ಸಂಪಾದಕೀಯ: ಸೈಬರ್​ ಸುರತೆಗೆ ದಿಟ್ಟ ಹೆಜ್ಜೆ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್​ ಕ್ರಾಂತಿಯ ಜತೆಗೆ ಸೈಬರ್​ ಅಪರಾಧಗಳ ಜಾಲವೂ ಹೆಮ್ಮರವಾಗಿ ಬೆಳೆದಿದೆ. ಅಪರಿಚಿತ ಸಂಖ್ಯೆಗಳಿಂದ ಬರುವ ಒಂದೇ ಒಂದು ನಕಲಿ ಕರೆ ಸಾಮಾನ್ಯ ಜನರ ಜೀವಮಾನದ ಗಳಿಕೆಯನ್ನು ಕ್ಷಣಮಾತ್ರದಲ್ಲಿ ಕಸಿದುಕೊಳ್ಳುತ್ತಿರುವ ಆತಂಕಕಾರಿ ದಿನಗಳಿವು.
ಸಂಪಾದಕೀಯ: ಸೈಬರ್​ ಸುರತೆಗೆ ದಿಟ್ಟ ಹೆಜ್ಜೆ
Published on: 

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್​ ಕ್ರಾಂತಿಯ ಜತೆಗೆ ಸೈಬರ್​ ಅಪರಾಧಗಳ ಜಾಲವೂ ಹೆಮ್ಮರವಾಗಿ ಬೆಳೆದಿದೆ. ಅಪರಿಚಿತ ಸಂಖ್ಯೆಗಳಿಂದ ಬರುವ ಒಂದೇ ಒಂದು ನಕಲಿ ಕರೆ ಸಾಮಾನ್ಯ ಜನರ ಜೀವಮಾನದ ಗಳಿಕೆಯನ್ನು ಕ್ಷಣಮಾತ್ರದಲ್ಲಿ ಕಸಿದುಕೊಳ್ಳುತ್ತಿರುವ ಆತಂಕಕಾರಿ ದಿನಗಳಿವು. ಇಂತಹ ಸಂದಿಗ್ಧ ಕಾಳಘಟ್ಟದಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆಯು ದೇಶದ ಎಲ್ಲ 4ಜಿ ಮತ್ತು 5ಜಿ ಮೊಬೈಲ್​ ನೆಟ್​ವರ್ಕ್​ಗಳಲ್ಲಿ 2026ರ ನವೆಂಬರ್​ 1ರಿಂದ ಕಾಲಿಂಗ್​ ನೇಮ್​ ಪ್ರೆಸೆಂಟೇಶನ್​ (ಸಿಎನ್​ಎಪಿ) ಸೇವೆಯನ್ನು ಕಡ್ಡಾಯಗೊಳಿಸಲು ಮುಂದಾಗಿರುವುದು ಅತ್ಯಂತ ಸಕಾಲಿಕ ಹಾಗೂ ಶ್ಲಾಘನೀಯ ಹೆಜ್ಜೆ.

