5 ಬಾರಿ ಅಮಾನತು, 108 ಬಾರಿ ಕೋರ್ಟ್ ಅಲೆದಾಟ!...ನನ್ನನ್ನು ಕಾಡಿದವರಿಗೆ ಕಾಲವೇ ಉತ್ತರಿಸಲಿದೆ ಎಂದ ಸಿಎಂ ಸುವೇಂದು | Suvendu Adhikari

Suvendu Adhikari | ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ
Suvendu Adhikari | ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಹಿಂದಿನ ಟಿಎಂಸಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ನಡೆದ ರಾಜಕೀಯ ದ್ವೇಷದ ರಾಜಕಾರಣ ಹಾಗೂ ಅಧಿಕಾರ ದುರುಪಯೋಗದ ನೀತಿಯನ್ನು ಕಟುವಾಗಿ ಖಂಡಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari), ಹಳೆಯ ಕಹಿ ಘಟನೆಗಳ ನಡುವೆಯೂ ತಾವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಗತಿಯ ಹಾದಿಯಲ್ಲೇ ಮುನ್ನಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, ತಮ್ಮ ಸರ್ಕಾರದಲ್ಲಿ ಎಲ್ಲರನ್ನೂ ಒಳಗೊಂಡ ಒಟ್ಟಾರೆ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ ತಪ್ಪು ಮಾಡಿದವರಿಂದ ಸೂಕ್ತ ಹೊಣೆಗಾರಿಕೆಯನ್ನೂ ವಸೂಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಗತ್ತು ದುಂಡಗಿದೆ, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ!...

ತಮ್ಮ ಹಳೆಯ ರಾಜಕೀಯ ಹೋರಾಟಗಳನ್ನು ನೆನಪಿಸಿಕೊಂಡ ಸಿಎಂ, ಹಿಂದಿನ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಐದು ಬಾರಿ ವಿಧಾನಸಭೆಯಿಂದ ಅಮಾನತು ಮಾಡಿ ಸುಮಾರು 11 ತಿಂಗಳುಗಳ ಕಾಲ ಸದನದಿಂದ ದೂರ ಇಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ ತಮ್ಮ ವಿರುದ್ಧ 102 ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿತ್ತು ಮತ್ತು ನ್ಯಾಯಾಲಯಕ್ಕೆ 108 ಬಾರಿ ಅಲೆಯುವಂತೆ ಮಾಡಲಾಗಿತ್ತು ಎಂದು ವಿವರಿಸಿದರು. ರಾಮನವಮಿ ಆಚರಣೆಯ ಮೆರವಣಿಗೆ ಹಾಗೂ ಮುರ್ಷಿದಾಬಾದ್ ದುರಂತದ ಸ್ಥಳಕ್ಕೆ ಭೇಟಿ ನೀಡದಂತೆ ತಮಗೆ ನಿರ್ಬಂಧ ವಿಧಿಸಿದ್ದನ್ನು ನೆನಪಿಸಿಕೊಂಡ ಸುವೇಂದು, ಅಂದೇ ತಾವು ದುನಿಯಾ ಗೋಲ್ ಹೈ, ಸಬ್ಕಾ ಹಿಸಾಬ್ ಭಿ ಹೋಗಾ (ಜಗತ್ತು ದುಂಡಗಿದೆ, ಎಲ್ಲದಕ್ಕೂ ಲೆಕ್ಕ ಚುಕ್ತಾ ಆಗಲಿದೆ) ಎಂದು ಹೇಳಿದ್ದಾಗಿ ಗುಡುಗಿದರು. ಇಂತಹ ಜನವಿರೋಧಿ ಕೃತ್ಯಗಳಿಗೆ ಸಾರ್ವಜನಿಕರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ಇನ್ಮುಂದೆ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಲಿದೆ ಎಂದರು.

