ಆರ್ಥಿಕತೆಗೆ ಡಬಲ್ ಇಂಜಿನ್ ವೇಗ: 2026ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7.4 ರಷ್ಟು! Economic Survey

ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ
ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಫೆಬ್ರವರಿ 1 ರಂದು ಮಂಡನೆಯಾಗಲಿದೆ ಕೇಂದ್ರ ಬಜೆಟ್​
  • ಬಜೆಟ್​ಗೂ ಮುನ್ನ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
  • 2026ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 7.4 ರಷ್ಟು
ನವದೆಹಲಿ: ಇದೇ ಫೆ.1 ರಂದು ಕೇಂದ್ರ ಬಜೆಟ್​ ಮಂಡನೆಯಾಗಲಿದೆ. ಅದಕ್ಕೂ ಮುನ್ನ ಬಿಡುಗಡೆಯಾಗಿರುವ ಆರ್ಥಿಕ ಸಮೀಕ್ಷಾ ವರದಿಯ ( Economic Survey ) ಪ್ರಕಾರ, 2026ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆಯ ದರವನ್ನು ಶೇ. 7.4 ರಷ್ಟು ಎಂದು ಅಂದಾಜಿಸಲಾಗಿದೆ. ಇದು ಸತತ ನಾಲ್ಕನೇ ವರ್ಷವೂ ಭಾರತವು ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ದೇಶವೆಂಬ ಸ್ಥಾನವನ್ನು ಪುನರುಚ್ಚರಿಸುತ್ತದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜ.29) ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ 2025-26ರ ವರದಿಯನ್ನು ಮಂಡಿಸಿದರು.
2027ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇ. 6.8 ರಿಂದ 7.2 ರಷ್ಟಿರಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ. ಭಾರತದ ಸಂಭಾವ್ಯ ಬೆಳವಣಿಗೆಯ ದರವು ಸುಮಾರು ಶೇ. 7 ರಷ್ಟಿರಲಿದೆ ಎಂದು ಸಮೀಕ್ಷಯಲ್ಲಿ ಅಂದಾಜಿಸಲಾಗಿದೆ.
ಇನ್ನು ಹಣಕಾಸು ವರ್ಷ 2026ರಲ್ಲಿ ಆಂತರಿಕ ಬೇಡಿಕೆಯು ಆರ್ಥಿಕ ಬೆಳವಣಿಗೆಗೆ ಬೆಂಬಲವಾಗಿ ಮುಂದುವರಿದಿದೆ ಎಂದು ಸಮೀಕ್ಷೆ ಬೊಟ್ಟು ಮಾಡಿದೆ. ಮೊದಲ ಮುಂಗಡ ಅಂದಾಜಿನ ಪ್ರಕಾರ, ಜಿಡಿಪಿಯಲ್ಲಿ ಅಂತಿಮ ಖಾಸಗಿ ಬಳಕೆ ವೆಚ್ಚದ (PFCE) ಪಾಲು ಹಣಕಾಸು ವರ್ಷ 2026ರಲ್ಲಿ ಶೇ. 61.5 ಕ್ಕೆ ಏರಿದೆ. ಬಳಕೆಯಲ್ಲಿನ ಈ ಸಾಮರ್ಥ್ಯವು ಕಡಿಮೆ ಹಣದುಬ್ಬರ, ಸ್ಥಿರ ಉದ್ಯೋಗ ಪರಿಸ್ಥಿತಿಗಳು ಮತ್ತು ಹೆಚ್ಚುತ್ತಿರುವ ನೈಜ ಖರೀದಿ ಸಾಮರ್ಥ್ಯದಿಂದ ಕೂಡಿದ ಪೂರಕ ಸ್ಥೂಲ ಆರ್ಥಿಕ ಪರಿಸರವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ಪ್ರಬಲ ಕೃಷಿ ಚಟುವಟಿಕೆಗಳಿಂದ ಗ್ರಾಮೀಣ ಬಳಕೆಯು ಕೂಡ ಸ್ಥಿರವಾಗಿದೆ. ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಸರಳೀಕರಣದಿಂದ ನಗರ ಪ್ರದೇಶದ ಬಳಕೆಯು ಕ್ರಮೇಣ ಸುಧಾರಿಸುತ್ತಿದೆ. ಇದು ಬಳಕೆಯ ಬೇಡಿಕೆಯು ಆರ್ಥಿಕತೆಯ ಎಲ್ಲಾ ವಲಯಗಳಲ್ಲಿ ವ್ಯಾಪಕವಾಗಿದೆ ಎಂಬುದನ್ನು ದೃಢಪಡಿಸುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಬಳಕೆಯ ಜೊತೆಗೆ, ಹೂಡಿಕೆಯು ಕೂಡ ಹಣಕಾಸು ವರ್ಷ 2026ರ ಬೆಳವಣಿಗೆಗೆ ಪ್ರಮುಖ ಆಧಾರವಾಗಿ ಮುಂದುವರಿದಿದೆ. ಒಟ್ಟು ಸ್ಥಿರ ಬಂಡವಾಳ ರಚನೆಯ (GFCF) ಪಾಲು ಶೇ. 30.0 ರಷ್ಟಿದೆ ಎಂದು ಅಂದಾಜಿಸಲಾಗಿದೆ. ವರ್ಷದ ಮೊದಲಾರ್ಧದಲ್ಲಿ ಹೂಡಿಕೆ ಚಟುವಟಿಕೆಯು ಬಲಗೊಂಡಿದ್ದು, GFCF ಶೇ. 7.6 ರಷ್ಟು ವಿಸ್ತರಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ ವೇಗವನ್ನು ಮೀರಿಸಿದೆ ಮತ್ತು ಕೋವಿಡ್ ಪೂರ್ವದ ಸರಾಸರಿ ಶೇ. 7.1 ಕ್ಕಿಂತಲೂ ಮೇಲಿದೆ.
2026ರ ಹಣಕಾಸು ವರ್ಷದಲ್ಲಿ ಕೃಷಿ ಮತ್ತು ಪೂರಕ ವಲಯಗಳು ಶೇ. 3.1 ರಷ್ಟು ಬೆಳವಣಿಗೆಯಾಗುವ ಅಂದಾಜಿದೆ ಎಂದು ಸಮೀಕ್ಷೆಯು ತಿಳಿಸಿದೆ. 2026ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅನುಕೂಲಕರ ಮುಂಗಾರು ಮಳೆಯು ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡಿದೆ. ಕೃಷಿ ಜಿವಿಎ (GVA) ಶೇ. 3.6 ರಷ್ಟು ಬೆಳವಣಿಗೆ ಕಂಡಿದ್ದು, ಇದು ಹಣಕಾಸು ವರ್ಷ 2025ರ ಮೊದಲಾರ್ಧದಲ್ಲಿ ದಾಖಲಾಗಿದ್ದ ಶೇ. 2.7 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಇದು ಶೇ. 4.5 ರ ದೀರ್ಘಕಾಲೀನ ಸರಾಸರಿಗಿಂತ ಕಡಿಮೆ ಮಟ್ಟದಲ್ಲಿದೆ. ಪೂರಕ ಚಟುವಟಿಕೆಗಳು, ಅದರಲ್ಲೂ ಮುಖ್ಯವಾಗಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯಗಳು ಶೇ. 5-6 ರಷ್ಟು ಸ್ಥಿರ ದರದಲ್ಲಿ ಬೆಳವಣಿಗೆ ಹೊಂದಿವೆ. ಕೃಷಿ ಜಿವಿಎನಲ್ಲಿ ಇವುಗಳ ಪಾಲು ಹೆಚ್ಚುತ್ತಿರುವುದರಿಂದ, ಒಟ್ಟು ಕೃಷಿ ಬೆಳವಣಿಗೆಯು ಈಗ ಅಸ್ಥಿರ ಬೆಳೆ ಪ್ರದರ್ಶನ ಮತ್ತು ಪೂರಕ ವಲಯಗಳ ಸ್ಥಿರ ವಿಸ್ತರಣೆಯ ಸಂಯೋಜಿತ ಫಲಿತಾಂಶವನ್ನು ಪ್ರತಿಬಿಂಬಿಸುತ್ತಿದೆ.