ಇಲ್ಲಿಯವರೆಗೆ ಅಪರಿಚಿತ ಕರೆಗಳನ್ನು ಗುರುತಿಸಲು ಸಾರ್ವಜನಿಕರು "ಟ್ರೂಕಾಲರ್​' ನಂತಹ ಥರ್ಡ್-ಪಾರ್ಟಿ ಆ್ಯಪ್​ಗಳ ಮೇಲೆ ಅವಲಂಬಿತರಾಗಬೇಕಿತ್ತು. ಆದರೆ, ಇಂತಹ ಆ್ಯಪ್​ಗಳು ಕ್ರೌಡ್​ಸೋರ್ಸಿಂಗ್​ (ಸಾರ್ವಜನಿಕರು ಸೇವ್​ ಮಾಡಿರುವ ಹೆಸರುಗಳು) ಆಧಾರದ ಮೇಲೆ ಕೆಲಸ ಮಾಡುವುದರಿಂದ ಅಲ್ಲಿನ ಮಾಹಿತಿ ಶೇಕಡ ನೂರರಷ್ಟು ನಿಖರವಾಗಿರುತ್ತಿರಲಿಲ್ಲ. ಅಲ್ಲದೆ, ಬಳಕೆದಾರರ ಸಂಪರ್ಕ ವಿವರಗಳು ಮತ್ತು ವೈಯಕ್ತಿಕ ಡೇಟಾ ಸೋರಿಕೆಯಾಗುವ ಅಪಾಯ ಸದಾ ಇರುತ್ತಿತ್ತು. ಸರ್ಕಾರದ ಹೊಸ ನಿಯಮ ಜಾರಿಗೆ ಬಂದ ಬಳಿಕ, ಸಿಮ್​ ಕಾರ್ಡ್​ ಪಡೆಯುವಾಗ ಅಧಿಕೃತ ಕೆವೈಸಿ ದಾಖಲೆಗಳಲ್ಲಿ ನೀಡಿರುವ ಅಸಲಿ ಹೆಸರೇ ಕರೆ ಸ್ವೀಕರಿಸುವವರ ಪರದೆಯ ಮೇಲೆ ಮೂಡಲಿದೆ. ಇದರಿಂದ ಖಾಸಗಿತನದ ರಕ್ಷಣೆಯೊಂದಿಗೆ ನಿಖರ ಗುರುತು ಪತ್ತೆಯೂ ಸಾಧ್ಯವಾಗಲಿದೆ. ಕಾಲಿಂಗ್​ ನೇಮ್​ ಪ್ರೆಸೆಂಟೇಶನ್​ನ ಅತಿ ದೊಡ್ಡ ಪ್ರಯೋಜನವೆಂದರೆ ನಕಲಿ ಕರೆಗಳು, ಸೈಬರ್​ ವಂಚನೆ, ಸ್ಪ್ಯಾಮ್​ ಕರೆಗಳು ಮತ್ತು ಬ್ಲ್ಯಾಕ್​ಮೇಲ್​ನಂತಹ ಘಟನೆಗಳಿಗೆ ಕಡಿವಾಣ ಬೀಳಲಿದೆ.

ಬ್ಯಾಂಕ್​ ಅಧಿಕಾರಿಗಳು, ಪೊಲೀಸ್​ ಅಥವಾ ಕೊರಿಯರ್​ ಕಂಪನಿಗಳ ಹೆಸರಿನಲ್ಲಿ "ಡಿಜಿಟಲ್​ ಅರೆಸ್ಟ್​'ನಂತಹ ಸುಲಿಗೆ ತಂತ್ರಗಳನ್ನು ಹೂಡುವ ವಂಚಕರಿಗೆ ಈ ವ್ಯವಸ್ಥೆ ದೊಡ್ಡ ಪೆಟ್ಟು ನೀಡಲಿದೆ. ಅಪರಿಚಿತ ಕರೆ ಬಂದ ಕ್ಷಣವೇ ಕರೆ ಮಾಡುವವರ ಅಸಲಿ ಹೆಸರು ಪರದೆಯ ಮೇಲೆ ಗೋಚರಿಸುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ನಕಲಿ ದಾಖಲೆ ಸೃಷ್ಟಿಸಿ ಸಿಮ್​ ಕಾರ್ಡ್​ ಪಡೆದು ವಂಚನೆ ಎಸಗುವ ಜಾಲಗಳನ್ನು ಬೇರುಸಹಿತ ಮಟ್ಟಹಾಕಲು ಮತ್ತು ತನಿಖಾ ಸಂಸ್ಥೆಗಳಿಗೆ ಅಪರಾಧಿಗಳ ಜಾಡು ಹಿಡಿಯಲು ಇದು ಸಹಕಾರಿಯಾಗಲಿದೆ.

ಯಾವುದೇ ಸುಧಾರಣಾ ಕ್ರಮ ಜಾರಿಗೆ ಬರುವಾಗ ತಾಂತ್ರಿಕ ಸವಾಲುಗಳು ಎದುರಾಗುವುದು ಸಹಜ. ಹಳೆಯ ಫೋನ್​ಗಳಲ್ಲಿ ಅಥವಾ ಫೀಚರ್​ ಫೋನ್​ಗಳಲ್ಲಿ ಈ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸಲಿದೆ ಮತ್ತು ಟೆಲಿಕಾಂ ಕಂಪನಿಗಳ ಸರ್ವರ್​ಗಳು ಕರೆ ಸಂಪರ್ಕದ ವೇಗಕ್ಕೆ ಯಾವುದೇ ಅಡ್ಡಿಯಾಗದಂತೆ ಇದನ್ನು ಹೇಗೆ ನಿಭಾಯಿಸಲಿವೆ ಎಂಬುದು ಮುಖ್ಯ. ಜತೆಗೆ, ಕಂಪನಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಅಧಿಕೃತ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆಯೂ ಪಾರದರ್ಶಕವಾಗಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net