ಸಂಪಾದಕೀಯ: ಭರವಸೆ, ಸವಾಲುಗಳ ಮಿಶ್ರಣ

Editorial
Editorial
Published on
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯ ರಾಜ್ಯದ ಆರ್ಥಿಕತೆಯನ್ನು ಮುನ್ನಡೆಸುವ ಆಶಯ ಮತ್ತು ಪ್ರಾಯೋಗಿಕ ಸವಾಲುಗಳ ನಡುವಿನ ಹಗ್ಗದ ಮೇಲಿನ ನಡಿಗೆಯಂತೆ ಭಾಸವಾಗುತ್ತಿದೆ. ಅತಿ ಹೆಚ್ಚು ಸಲ ಬಜೆಟ್ ಮಂಡಿಸಿದ ಅನುಭವವಿರುವ ಸಿದ್ದರಾಮಯ್ಯ ಅವರು, ಈ ಬಾರಿಯೂ ತಮ್ಮ ಹಳೆಯ ‘ಅಹಿಂದ’ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಚ್ಯುತಿ ಬರದಂತೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಅತಿಯಾದ ಸಾಲದ ಹೊರೆ ಮತ್ತು ಗ್ಯಾರಂಟಿ ಯೋಜನೆಗಳ ನಿರ್ವಹಣೆಯ ಸವಾಲಿನ ನಡುವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಪ್ರಯತ್ನಿಸಿದ್ದಾರೆ.
ಬಜೆಟ್​ನ ಸಿಂಹಪಾಲು ಐದು ಪ್ರಮುಖ ಗ್ಯಾರಂಟಿ ಯೋಜನೆಗಳಿಗೇ ಮೀಸಲಾಗಿರುವುದು ನಿರೀಕ್ಷಿತವೇ ಆಗಿತ್ತು. ಈ ಯೋಜನೆಗಳು ಕೆಳವರ್ಗದ ಜನರ ಕೈಗೆ ನೇರವಾಗಿ ಹಣ ತಲುಪಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡಿರುವುದನ್ನು ನಿರಾಕರಿಸುವಂತಿಲ್ಲ. ಆದರೆ, ಕೇವಲ ಕಲ್ಯಾಣ ಕಾರ್ಯಕ್ರಮಗಳಿಗೇ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುವುದರಿಂದ ರಾಜ್ಯದ ಬಂಡವಾಳ ವೆಚ್ಚದ (ಕ್ಯಾಪಿಟಲ್ ಎಕ್ಸ್​ಪೆಂಡಿಚರ್) ಮೇಲೆ ಪರಿಣಾಮ ಆಗಬಹುದು. ಮೂಲಸೌಕರ್ಯ, ನೀರಾವರಿ ಮತ್ತು ಕೈಗಾರಿಕಾ ವಲಯಕ್ಕೆ ಹೆಚ್ಚಿನ ಅನುದಾನ ಸಿಗದೆ ಹೋದರೆ, ರಾಜ್ಯದ ದೀರ್ಘಕಾಲೀನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯಿದೆ. ಕೃಷಿ ವಲಯಕ್ಕೆ ಈ ಬಾರಿ ಹೊಸ ಆಯಾಮ ನೀಡಲು ಪ್ರಯತ್ನಿಸಲಾಗಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ರೈತರಿಗೆ ಬೆಂಬಲ ನೀಡುವ ಯೋಜನೆಗಳು ಸ್ವಾಗತಾರ್ಹ. ಮುಖ್ಯವಾಗಿ ನೀರಾವರಿ ಯೋಜನೆಗಳ ಪೂರ್ಣಗೊಳಿಸುವಿಕೆಗೆ ನೀಡಿರುವ ಆದ್ಯತೆ ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಸುಧಾರಣೆಗೆ ನೀಡಿರುವ ಅನುದಾನ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸಲು ಪೂರಕವಾಗಿದೆ.
ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಮಳೆನೀರಿನ ಕಾಲುವೆಗಳ ಸುಧಾರಣೆಗೆ ವಿಶೇಷ ಪ್ಯಾಕೇಜ್ ಘೊಷಿಸಿರುವುದು ಬೆಂಗಳೂರಿಗರಿಗೆ ತುಸು ಸಮಾಧಾನ ತರುವ ಸಂಗತಿ. ಜಾಗತಿಕ ಮಟ್ಟದ ನಗರಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ತುಡಿತ ಬಜೆಟ್​ನಲ್ಲಿ ಕಾಣುತ್ತಿದೆ. ಆದರೆ, ಈ ಯೋಜನೆಗಳು ಕೇವಲ ಘೊಷಣೆಯಾಗಿ ಉಳಿಯದೆ, ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ.
ರಾಜ್ಯದ ಒಟ್ಟು ಸಾಲದ ಪ್ರಮಾಣ ಹೆಚ್ಚುತ್ತಿರುವುದು ಆತಂಕದ ಸಂಗತಿ. ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಅಬಕಾರಿ ತೆರಿಗೆಯಂತಹ ಮೂಲಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವುದು ಜನರ ಮೇಲೆ ಪರೋಕ್ಷ ಹೊರೆಯಾಗಿ ಪರಿಣಮಿಸಬಹುದು. ಕೇಂದ್ರದಿಂದ ಬರುವ ತೆರಿಗೆ ಪಾಲಿನ ಬಗ್ಗೆ ಇರುವ ಅಸಮಾಧಾನವನ್ನೂ ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದು, ಇದು ರಾಜ್ಯ-ಕೇಂದ್ರದ ನಡುವಿನ ಆರ್ಥಿಕ ಸಂಘರ್ಷದ ಸೂಚನೆಯೂ ಹೌದು.
ಒಟ್ಟಾರೆ, ಇದು ಜನಪ್ರಿಯತೆ ಮತ್ತು ವಾಸ್ತವದ ನಡುವಿನ ಬಜೆಟ್ ಆಗಿದೆ. ಬಡವರ ಹೊಟ್ಟೆ ತುಂಬಿಸುವ ಇಚ್ಛಾಶಕ್ತಿಯ ಜತೆಗೆ, ರಾಜ್ಯದ ಬೊಕ್ಕಸವನ್ನು ಸುಸ್ಥಿತಿಯಲ್ಲಿಡುವ ದೂರದೃಷ್ಟಿಯೂ ಪ್ರಯತ್ನವೂ ಇದರಲ್ಲಿ ಕಾಣುತ್ತಿದೆ. ಘೊಷಿತ ಯೋಜನೆಗಳು ಕಾಗದದ ಮೇಲಿನ ಅಂಕಿ-ಅಂಶಗಳಾಗಿ
ಉಳಿಯದೆ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ಈ ಬಜೆಟ್​ಗೆ ನೈಜ ಸಾರ್ಥಕತೆ ದೊರೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net