ಇಡ್ಲಿಗೆ 80, ಫುಲ್​​ ಮೀಲ್ಸ್​ 200! ಜೇಬಲ್ಲಿ ಈಗ 1000 ರೂ. ಇದ್ರೂ ಸಾಲಲ್ಲ; ಗ್ಯಾಸ್​ ಬೆಲೆ ಏರಿಕೆಗೆ ಜನರು ಕಂಗಾಲು

ವಾಣಿಜ್ಯ ಸಿಲಿಂಡರ್​ಗಳ ಬೆಲೆಯಿಂದ ಜನರು ಹೈರಾಣ
ವಾಣಿಜ್ಯ ಸಿಲಿಂಡರ್​ಗಳ ಬೆಲೆಯಿಂದ ಜನರು ಹೈರಾಣ
Published on
ನವದೆಹಲಿ: ಇತ್ತೀಚೆಗಷ್ಟೇ, ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಒಂದೇ ಸಲ 993 ರೂ. ಹೆಚ್ಚಳವಾಗಿದ್ದು, ಸದ್ಯ ಜನಸಾಮಾನ್ಯರ ಜೇಬಿಗೆ ದೊಡ್ಡ ಕತ್ತರಿ ಹಾಕಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಹೋಟೆಲ್​, ಸಣ್ಣ ಕೈಗಾರಿಕೆಗಳಿಗೆ ಭಾರೀ ಸಂಕಷ್ಟ ಎದುರಾಗಿದೆ.
ಮೊದಲೇ ಅನೇಕರು ಕಮರ್ಷಿಯಲ್​ ಸಿಲಿಂಡರ್​ ಅಲಭ್ಯತೆಯಿಂದ ತಮ್ಮ ತಮ್ಮ ಹೋಟೆಲ್​ಗಳನ್ನು ಬಂದ್​ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಆದರೀಗ, ಕೇಂದ್ರ ಸರ್ಕಾರ ಏಕಾಏಕಿ ವಾಣಿಜ್ಯ ಎಲ್​ಪಿಜಿ ದರವನ್ನು 993 ರೂ. ಹೆಚ್ಚಿಸಿ, ಹೋಟೆಲ್​ ಉದ್ಯಮವನ್ನೇ ನಂಬಿಕೊಂಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದೆ. ಇದು ಹೋಟೆಲ್​ ಮಾಲೀಕರಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ದೊಡ್ಡ ಸಂಕಷ್ಟವಾಗಿದೆ.
ಕಳೆದ ಕೆಲವು ದಿನಗಳಿಂದ ಗ್ಯಾಸ್​ ಸಿಲಿಂಡರ್​ಗಳ ಬೆಲೆಗಳು ತೀವ್ರವಾಗಿ ಏರುತ್ತಿರುವುದರಿಂದ, ಹೋಟೆಲ್‌ಗಳು ಮತ್ತು ಟಿಫಿನ್​ ಸೆಂಟರ್​ಗಳನ್ನು ನಡೆಸುವುದು ಮಾಲೀಕರಿಗೆ ಹೋರಾಟವಾಗಿ ಪರಿಣಮಿಸಿದೆ. ಕಚ್ಚಾ ವಸ್ತುಗಳು ಮತ್ತು ಕಾರ್ಮಿಕರ ವೆಚ್ಚದ ಜೊತೆಗೆ ಸಿಲಿಂಡರ್​ ಬಿಕ್ಕಟ್ಟನ್ನು ಸರಿದೂಗಿಸಿಕೊಂಡು ಹೋಗುವುದು ಸವಾಲಾಗಿದೆ. ತಮ್ಮ ಮೇಲಿನ ಹೊರೆಯನ್ನು ಹೋಟೆಲ್ ಮಾಲೀಕರು ವಿಧಿಯಿಲ್ಲದೆ, ನೇರವಾಗಿ ಗ್ರಾಹಕರ ಮೇಲೆ ಹೊರಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಮಿಡಲ್​ ಕ್ಲಾಸ್​ ಮಂದಿ ಈಗ ಹೋಟೆಲ್​ನಲ್ಲಿ ಊಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 991 ರೂ.ಗೆ ಏರಿಕೆಯಾಗಿ, 3,152 ರೂ.ಗೆ ತಲುಪಿದೆ. ಇದು ಸರ್ಕಾರ ವಿಧಿಸಿರುವ ನೇರ ದರವಾದರೆ, ಅಮೆರಿಕ-ಇರಾನ್​ ಯುದ್ಧ ಬಿಕ್ಕಟ್ಟಿನಿಂದ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಬ್ಲ್ಯಾಕ್​ ಮಾರ್ಕೆಟ್​ ದಂಧೆಯಲ್ಲಿ ಮುಕ್ತವಾಗಿ ವಹಿವಾಟು ನಡೆಸುತ್ತಿವೆ. ಇಲ್ಲೇ ಒಂದು ಕಮರ್ಷಿಯಲ್​ ಸಿಲಿಂಡರ್​ ಬೆಲೆ ಸುಮಾರು 5ರಿಂದ 7 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಈ ವಿಷಯ ತೀರ ಕಳವಳಕಾರಿ.

