ಅಣ್ಣಾ ಬುರ್ಜ್ ಖಲೀಫಾ ಮುಂದೆ ನಿಲ್ಲುತ್ತಾ? ಬೆಂಗ್ಳೂರಿಗೆ ಬರ್ತಿದ್ದ ಬಸ್​ ಏರಿದ ಪ್ರಯಾಣಿಕನಿಗೆ ದುಬೈ ಟಿಕೆಟ್​ ಕೊಟ್ಟ ಕಂಡಕ್ಟರ್​! Dubai Bus Ticket

ಅಣ್ಣಾ ಬುರ್ಜ್ ಖಲೀಫಾ ಮುಂದೆ ನಿಲ್ಲುತ್ತಾ? ಬೆಂಗ್ಳೂರಿಗೆ ಬರ್ತಿದ್ದ ಬಸ್​ ಏರಿದ ಪ್ರಯಾಣಿಕನಿಗೆ ದುಬೈ ಟಿಕೆಟ್​ ಕೊಟ್ಟ ಕಂಡಕ್ಟರ್​! Dubai Bus Ticket
ಅಣ್ಣಾ ಬುರ್ಜ್ ಖಲೀಫಾ ಮುಂದೆ ನಿಲ್ಲುತ್ತಾ? ಬೆಂಗ್ಳೂರಿಗೆ ಬರ್ತಿದ್ದ ಬಸ್​ ಏರಿದ ಪ್ರಯಾಣಿಕನಿಗೆ ದುಬೈ ಟಿಕೆಟ್​ ಕೊಟ್ಟ ಕಂಡಕ್ಟರ್​! Dubai Bus Ticket
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಸಾರಿಗೆ ಸಂಸ್ಥೆಯ ಕಂಡಕ್ಟರ್​ನಿಂದ ಮಹಾ ಎಡವಟ್ಟು
  • ಪ್ರಯಾಣಿಕನಿಗೆ 10 ಸಾವಿರ ರೂ. ಬಸ್​ ಚಾರ್ಜ್​ನೊಂದಿಗೆ ದುಬೈ ಟಿಕೆಟ್​ ವಿತರಣೆ
  • ಭವಾನಿ ಬೈಪಾಸ್​ನಿಂದ ಹೊಸೂರು ಟಿಕೆಟ್​ ತೆಗೆದುಕೊಂಡ ಪ್ರಯಾಣಿಕನಿಗೆ ಬಿಗ್​ ಶಾಕ್​
  • ಕೊಯಮತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ತಮಿಳುನಾಡು ಸಾರಿಗೆ ಬಸ್​ನಲ್ಲಿ ನಡೆದ ಘಟನೆ
Dubai Bus Ticket : ತಮಿಳುನಾಡು ಸಾರಿಗೆ ಸಂಸ್ಥೆಯ (TNSTC) ಕಂಡಕ್ಟರ್​ ಒಬ್ಬರು ಮಾಡಿದ ಎಡವಟ್ಟು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ತಮಿಳುನಾಡಿನ ಭವಾನಿ ಬೈಪಾಸ್‌ನಲ್ಲಿ ಆರ್‌ಟಿಸಿ ಬಸ್ ಹತ್ತಿದ ಪ್ರಯಾಣಿಕ ದಾಮೋದರನ್​ ಎಂಬುವರು ಹೊಸೂರಿಗೆ ಹೋಗಲು ಟಿಕೆಟ್ ಕೇಳಿದಾಗ, ಕಂಡಕ್ಟರ್ ನೀಡಿದ ಟಿಕೆಟ್ ನೋಡಿ ಆತ ಬೆಚ್ಚಿಬಿದ್ದಿದ್ದಾನೆ.
ಸಾಮಾನ್ಯವಾಗಿ ಭವಾನಿ ಬೈಪಾಸ್‌ನಿಂದ ಹೊಸೂರಿಗೆ 150 ರೂಪಾಯಿ ಮಾತ್ರ ಟಿಕೆಟ್ ದರ ಇದೆ, ಆದರೆ ಕಂಡಕ್ಟರ್​ ಆ ಪ್ರಯಾಣಿಕನಿಗೆ ಬರೋಬ್ಬರಿ 10,000 ರೂಪಾಯಿಗಳ ಟಿಕೆಟ್ ನೀಡಿ ಶಾಕ್ ಕೊಟ್ಟಿದ್ದಾರೆ. ಈ ಶಾಕ್​ ಇಲ್ಲಿಗೆ ನಿಲ್ಲುವುದಿಲ್ಲ, ಟಿಕೆಟ್​ನಲ್ಲಿ ತಾನು ಹೋಗಬೇಕಿದ್ದ ಸ್ಥಳ ನೋಡಿ ಪ್ರಯಾಣಿಕ ಒಂದು ಕ್ಷಣ ದಂಗಾಗಿದ್ದಾನೆ. ಏಕೆಂದರೆ, ಆತನಿಗೆ ದುಬೈ ಟಿಕೆಟ್​ ನೀಡಲಾಗಿತ್ತು. ಸದ್ಯ ಸಾರಿಗೆ ಸಂಸ್ಥೆಯ ಈ ಯಡವಟ್ಟಿನ ಕುರಿತಾದ ಸುದ್ದಿ ಮತ್ತು ಟಿಕೆಟ್‌ನ ಫೋಟೋಗಳು ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿವೆ.
