ್ತವನ್ನು 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. 20 ಹೊಸ ಜಲಮಾರ್ಗಗಳನ್ನು ಘೋಷಿಸಲಾಗಿದ್ದು, ಇವುಗಳ ಕಾರ್ಯಾರಂಭದಿಂದ ವ್ಯಾಪಾರ-ವಹಿವಾಟಿಗೆ ಅನುಕೂಲವಾಗಲಿದೆ.

‘ಆಪರಷೇನ್ ಸಿಂಧೂರ’ ಕಾರ್ಯಾಚರಣೆಯ ನಂತರ ರಕ್ಷಣಾ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯ ಬಜೆಟ್ ಮೊತ್ತ 5,94,585 ಕೋಟಿ ರೂ.ಗೆ ತಲುಪಿದೆ. ಏಳು ಹೈಸ್ಪೀಡ್ ರೈಲು ಕಾರಿಡಾರ್ ಆರಂಭಗೊಳ್ಳಲಿದ್ದು, ಈ ಪೈಕಿ ಎರಡು ಹೈಸ್ಪೀಡ್ ರೈಲುಗಳು ಕರ್ನಾಟಕ ಮೂಲಕ ಸಂಚರಿಸಲಿವೆ. ಯುವಜನರಲ್ಲಿ ಹೆಚ್ಚುತ್ತಿರುವ ಖಿನ್ನತೆ, ಆತಂಕ, ಉದ್ವಿಗ್ನತೆಯ ಅಂಶಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದ್ದು, ರಾಂಚಿಯಲ್ಲಿ ನಿಮ್ಹಾನ್ಸ್ ತಲೆ ಎತ್ತಲಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ.

ಎಲ್ಲ ರಂಗಗಳ ಕಳವಳಗಳನ್ನು ಅರ್ಥೈಸಿಕೊಂಡು ಮತ್ತು ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಹೊಸ ವಿನ್ಯಾಸದಲ್ಲಿ ಕಾರ್ಯಕ್ರಮಗಳು ರೂಪಿಸಲಾಗಿದ್ದು, ಇದರ ಸ್ಪಷ್ಟ ಚಿತ್ರಣ ಬಜೆಟ್​ನಲ್ಲಿ ದೊರೆಯುತ್ತಿದೆ. ವಿತ್ತೀಯ ಶಿಸ್ತು ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಪೂರಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net