ಕೈಗಾರಿಕಾ ವಲಯವು ಸದೃಢತೆಯ ಲಕ್ಷಣಗಳನ್ನು ತೋರಿಸುತ್ತಿದೆ ಮತ್ತು 2026ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಉತ್ಪಾದನಾ ವಲಯವು ಶೇ. 8.4 ರಷ್ಟು ಬೆಳವಣಿಗೆ ಕಾಣುವ ಮೂಲಕ ಆ ವರ್ಷದ ಶೇ. 7.0 ರ ಅಂದಾಜನ್ನು ಮೀರಿದೆ ಎಂದು ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿದೆ. ಇದಲ್ಲದೆ, ಸಾರ್ವಜನಿಕ ಬಂಡವಾಳ ವೆಚ್ಚದ ನಿರಂತರ ಬೆಂಬಲ ಮತ್ತು ಮೂಲಸೌಕರ್ಯ ಯೋಜನೆಗಳ ವೇಗದಿಂದಾಗಿ ನಿರ್ಮಾಣ ಕ್ಷೇತ್ರವು ಚೇತೋಹಾರಿ ಸ್ಥಿತಿಯಲ್ಲಿದೆ. ನೈಜ (ಸ್ಥಿರ) ಬೆಲೆಗಳ ಆಧಾರದ ಮೇಲೆ ಉತ್ಪಾದನಾ ವಲಯದ ಪಾಲು ಶೇ. 17-18 ರಷ್ಟು ಸ್ಥಿರವಾಗಿದೆ. ಉತ್ಪಾದನಾ ವಲಯದ ಒಟ್ಟು ಉತ್ಪಾದನಾ ಮೌಲ್ಯವು (GVO) ಸುಮಾರು ಶೇ. 38 ರಷ್ಟಿದ್ದು, ಇದು ಸೇವಾ ವಲಯಕ್ಕೆ ಸರಿಸಮಾನವಾಗಿದೆ ಮತ್ತು ಉತ್ಪಾದನೆಯು ಸುಸ್ಥಿರವಾಗಿರುವುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲದೆ, ಹಣಕಾಸು ವರ್ಷ 26ರಲ್ಲಿ ಕೈಗಾರಿಕಾ ವಲಯವು ಶೇ. 6.2 ರಷ್ಟು ಬೆಳವಣಿಗೆಯನ್ನು ಸಾಧಿಸುವ ಮೂಲಕ ವೇಗವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ, ಇದು ಹಣಕಾಸು ವರ್ಷ 25ರ ಶೇ. 5.9 ಕ್ಕಿಂತ ಹೆಚ್ಚಾಗಿದೆ.
