Ebola Virus: ಆಫ್ರಿಕಾದಲ್ಲಿ ಮತ್ತೆ ಎಬೋಲಾ ಆತಂಕ: ಭಾರತೀಯರಿಗೆ ಕೇಂದ್ರದ ಕಠಿಣ ಎಚ್ಚರಿಕೆ!

Ebola Virus
Ebola Virus
Published on
ನವದೆಹಲಿ: ಆಫ್ರಿಕಾ ಖಂಡದ ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಲ್ಲಿ ಪ್ರಾಣಾಂತಿಕ ‘ಎಬೋಲಾ’ ವೈರಸ್(Ebola Virus) ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಭಾರತೀಯ ನಾಗರಿಕರಿಗೆ ಭಾನುವಾರ ಮಹತ್ವದ ಪ್ರಯಾಣದ ಮಾರ್ಗಸೂಚಿಯನ್ನು (ಟ್ರಾವೆಲ್ ಅಡ್ವೈಸರಿ) ಹೊರಡಿಸಿದೆ.
ಸದ್ಯ ಆಫ್ರಿಕಾದ ಈ ದೇಶಗಳಲ್ಲಿ ವಾಸಿಸುತ್ತಿರುವ ಅಥವಾ ಪ್ರಯಾಣಿಸುತ್ತಿರುವ ಭಾರತೀಯರು ಸ್ಥಳೀಯ ಆರೋಗ್ಯ ಅಧಿಕಾರಿಗಳು ನೀಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಅನಿವಾರ್ಯವಲ್ಲದ ಪ್ರಯಾಣ ತಕ್ಷಣವೇ ನಿಲ್ಲಿಸಿ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸೇರಿದಂತೆ ನೆರೆಹೊರೆಯ ದೇಶಗಳಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಇದನ್ನು ‘ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ (PHEIC) ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಆದೇಶ ಬರುವವರೆಗೆ ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅತ್ಯಗತ್ಯವಲ್ಲದ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಕೇಂದ್ರ ಸರ್ಕಾರ ತನ್ನ ನಾಗರಿಕರಿಗೆ ಬಲವಾಗಿ ಒತ್ತಾಯಿಸಿದೆ.

ಭಾರತದಲ್ಲಿ ಸದ್ಯಕ್ಕೆ ಯಾವುದೇ ಆತಂಕವಿಲ್ಲ

ಆಫ್ರಿಕಾದಲ್ಲಿ ಹರಡುತ್ತಿರುವುದು ಎಬೋಲಾ ವೈರಸ್‌ನ ಅತ್ಯಂತ ಅಪಾಯಕಾರಿ ‘ಬುಂಡಿಬುಗ್ಯೊ’ ತಳಿಯಾಗಿದೆ. ಈ ನಿರ್ದಿಷ್ಟ ತಳಿಯ ಯಾವುದೇ ಪ್ರಕರಣಗಳು ಸದ್ಯಕ್ಕೆ ಭಾರತದಲ್ಲಿ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ದೇಶದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಬಿಂದುಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಲಾಗಿದೆ. ಆಫ್ರಿಕಾ ಭಾಗದಿಂದ ಬರುವ ಮತ್ತು ತೀವ್ರ ಜ್ವರದ ಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ.

ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ!

ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಆಫ್ರಿಕಾ ಸಿಡಿಸಿ) ಪ್ರಕಾರ, ಈ ಬುಂಡಿಬುಗ್ಯೊ ತಳಿಯ ಎಬೋಲಾ ರೋಗವು ತೀವ್ರ ರಕ್ತಸ್ರಾವ ಜ್ವರಕ್ಕೆ ಕಾರಣವಾಗುತ್ತದೆ. ಇದು ಅತ್ಯಧಿಕ ಮರಣ ಪ್ರಮಾಣ ಹೊಂದಿರುವ ಅತ್ಯಂತ ಗಂಭೀರ ಕಾಯಿಲೆಯಾಗಿದೆ. ಆತಂಕದ ವಿಷಯವೆಂದರೆ, ಪ್ರಸ್ತುತ ಜಗತ್ತಿನಲ್ಲಿ ಈ ಬುಂಡಿಬುಗ್ಯೊ ವೈರಸ್ ತಳಿಯನ್ನು ತಡೆಗಟ್ಟಲು ಯಾವುದೇ ಅಧಿಕೃತ ಲಸಿಕೆಗಳಾಗಲಿ ಅಥವಾ ನಿರ್ದಿಷ್ಟ ಚಿಕಿತ್ಸಾ ಪದ್ಧತಿಗಳಾಗಲಿ ಲಭ್ಯವಿಲ್ಲ. ಹೀಗಾಗಿ ಕೇವಲ ಮುನ್ನೆಚ್ಚರಿಕೆ ಮತ್ತು ಹರಡದಂತೆ ತಡೆಯುವುದೊಂದೇ ಸದ್ಯದ ಏಕೈಕ ಮಾರ್ಗವಾಗಿದೆ.
ಕಾಂಗೋ ದೇಶದ ಗಡಿಗೆ ಹೊಂದಿಕೊಂಡಿರುವ ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೂ ರೋಗ ಹರಡುವ ಅಪಾಯ ಹೆಚ್ಚಿರುವುದರಿಂದ, ಅಲ್ಲಿರುವ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು ಎಂದು ಭಾರತ ಸರ್ಕಾರ ತಿಳಿಸಿದೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net