ಇಡ್ಲಿಗೆ 80, ಫುಲ್​ ಮೀಲ್ಸ್​ 200 ರೂ.!

ಆಂಧ್ರಪ್ರದೇಶ, ಹೈದರಾಬಾದ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿನ ಹೋಟೆಲ್‌ಗಳಲ್ಲಿ ಉಪಹಾರಗಳ ಬೆಲೆಗಳು ಮತ್ತೆ ಬದಲಾಗಿವೆ. ಒಂದು ಕಾಲದಲ್ಲಿ, 30ರಿಂದ 40 ರೂ.ಗೆ ಸಿಗುತ್ತಿದ್ದ ಒಂದು ಪ್ಲೇಟ್​ ಇಡ್ಲಿ-ಸಾಂಬಾರ್​ ಈಗ 75ರಿಂದ 80 ರೂ.ಗೆ ಏರಿದೆ. ಮತ್ತು ದೋಸೆಯ ವಿಷಯಕ್ಕೆ ಬಂದರೆ, ತುಪ್ಪ ಅಥವಾ ಮಸಾಲಾ ದೋಸೆಯ ಬೆಲೆಗಳು 90ರಿಂದ 100 ರೂ. ಆಗಿವೆ.
ಸಾಮಾನ್ಯ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿಯೂ ಈಗ ತಿಂಡಿ-ಊಟದ ಬೆಲೆ ಕನಿಷ್ಠವೇ 100 ರೂ.ಗೆ ತಲುಪಿದೆ. ಹಲವೆಡೆ ಒಂದು ಫುಲ್​ ಮೀಲ್ಸ್​ ದರ 200 ರೂ. ಆಗೋಗಿದೆ. ಹೀಗಿರುವಾಗ, ಜನರು ಹೊರಗಡೆ ಹೋದಾಗ ಹೋಟೆಲ್​ಗಳಲ್ಲಿ ತಿನ್ನುವುದಾದರೂ ಹೇಗೆ? ಒಬ್ಬರಿಗೆ ಇಷ್ಟೊಂದಾದರೆ, ಇನ್ನೂ ಕುಟುಂಬ ಸಮೇತ ಹೋದರೆ ಏನು ಗತಿ? ಕೇವಲ ಒಂದು ಟೀ ಮತ್ತು ಕಾಫಿ ಬೆಲೆಯೇ 20ರಿಂದ 30ರೂ.ಗೆ ಏರಿವೆ ಎಂದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದರ ಚಿತ್ರಣ ನಮ್ಮ ಕಣ್ಣು ಮುಂದೆ ಬರುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net