EAC-PM: ಆರ್ಥಿಕ ಸಲಹಾ ಮಂಡಳಿ ಜೊತೆ ಪ್ರಧಾನಿ ಮೋದಿ ಹೈ-ಪ್ರೊಫೈಲ್ ಮೀಟಿಂಗ್!

EAC-PM
EAC-PM
Published on
ನವದೆಹಲಿ: ಜಾಗತಿಕ ಮಟ್ಟದಲ್ಲಿ ಆರ್ಥಿಕ ಏರುಪೇರು ಹಾಗೂ ಯುದ್ಧದ ಭೀತಿ ಎದುರಾಗಿರುವ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಉನ್ನತ ಮಟ್ಟದ ಮಹತ್ವದ ಸಭೆ ನಡೆಸಿದ್ದಾರೆ. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಭಾರತದ ಆರ್ಥಿಕ ಪ್ರಗತಿಯನ್ನು ಮತ್ತಷ್ಟು ವೇಗಗೊಳಿಸಲು ಕೈಗೊಳ್ಳಬೇಕಾದ ವಿವಿಧ ಕ್ರಮಗಳು ಹಾಗೂ ನೂತನ ಆಲೋಚನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಬ್ರೇಕ್

ಪ್ರಸ್ತುತ ಜಗತ್ತಿನಾದ್ಯಂತ ಆರ್ಥಿಕ ಮಾರುಕಟ್ಟೆಯಲ್ಲಿ ತಲ್ಲಣಗಳು ಸೃಷ್ಟಿಯಾಗಿವೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಳ್ಳದಂತೆ ನೋಡಿಕೊಳ್ಳಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಗಂಭೀರ ಆಲೋಚನೆ ನಡೆಸಲಾಯಿತು. ಭಾರತದ ಜಿಡಿಪಿ (GDP) ದರವನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ಮಂಡಳಿಯ ಸದಸ್ಯರು ಪ್ರಧಾನಿಯವರಿಗೆ ಹಲವು ಪ್ರಮುಖ ಸಲಹೆಗಳನ್ನು ನೀಡಿದರು.

ಈಸ್ ಆಫ್ ಲಿವಿಂಗ್ ಮತ್ತು ಈಸ್ ಆಫ್ ಡೂಯಿಂಗ್ ಬಿಸಿನೆಸ್

ದೇಶದ ಸಾಮಾನ್ಯ ಜನರ "ಬದುಕನ್ನು ಸುಲಭಗೊಳಿಸುವುದು" (Ease of Living) ಮತ್ತು ಉದ್ಯಮಿಗಳಿಗೆ ವ್ಯಾಪಾರ ಹಾಗೂ "ಉದ್ಯಮ ನಡೆಸುವುದನ್ನು ಸರಳಗೊಳಿಸುವ" (Ease of Doing Business) ನಿಟ್ಟಿನಲ್ಲಿ ತರಬೇಕಾದ ಪ್ರಮುಖ ಸುಧಾರಣೆಗಳ ಬಗ್ಗೆಯೂ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಈ ಸುಧಾರಣೆಗಳಿಂದಾಗಿ ದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಹೂಡಿಕೆದಾರರಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಚರ್ಚಿಸಲಾಯಿತು.

ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ

ಇದೇ ವೇಳೆ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿರುವ ಪಶ್ಚಿಮ ಏಷ್ಯಾ (ಮಿಡಲ್ ಈಸ್ಟ್) ದೇಶಗಳ ನಡುವಿನ ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿಯಿಂದ ಜಗತ್ತಿನ ಹಾಗೂ ಭಾರತದ ಆರ್ಥಿಕತೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಮಂಡಳಿಯ ಸದಸ್ಯರು ಪ್ರಧಾನಿಯವರಿಗೆ ಸಂಪೂರ್ಣ ಮೌಲ್ಯಮಾಪನ ವರದಿಯನ್ನು ಸಲ್ಲಿಸಿದರು. ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ರಫ್ತು-ಆಮದಿನ ಮೇಲಾಗುವ ಪರಿಣಾಮಗಳನ್ನು ಎದುರಿಸಲು ಭಾರತ ಸಜ್ಜಾಗಿರುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಒಟ್ಟಾರೆಯಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಎಷ್ಟೇ ಏರುಪೇರಾದರೂ ಭಾರತವನ್ನು ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಯನ್ನಾಗಿ ಮುನ್ನಡೆಸಲು ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಈ ಹೈ-ಪ್ರೊಫೈಲ್ ಸಭೆ ಸಾಕ್ಷಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net