ಕಂಡಕ್ಟರ್ ನೀಡಿದ ಟಿಕೆಟ್‌ನ ಮೇಲೆ 'ಭವಾನಿ ಬೈಪಾಸ್‌ನಿಂದ ದುಬೈ' ಎಂದು ಮುದ್ರಿತವಾಗಿದ್ದಲ್ಲದೆ, ಅದರ ಬೆಲೆ ಬರೋಬ್ಬರಿ 10,000 ರೂಪಾಯಿಗಳಾಗಿತ್ತು. ತಮಿಳುನಾಡಿನ ಸ್ಥಳೀಯ ಸಾರಿಗೆ ಬಸ್‌ಗಳಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಟಿಕೆಟ್‌ಗಳು ಇರುವುದೇ ಇಲ್ಲ. ಅದೂ ಅಲ್ಲದೆ, ಕಂಡಕ್ಟರ್ ಬಳಿ ಇರುವ ಟಿಕೆಟಿಂಗ್ ಯಂತ್ರದಲ್ಲಿ (ETM) ಬಸ್ ಚಲಿಸುವ ಮಾರ್ಗದ ನಿಲ್ದಾಣಗಳು ಮತ್ತು ಅದಕ್ಕೆ ನಿಗದಿಯಾದ ಪ್ರಯಾಣ ದರಗಳ ವಿವರಗಳನ್ನು ಮೊದಲೇ ಪ್ರೋಗ್ರಾಮ್ ಮಾಡಿ ಅಳವಡಿಸಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸ್ಥಳೀಯ ಬಸ್ ಟಿಕೆಟ್ ಯಂತ್ರದಲ್ಲಿ 10,000 ರೂಪಾಯಿಗೆ ದುಬೈ ತಲುಪುವ ಟಿಕೆಟ್ ಲಭ್ಯವಾಗಿದ್ದು ಮತ್ತು ಅದು ಮುದ್ರಿತವಾಗಿ ಬಂದಿರುವುದು ಸಾರ್ವಜನಿಕರಲ್ಲಿ ತೀವ್ರ ಅಚ್ಚರಿ ಹಾಗೂ ಕೌತುಕವನ್ನು ಮೂಡಿಸಿದೆ.
ದುಬೈ ಟಿಕೆಟ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡು ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದು ಬಸ್ ನಿರ್ವಾಹಕನು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ, ಬದಲಿಗೆ ಟಿಕೆಟ್ ವಿತರಿಸುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರದಲ್ಲಿ (ETM) ಉಂಟಾದ ತಾಂತ್ರಿಕ ದೋಷವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಾಫ್ಟ್‌ವೇರ್ ಅಪ್‌ಡೇಟ್ ಅಥವಾ ದತ್ತಾಂಶ ನಮೂದು ಮಾಡುವಾಗ ಸಂಭವಿಸಿದ ಪ್ರಮಾದದಿಂದಾಗಿ, ಯಂತ್ರವು 'ಹೊಸೂರು' ಬದಲಿಗೆ 'ದುಬೈ' ಎಂದು ಮತ್ತು ಪ್ರಯಾಣ ದರವನ್ನು '10,000 ರೂಪಾಯಿ' ಎಂದು ಮುದ್ರಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಬಸ್​ಕೊಯಮತ್ತೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು. ದಾಮೋದರನ್​ ಎಂಬುವರು ಭವಾನಿ ಬೈಪಾಸ್​ನಿಂದ ಬಸ್​ ಏರಿ ಹೊಸೂರಿಗೆ ಟಿಕೆಟ್​ ತೆಗೆದುಕೊಂಡಾಗ ಈ ಎಡವಟ್ಟು ಸಂಭವಿಸಿದೆ.
ಮತ್ತೊಂದೆಡೆ, ಈ ವಿಚಿತ್ರ ಘಟನೆಯನ್ನು ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಹಾಸ್ಯ ಮಾಡುತ್ತಾ ತರಹೇವಾರಿ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪಾಸ್‌ಪೋರ್ಟ್‌ ಇಲ್ಲ, ವೀಸಾ ಇಲ್ಲ ಕೇವಲ 10,000 ರೂಪಾಯಿ ಇದ್ದರೆ ಸಾಕು ಚೆನ್ನೈ ಬಸ್‌ನಲ್ಲೇ ದುಬೈಗೆ ಹೋಗಬಹುದು ಎಂದು ಟಿಕೆಟ್‌ ಫೋಟೋವನ್ನು ಟ್ರೋಲ್‌ ಮಾಡುತ್ತಿದ್ದಾರೆ. ತಮಿಳುನಾಡು ಸಾರಿಗೆ ಬಸ್ ಸೇವೆಗಳು ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿವೆ ಎಂದು ವ್ಯಂಗ್ಯವಾಡುತ್ತಿರುವ ಮೀಮ್ಸ್ ಕ್ರಿಯೇಟರ್‌ಗಳು, ಅಣ್ಣಾ, ಬಸ್ ನೇರವಾಗಿ ದುಬೈನ ಬುರ್ಜ್ ಖಲೀಫಾ ಮುಂಭಾಗದಲ್ಲೇ ನಿಲ್ಲುತ್ತಾ? ಎಂದು ತಮಾಷೆಯ ಮೀಮ್ಸ್‌ಗಳನ್ನು ಹರಿಬಿಡುತ್ತಿದ್ದಾರೆ. ಒಟ್ಟಿನಲ್ಲಿ, ತಾಂತ್ರಿಕ ದೋಷದಿಂದ ಸಂಭವಿಸಿದ ಈ ಪುಟ್ಟ ಯಡವಟ್ಟು ಪ್ರಸ್ತುತ ಅಂತರ್ಜಾಲದಲ್ಲಿ ಭಾರಿ ನಗೆಬರಹ ಹಾಗೂ ರೋಚಕ ಚರ್ಚೆಗೆ ಕಾರಣವಾಗಿರುವುದಂತೂ ನಿಜ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net