ಜಾಗತಿಕ ವ್ಯಾಪಾರದ ಅನಿಶ್ಚಿತತೆಯ ನಡುವೆಯೂ, ಭಾರತದ ಒಟ್ಟು ರಫ್ತು (ಸರಕು ಮತ್ತು ಸೇವೆಗಳು) ಹಣಕಾಸು ವರ್ಷ 25 ರಲ್ಲಿ ದಾಖಲೆಯ 825.3 ಶತಕೋಟಿ ಯುಎಸ್ ಡಾಲರ್ ತಲುಪಿದೆ ಮತ್ತು ಹಣಕಾಸು ವರ್ಷ 26 ರಲ್ಲಿಯೂ ಈ ವೇಗವು ಮುಂದುವರಿದಿದೆ ಎಂದು ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿದೆ. ಅಮೆರಿಕ ಹೇರಿರುವ ಹೆಚ್ಚಿನ ಸುಂಕಗಳ ಹೊರತಾಗಿಯೂ, ಸರಕು ರಫ್ತು ಶೇ. 2.4 ರಷ್ಟು (ಏಪ್ರಿಲ್-ಡಿಸೆಂಬರ್ 2025) ಬೆಳೆದಿದೆ, ಹಾಗೂ ಸೇವಾ ರಫ್ತು ಶೇ. 6.5 ರಷ್ಟು ಹೆಚ್ಚಾಗಿದೆ. ಏಪ್ರಿಲ್-ಡಿಸೆಂಬರ್ 2025ರ ಅವಧಿಯಲ್ಲಿ ಸರಕು ಆಮದು ಶೇ. 5.9 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷಗಳ ಪ್ರವೃತ್ತಿಯನ್ನು ಅನುಸರಿಸಿ, ಸರಕು ವ್ಯಾಪಾರ ಕೊರತೆಯ ಏರಿಕೆಯನ್ನು ಸೇವಾ ವ್ಯಾಪಾರ ಹೆಚ್ಚುವರಿಯ ಹೆಚ್ಚಳದ ಮೂಲಕ ಸಮತೋಲನಗೊಳಿಸಲಾಗಿದೆ, ಅಷ್ಟೇ ಅಲ್ಲದೆ ವಿದೇಶಗಳಿಂದ ಹರಿದುಬರುವ ಹಣದ ಬೆಳವಣಿಗೆಯು ಈ ಸಮತೋಲನವನ್ನು ಮತ್ತಷ್ಟು ಬಲಪಡಿಸಿದೆ. ಹೆಚ್ಚಿನ ವರ್ಷಗಳಲ್ಲಿ ವಿದೇಶಗಳಿಂದ ಹರಿದುಬರುವ ಹಣವು ಒಟ್ಟು ವಿದೇಶಿ ನೇರ ಹೂಡಿಕೆಗಿಂತ (FDI) ಹೆಚ್ಚಾಗಿದ್ದು, ಇದು ಬಾಹ್ಯ ಧನಸಹಾಯದ ಪ್ರಮುಖ ಮೂಲವಾಗಿ ಅವುಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸುತ್ತದೆ. ಇದರ ಪರಿಣಾಮವಾಗಿ, ಹಣಕಾಸು ವರ್ಷ 26ರ ಮೊದಲಾರ್ಧದಲ್ಲಿ (H1) ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ. 0.8 ರಷ್ಟು ಸಾಧಾರಣ ಮಟ್ಟದಲ್ಲಿದೆ.

ನಿಯಂತ್ರಣದಲ್ಲಿ ಹಣದುಬ್ಬರ

ದೇಶದಲ್ಲಿ ಹಣದುಬ್ಬರವು ಇನ್ನೂ ನಿಯಂತ್ರಣದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷಕ್ಕೆ ಸಿಪಿಐ ಹಣದುಬ್ಬರವನ್ನು ಶೇ. 2 ರಷ್ಟು ಎಂದು ಅಂದಾಜಿಸಿದೆ. ಆಹಾರ ಬೆಲೆ ತಿದ್ದುಪಡಿಗಳಿಂದಾಗಿ ಅದರ ಗುರಿಗಿಂತ 4% ಕಡಿಮೆಯಾಗಿದೆ. ಆದಾಗ್ಯೂ, ಕಡಿಮೆ ಹಣದುಬ್ಬರವು ನಾಮಮಾತ್ರ ಜಿಡಿಪಿಯ ಮೇಲೆ ಪರಿಣಾಮ ಬೀರಿದೆ, ಈಗ ಇದು 8% ಎಂದು ಅಂದಾಜಿಸಲಾಗಿದೆ, ಇದು 10.1% ಬಜೆಟ್ ಗುರಿಗಿಂತ ಕಡಿಮೆಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net