112 ಅಡಿ ಎತ್ತರದ ಟವರ್‌ನಲ್ಲಿ 12 ದಿನ ಸಿಲುಕಿದ್ದ ಗರುಡ; ಕೊನೆಗೂ ಸಿಕ್ಕಿತು ಮುಕ್ತಿ! | Eagle Got freedom at last

ಹದ್ದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಹದ್ದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
Published on

ಪ್ರಮುಖ ಮುಖ್ಯಾಂಶಗಳು

  • 112 ಅಡಿ ಎತ್ತರದ ಟವರ್‌ನಲ್ಲಿ ಸಿಲುಕಿತ್ತು ಹದ್ದು
  • ಬರೋಬ್ಬರಿ 12 ದಿನ ಆಹಾರ, ನೀರಿಲ್ಲದೆ ಪರದಾಟ
  • ಟವರ್‌ ಏರಿ ಹದ್ದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಉತ್ತರ ಪ್ರದೇಶ: ಬರೋಬ್ಬರಿ 12 ದಿನಗಳ ಕಾಲ112 ಅಡಿ ಎತ್ತರದ ಟವರ್‌ ಮೇಲೆ ಸಿಲುಕಿಕೊಂಡು ಪರದಾಡುತ್ತಿದ್ದ ಹದ್ದಿಗೆ ಕೊನೆಗೂ ಸ್ವಾತಂತ್ರ್ಯ ಸಿಕ್ಕಿದೆ. ಪ್ರತಾಪಗಢ ಜಿಲ್ಲೆಯ ಯಾದವಪುರದಲ್ಲಿ ನಡೆದ ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಟವರ್‌ನ ತಂತಿ ಮಾತ್ರವಲ್ಲದೆ ಗರುಡನ ಕಾಲಿಗೆ ದಾರ ಸುತ್ತಿಕೊಂಡಿದ್ದರಿಂದ ಹೊರಬರಲಾಗದೆ, ದಿನಗಟ್ಟಲೆ ಅಲ್ಲೆ ಒದ್ದಾಡಿದೆ. ಆಹಾರ-ನೀರಿಲ್ಲದೆ ಬಳಲುತ್ತಿದ್ದ ಹದ್ದನ್ನು ರಕ್ಷಿಸಲು ಕೆಲವರು ಪ್ರಯತ್ನಿಸಿದ್ದರೂ, 112 ಅಡಿ ಎತ್ತರದ ಟವರ್‌ ಏರಲಾಗದೆ ಪ್ರಯತ್ನ ವಿಫಲವಾಗಿತ್ತು. ಅದರ ಒದ್ದಾಟ ನೋಡಲಾಗದೆ ಗ್ರಾಮಸ್ಥರು ಕೊನೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

112 ಅಡಿ ಟವರ್ ಏರಿದ ಅಗ್ನಿಶಾಮಕ ಸಿಬ್ಬಂದಿ

ಇನ್ನು, ಮಾಹಿತಿ ಸಿಕ್ಕ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸಿಬ್ಬಂದಿ ಅಶ್ವನಿ ಕುಮಾರ್ ಅವರು ಯಾವುದೇ ಭಯವಿಲ್ಲದೆ 112 ಅಡಿ ಎತ್ತರದ ಟವರ್ ಏರಿದ್ದಾರೆ. ನಂತರ ಹದ್ದಿನ ಕಾಲಿಗೆ ಸುತ್ತಿಕೊಂಡಿದ್ದ ದಾರ ಮತ್ತು ತಂತಿಗಳನ್ನು ಅತ್ಯಂತ ಜಾಗರೂಕತೆಯಿಂದ ಕತ್ತರಿಸಿ ಅದನ್ನು ಬಂಧನದಿಂದ ಬಿಡಿಸಿದ್ದಾರೆ. ಮುಕ್ತಿ ಸಿಕ್ಕ ತಕ್ಷಣ ಆಕಾಶದಲ್ಲಿ ಹದ್ದು ರೆಕ್ಕೆ ಬಿಚ್ಚಿ ಹಾರಿತು.

ಮೂಕ ಜೀವಿಗೂ ಬದುಕುವ ಹಕ್ಕಿದೆ

ಈ ಹದ್ದಿನ ರಕ್ಷಣಾ ಕಾರ್ಯಾಚರಣೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾತು ಬಾರದ ಜೀವಿಗೂ ಬದುಕುವ ಹಕ್ಕಿದೆ ಎಂದು ನೆಟ್ಟಿಗರು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದ್ದಾರೆ. ಸತತ 12 ದಿನಗಳಿಂದ ಹಸಿವು, ಬಾಯಾರಿಕೆಯಿಂದ ಒದ್ದಾಡಿದ್ದ ಗರುಡ ಕೊನೆಗೂ ಸ್ವಚ್ಛಂದವಾಗಿ ಹಾರಿದೆ. ಈ ಕ್ಷಣ ನಿಜಕ್ಕೂ ನೋಡುಗರ ಮನಮಿಡಿಯುವಂತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net