ಇತಿಹಾಸದ ಹೆಸರುಗಳ ಬದಲಾವಣೆ ಹಾಗೂ ಪ್ರತಿಪಕ್ಷಗಳ ಆಕ್ಷೇಪ

ರಾಜ್ಯದ ಸಾರ್ವಜನಿಕ ಸಂಸ್ಥೆಗಳಿಗೆ ದೇಶಕ್ಕಾಗಿ ಶ್ರಮಿಸಿದ ಮಹನೀಯರ ಹೆಸರನ್ನಷ್ಟೇ ಇಡಲು ಸುವೇಂದು ಅಧಿಕಾರಿ ಮುಂದಾಗಿದ್ದು, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ನಾಯಕರಿಗೆ ಅತ್ಯುನ್ನತ ಗೌರವ ಸಿಗಲಿದೆ, ಆದರೆ ಸುಹ್ರಾವರ್ದಿ ಅಥವಾ ಮೊಘಲ್ ಮತ್ತು ಪಠಾಣ್ ದೊರೆಗಳ ಹೆಸರುಗಳನ್ನು ಮುಂದುವರಿಸುವುದಿಲ್ಲ ಎಂದರು. ಈ ಹೆಸರುಗಳ ಮರುಪರಿಶೀಲನೆಗಾಗಿ ಸ್ವಾಮಿ ಪ್ರದೀಪ್ತ ಮಹಾರಾಜ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು. ಸಿಎಂ ಸುವೇಂದು ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ, ಮುಖ್ಯಮಂತ್ರಿಗಳ ಮಾತುಗಳು ಮಾವೋವಾದಿಗಳು ಮತ್ತು ಕಮ್ಯುನಿಸ್ಟರ ಶೈಲಿಯನ್ನು ನೆನಪಿಸುತ್ತಿವೆಯೇ ಹೊರತು ಬಂಗಾಳದ ಜನರ ಹಿತಾಸಕ್ತಿ ಇಲ್ಲಿ ಕಾಣುತ್ತಿಲ್ಲ ಎಂದು ತಿರುಗೇಟು ನೀಡಿದರು.

ನುಸುಳುಕೋರರ ವಿರುದ್ಧ ಬಿಗಿ ಕ್ರಮ!...

ರಾಜ್ಯದ ಭದ್ರತೆಯ ವಿಷಯವಾಗಿ ಮಾತನಾಡಿದ ಬಂಗಾಳ ಸಿಎಂ, ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡಿ ಭದ್ರತಾ ಪಡೆಗೆ (BSF) ಒಪ್ಪಿಸಲಾಗುವುದು ಮತ್ತು ಅವರಿಗೆ ಜೈಲು ಸೌಲಭ್ಯ ನೀಡುವುದಿಲ್ಲ ಎಂದರು. ಪ್ರಸ್ತುತ 12 ಹೋಲ್ಡಿಂಗ್ ಕೇಂದ್ರಗಳಲ್ಲಿ ಇಂತಹ ವಲಸಿಗರು ಇದ್ದಾರೆ ಎಂದು ಮಾಹಿತಿ ನೀಡಿದ ಸುವೇಂದು ಅಧಿಕಾರಿ, ಮುಂಬರುವ ದಿನಗಳಲ್ಲಿ 600 ಕಿಲೋಮೀಟರ್ ವ್ಯಾಪ್ತಿಯ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು, ಅದಕ್ಕೂ ಮುನ್ನವೇ ಕಾನೂನುಬಾಹಿರವಾಗಿ ಇರುವವರು ದೇಶ ತೊರೆಯಬಹುದು ಎಂದರು.
ಇದೇ ವೇಳೆ ಭ್ರಷ್ಟಾಚಾರದ ವಿರುದ್ಧ ಹೊಸ ಕಾನೂನೊಂದನ್ನು ತರಲಾಗುವುದು ಎಂದು ಘೋಷಿಸಿದ ಮುಖ್ಯಮಂತ್ರಿಗಳು, ವಿವಿಧ ಹಗರಣಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅದನ್ನು ವಸತಿ ರಹಿತ ಬಡ ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಪ್ರಕಟಿಸಿದರು. ಮುಖ್ಯಮಂತ್ರಿಗಳ ಈ ಭಾಷಣದಿಂದಾಗಿ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ಕಾವೇರಿತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net