ಭೂಕಂಪದಿಂದ ಕಂಗೆಟ್ಟ ವೆನೆಜುವೆಲಾ: 35 ಟನ್ ಹೆಲ್ತ್ ಕಿಟ್ ಹೊತ್ತು ಹಾರಿದ C-17 ಗ್ಲೋಬ್‌ಮಾಸ್ಟರ್; ಭಾರತದಿಂದ 'ಆಪರೇಷನ್ ಅಮಿಸ್ಟಾಡ್' ಆರಂಭ! Operation Amistad

ಭೂಕಂಪದಿಂದ ನಲುಗಿರುವ ವೆನೆಜುವೆಲಾ; ಭಾರತದಿಂದ ಸಹಾಯ ಹಸ್ತ
ಭೂಕಂಪದಿಂದ ನಲುಗಿರುವ ವೆನೆಜುವೆಲಾ; ಭಾರತದಿಂದ ಸಹಾಯ ಹಸ್ತ
Published on

ಪ್ರಮುಖ ಮುಖ್ಯಾಂಶಗಳು

  • ಭೂಕಂಪದಿಂದ ನಲುಗಿರುವ ವೆನೆಜುವೆಲಾ
  • ವಿದೇಶಾಂಗ ಸಚಿವಾಲಯದಿಂದ 'ಆಪರೇಷನ್ ಅಮಿಸ್ಟಾಡ್' ರಕ್ಷಣಾ ಕಾರ್ಯಾಚರಣೆ ಆರಂಭ
  • ಭೂಕಂಪ ಪೀಡಿತರ ರಕ್ಷಣೆಗೆ ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನಗಳು ಸಜ್ಜು
ನವದೆಹಲಿ: ಜಗತ್ತಿನ ಯಾವುದೇ ಮೂಲೆಯಲ್ಲಿ ಸಂಕಷ್ಟ ಎದುರಾದರೂ, ಸಹಾಯಕ್ಕೆ ಧಾವಿಸುವ ದೇಶ ಭಾರತ ಎಂದು ಈಗ ಮತ್ತೊಮ್ಮೆ ಸಾಬೀತಾಗಿದೆ. ಭೀಕರ ಭೂಕಂಪದಿಂದ ನಲುಗಿಹೋಗಿರುವ ವೆನೆಜುವೆಲಾ ದೇಶದ ನೆರವಿಗೆ ಭಾರತ ಸಹಾಯಹಸ್ತ ಚಾಚಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ವಿದೇಶಾಂಗ ಸಚಿವಾಲಯವು ವೆನೆಜುವೆಲಾವನ್ನು ಬೆಂಬಲಿಸಲು ಆಪರೇಷನ್ ಅಮಿಸ್ಟಾಡ್ (Operation Amistad) ಎಂಬ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ (ಜೂ.26) ಅಧಿಕೃತವಾಗಿ ಪ್ರಾರಂಭಿಸಿದೆ.
ಭಾರತೀಯ ವಾಯುಪಡೆಯ ಎರಡು ದೈತ್ಯ C-17 ಗ್ಲೋಬ್‌ಮಾಸ್ಟರ್ ವಿಮಾನಗಳು ಒಂದು ಕಂಪ್ಲೀಟ್ ಫೀಲ್ಡ್ ಆಸ್ಪತ್ರೆ ಘಟಕ ಮತ್ತು ಬರೋಬ್ಬರಿ 35 ಟನ್‌ಗಳಿಗೂ ಹೆಚ್ಚು ಜೀವ ಉಳಿಸುವ ಪರಿಹಾರ ಸಾಮಗ್ರಿಗಳನ್ನು ಹೊತ್ತು ವೆನೆಜುವೆಲಾಗೆ ಪ್ರಯಾಣ ಬೆಳೆಸಿದೆ.

ಜೈಶಂಕರ್ ಎಕ್ಸ್ (X) ಪೋಸ್ಟ್ ವೈರಲ್!

ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಪರೇಷನ್ ಅಮಿಸ್ಟಾಡ್ ಚಾಲ್ತಿಯಲ್ಲಿದೆ! ಭೂಕಂಪದ ಭೀಕರತೆಯಿಂದ ಕಂಗಾಲಾಗಿರುವ ವೆನೆಜುವೆಲಾಗೆ ತುರ್ತು ನೆರವು ನೀಡಲು ಭಾರತೀಯ ವಾಯುಪಡೆಯ ಎರಡು C-17 ವಿಮಾನಗಳು ಈಗಾಗಲೇ ಹಾರಾಟ ನಡೆಸಿವೆ ಎಂದು ಬರೆದುಕೊಂಡಿದ್ದಾರೆ.
ವೆನೆಜುವೆಲಾದ ಪರಿಸ್ಥಿತಿ ಹೇಗಿದೆ?
ವೆನೆಜುವೆಲಾದಲ್ಲಿ ಸಂಭವಿಸಿದ ಎರಡು ಭೀಕರ ಭೂಕಂಪಗಳಿಗೆ ಸಿಲುಕಿ ಈವರೆಗೆ ಮೃತಪಟ್ಟವರ ಸಂಖ್ಯೆ 920ಕ್ಕೆ ಏರಿಕೆಯಾಗಿದೆ. 4,300ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದು, ಅಲ್ಲಿನ ಇಡೀ ವೈದ್ಯಕೀಯ ವ್ಯವಸ್ಥೆಯೇ ಕುಸಿದುಬಿದ್ದಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಕಾರ್ಲೋಸ್ ಅಲ್ವರಾಡೊ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೇನೆಯ 'ಸ್ಪೆಷಲ್ ಮೆಡಿಕಲ್ ಟೀಮ್'

ಹೊರಟಿರುವ ವಿಮಾನಗಳಲ್ಲಿ ವೈಧ್ಯಕೀಯ ಸಾಮಗ್ರಿಗಳ ಜೊತೆಗೆ ಭಾರತೀಯ ಸೇನೆಯ ವಿಶೇಷ ವೈದ್ಯಕೀಯ ತುಕಡಿಯನ್ನು ಕಳುಹಿಸಲಾಗಿದೆ. ಹಿಂಡನ್ ವಾಯುಪಡೆ ನಿಲ್ದಾಣದಿಂದ ಹೊರಟಿರುವ ಈ ತಂಡದಲ್ಲಿ ಭಾರತೀಯ ಸೇನೆಯ ಪ್ಯಾರಾ ಫೀಲ್ಡ್ ಆಸ್ಪತ್ರೆಯ 9 ಹೆಲ್ತ್ ಆಫೀಸರ್ಸ್ ಸೇರಿದಂತೆ ಒಟ್ಟು 41 ಜನ ಪರಿಣಿತ ಸಿಬ್ಬಂದಿ ವೆನೆಜುವಿಲಾಗೆ ಹೊರಟಿದ್ದಾರೆ.
ಯುದ್ಧ ಮತ್ತು ಪ್ರಕೃತಿ ವಿಕೋಪಗಳ ಸಮಯದಲ್ಲಿ ಶೂನ್ಯ ಸೌಲಭ್ಯಗಳ ನಡುವೆಯೂ ಜೀವ ಉಳಿಸುವುದರಲ್ಲಿ ಈ ತಂಡ ಪರಿಣಿತಿ ಹೊಂದಿದೆ. ವೆನೆಜುವೆಲಾ ತಲುಪಿದ ತಕ್ಷಣ ಈ ತಂಡ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆದು, ಶಸ್ತ್ರಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆಗಳನ್ನು ನೀಡಲು ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ.

'ವಿಶ್ವಗುರು' ಸ್ಥಾನದಲ್ಲಿ ಭಾರತ

ಕಳೆದ ಕೆಲವು ವರ್ಷಗಳಿಂದ ನೇಪಾಳ, ಟರ್ಕಿ, ಅಥವಾ ಉಕ್ರೇನ್ ಬಿಕ್ಕಟ್ಟಿನ ಸಮಯದಲ್ಲೂ ಭಾರತ ಇದೇ ರೀತಿಯ ಸಹಾಯ ಹಸ್ತ ಚಾಚಿತ್ತು. ಈಗ ವೆನೆಜುವೆಲಾಗೆ 35 ಟನ್ ಅತ್ಯಾಧುನಿಕ ಔಷಧಗಳು ಹಾಗೂ ಇಂಜಿನಿಯರಿಂಗ್ ಸಲಕರಣೆಗಳನ್ನು ಕಳುಹಿಸುವ ಮೂಲಕ, ಜಗತ್ತಿಗೆ ಯಾವುದೇ ಆಪತ್ತು ಬಂದರೂ ತಾನು ಮೊದಲು ಸ್ಪಂದಿಸುವ ದೇಶ ಎಂಬುದನ್ನು ಭಾರತ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ. ಈ ಕಷ್ಟದ ಸಮಯದಲ್ಲಿ ವೆನೆಜುವೆಲಾ ಜನರ ಜೊತೆ ಭಾರತ ಸದಾ ಇರಲಿದೆ ಎಂದು ಜೈಶಂಕರ್ ಭರವಸೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net