

ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ವಿಧಾನ ಪರಿಷತ್ನ (ಮೇಲ್ಮನೆ) 28 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಕೆಲವೆಡೆ ಮಂಗಳವಾರ ಮತ್ತು ಹಲವೆಡೆ ಬುಧವಾರ ಪ್ರಕಟಗೊಂಡಿದೆ. 28 ಸ್ಥಾನಗಳ ಪೈಕಿ ಆಡಳಿತಾರೂಢ ಎನ್ಡಿಎ 16 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಶೂನ್ಯ ಸಾಧನೆಯನ್ನು ತೋರಿದೆ. ಕಳೆದ ಬಾರಿ ಈ 28 ಸ್ಥಾನಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಗಮನಾರ್ಹ ಅಂಶವೆಂದರೆ, ಈ ಚುನಾವಣೆಗಳನ್ನು ಮತಪತ್ರ ಬಳಸಿ ಮಾಡಲಾಗಿದೆ. ಕಾಂಗ್ರೆಸ್ ಸೇರಿದಂತೆ ಇಡೀ ಐಎನ್ಡಿಐಎ ಒಕ್ಕೂಟವು, ‘ಬಿಜೆಪಿ ಇವಿಎಂ ತಿರುಚಿ ಚುನಾವಣೆಯಲ್ಲಿ ಗೆಲ್ಲುತ್ತ ಬರುತ್ತಿದೆ’ ಎಂದು ಆರೋಪಿಸುತ್ತಿದೆ.
ಅಲ್ಲದೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಮತಪತ್ರದ ಮೂಲಕ ನಡೆಸಬೇಕೆಂದು ಒತ್ತಾಯಿಸುತ್ತಿದೆ. ಹಾಗಾಗಿಯೇ, ಫಲಿತಾಂಶ ಪ್ರಕಟಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕದಲ್ಲಿ 28 ಸ್ಥಾನಗಳಿಗೆ ಎಂಎಲ್ಸಿ ಚುನಾವಣೆಗಳು ನಡೆದವು. ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕ ನಡೆದವು. ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿರಬಹುದು ಎಂದು ಊಹಿಸಿ?’ ಎಂದು ವ್ಯಂಗ್ಯವಾಡಿದ್ದಾರೆ.
ಮತಪತ್ರವೇ ಇರಲಿ, ಇವಿಎಂ ಇರಲಿ ಮತದಾರ ನೀಡಿದ ತೀರ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂಬ ಮಹತ್ವದ ಸಂದೇಶವನ್ನು ಈ ಫಲಿತಾಂಶ ಎಲ್ಲ ರಾಜಕೀಯ ಪಕ್ಷಗಳಿಗೂ ರವಾನಿಸಿದೆ. ಕರ್ನಾಟಕದ ಎಲ್ಲ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ್ದು, ಮೂರರಲ್ಲಿ ಬಿಜೆಪಿ ಗೆದ್ದಿದ್ದರೆ, ಒಂದು ಕ್ಷೇತ್ರ ಜಾತ್ಯತೀತ ಜನತಾದಳದ (ಜೆಡಿಎಸ್) ಪಾಲಾಗಿದೆ. ಸೋಲಿನ ದವಡೆಯಿಂದ ಪಾರಾಗಿರುವ ಕರ್ನಾಟಕ ಬಿಜೆಪಿಗೆ ಸಹಜವಾಗಿಯೇ ಇದು ಉತ್ಸಾಹವನ್ನು ಹೆಚ್ಚಿಸಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಪ್ರಜೆಗಳ ಒಲವು-ನಿಲುವುಗಳು, ಸಾಮಾಜಿಕ ಅಸಮಾಧಾನಗಳು ಮತ್ತು ರಾಜಕೀಯ ನಿರೀಕ್ಷೆಗಳ ನೈಜ ದಿಕ್ಸೂಚಿಯಾಗಿರುತ್ತವೆ.
ಈ ನಿಟ್ಟಿನಲ್ಲಿ, ರಾಜ್ಯಗಳ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳು ವಿಶಿಷ್ಟ ಹಾಗೂ ಮಹತ್ವದ ಸ್ಥಾನವನ್ನು ಪಡೆದಿವೆ. ಸಮಾಜದ ಪ್ರಜ್ಞಾವಂತರು, ಶಿಕ್ಷಕರು, ತಜ್ಞರು ಮತ್ತು ಬುದ್ಧಿಜೀವಿಗಳಿಗೆ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ಇರಬೇಕು ಎಂಬ ಉದಾತ್ತ ಆಶಯದೊಂದಿಗೆ ಈ ಕ್ಷೇತ್ರಗಳನ್ನು ರೂಪಿಸಲಾಗಿದೆ. ಹೀಗಾಗಿ, ಈ ಕ್ಷೇತ್ರಗಳು ಸಾರ್ವತ್ರಿಕ ಚುನಾವಣೆಗಳಿಗಿಂತ ಭಿನ್ನವಾದ, ವಿದ್ಯಾವಂತರು, ಸರ್ಕಾರಿ ಮತ್ತು ಖಾಸಗಿ ನೌಕರರು, ಪ್ರಾಧ್ಯಾಪಕರು ಹಾಗೂ ಯುವ ಪದವೀಧರರನ್ನೊಳಗೊಂಡ ವಿಶಿಷ್ಟ ಮತದಾರರ ಸಮುದಾಯವನ್ನು ಹೊಂದಿವೆ. ಹಾಗಾಗಿ, ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಸಾಂಪ್ರದಾಯಿಕ ರಾಜಕೀಯ ಸಮೀಕರಣಗಳನ್ನು ಮೀರಿ, ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಸಂದೇಶವನ್ನು ರವಾನಿಸಿವೆ.
ಕರ್ನಾಟಕದಲ್ಲಿ ಶಿಕ್ಷಕರು ಮತ್ತು ನೌಕರರು ದೀರ್ಘಕಾಲದಿಂದ ಇರಿಸಿರುವ ನ್ಯಾಯಯುತ ಹಾಗೂ ಮೂಲಭೂತ ಬೇಡಿಕೆಗಳು ಈಡೇರದ್ದರಿಂದ ಮತದಾರರಲ್ಲಿ ಅಸಮಾಧಾನ ಮೂಡಿದೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಯ ಕುರಿತ ನಿರಂತರ ಹೋರಾಟ, ವೇತನ ತಾರತಮ್ಯ ನಿವಾರಣೆ, ವರ್ಗಾವಣೆ ನೀತಿಯಲ್ಲಿನ ಗೊಂದಲಗಳು ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳ ಸಿಬ್ಬಂದಿಯ ಉದ್ಯೋಗ ಭದ್ರತೆಯಂತಹ ಸಮಸ್ಯೆಗಳಿಗೆ ಆಳುಗರು ಸ್ಪಷ್ಟ ಪರಿಹಾರ ಒದಗಿಸಬೇಕಿದೆ.