ಭಯೋತ್ಪಾದನೆ ದಮನಕ್ಕೆ ದ್ವಂದ್ವ ನೀತಿ ಇನ್ಮೇಲೆ ನಡೆಯಲ್ಲ: ಮಾಸ್ಕೋದಲ್ಲಿ NSA ಅಜಿತ್ ದೋವಲ್ ಘರ್ಜನೆ! Ajit Doval

ಭಯೋತ್ಪಾದನೆ ದಮನಕ್ಕೆ ದ್ವಂದ್ವ ನೀತಿ ಇನ್ಮೇಲೆ ನಡೆಯಲ್ಲ: ಮಾಸ್ಕೋದಲ್ಲಿ NSA ಅಜಿತ್ ದೋವಲ್ ಘರ್ಜನೆ!
ಭಯೋತ್ಪಾದನೆ ದಮನಕ್ಕೆ ದ್ವಂದ್ವ ನೀತಿ ಇನ್ಮೇಲೆ ನಡೆಯಲ್ಲ: ಮಾಸ್ಕೋದಲ್ಲಿ NSA ಅಜಿತ್ ದೋವಲ್ ಘರ್ಜನೆ!
Published on
ಮಾಸ್ಕೋ: ಭಯೋತ್ಪಾದನೆ ಮತ್ತು ಅದಕ್ಕೆ ಹಣಕಾಸು ಹಾಗೂ ಆಶ್ರಯ ನೀಡುವ ದೇಶಗಳ ವಿರುದ್ಧದ ಹೋರಾಟದಲ್ಲಿ ಇನ್ಮೇಲೆ ಯಾವುದೇ ದೇಶಗಳ ದ್ವಂದ್ವ ನೀತಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಜಗತ್ತಿನಿಂದ ನಿರ್ಮೂಲನೆ ಮಾಡಲು ಎಲ್ಲಾ ಜವಾಬ್ದಾರಿಯುತ ರಾಷ್ಟ್ರಗಳು ಒಟ್ಟಾಗಿ ಒಂದೇ ಧ್ವನಿಯಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್(Ajit Doval) ಜಾಗತಿಕ ವೇದಿಕೆಯಲ್ಲಿ ಕಠಿಣ ಸಂದೇಶ ರವಾನಿಸಿದ್ದಾರೆ. 
ಈ ಬಗ್ಗೆ ರಷ್ಯಾದ ಮಾಸ್ಕೋದಲ್ಲಿ ಆಯೋಜಿಸಲಾಗಿದ್ದ ಪ್ರಭಾವಿ 14ನೇ ಅಂತಾರಾಷ್ಟ್ರೀಯ ಭದ್ರತಾ ಉನ್ನತ ಪ್ರತಿನಿಧಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಜಾಗತಿಕ ರಕ್ಷಣಾ ವಲಯವನ್ನು ನಡುಗಿಸುವಂತಹ ಭಾಷಣ ಮಾಡಿದ್ದಾರೆ. ಅಲ್ಲದೆ, ಆಧುನಿಕ ಅಂತಾರಾಷ್ಟ್ರೀಯ ಭದ್ರತಾ ಸವಾಲುಗಳ ಕುರಿತು ಭಾರತದ ಕಟು ನಿಲುವನ್ನು ದೋವಲ್ ವಿಶ್ವದ ಮುಂದೆ ಬಿಚ್ಚಿಟ್ಟಿದ್ದಾರೆ.

ಭಯೋತ್ಪಾದನೆ ವಿರುದ್ಧ ಒಂದೇ ಮಂತ್ರ: ಭಾರತದ ಶೂನ್ಯ ಸಹನೆ ನೀತಿ!

ಹೆಚ್ಚುತ್ತಿರುವ ಪ್ರಾದೇಶಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಅಂತಾರಾಷ್ಟ್ರೀಯ ಸಮುದಾಯವು ಭಯೋತ್ಪಾದನೆಯನ್ನು ಮಟ್ಟಹಾಕಲು ಸಂಘಟಿತ ಮತ್ತು ನಿರ್ಣಾಯಕ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ದೋವಲ್ ಒತ್ತಿಹೇಳಿದ್ದಾರೆ. ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ಭೇದಭಾವ ಇರಬಾರದು. ತಮ್ಮ ರಾಜಕೀಯ ಆಸಕ್ತಿಗಳಿಗಾಗಿ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುವ ದೇಶಗಳನ್ನು ಜಾಗತಿಕವಾಗಿ ಬಹಿಷ್ಕರಿಸಬೇಕು ಎಂದು ದೋವೆಲ್​Ajit Doval ಪಾಕಿಸ್ತಾನ ಮತ್ತು ಅದರ ಬೆಂಬಲಿಗ ದೇಶಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪಾದನೆ ವಿರುದ್ಧ ಭಾರತವು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಜೀರೋ ಟಾಲರೆನ್ಸ್ ನೀತಿಯನ್ನು ಅವರು ಮತ್ತೊಮ್ಮೆ ವಿಶ್ವ ನಾಯಕರ ಸಮ್ಮುಖದಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ದ್ವಿತೀಯ ಮಹಾಯುದ್ಧದ ಹಳೇ ಸಂಸ್ಥೆಗಳ ಬದಲಾವಣೆಗೆ ಆಗ್ರಹ!

ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಮಹಾ ಸುಧಾರಣೆಯ ಅಗತ್ಯವನ್ನು ಅಜಿತ್ ದೋವಲ್ ತೀವ್ರವಾಗಿ ಪ್ರತಿಪಾದಿಸಿದ್ದಾರೆ. ದ್ವಿತೀಯ ಮಹಾಯುದ್ಧದ ನಂತರ ರಚನೆಯಾದ ಪ್ರಸ್ತುತ ಜಾಗತಿಕ ಸಂಸ್ಥೆಗಳ ಚೌಕಟ್ಟು ಇಂದಿನ ಆಧುನಿಕ ಭದ್ರತಾ ಕಾಳಜಿಗಳನ್ನು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಂಪೂರ್ಣವಾಗಿ ವಿಫಲವಾಗುತ್ತಿದೆ. ಹಾಗಾಗಿ ಈ ಸಂಸ್ಥೆಗಳಲ್ಲಿ ತಕ್ಷಣವೇ ಕ್ರಾಂತಿಕಾರಿ ಸುಧಾರಣೆಗಳು ತರಲೇಬೇಕು ಎಂದು ಅಜಿತ್​ ದೋವೆಲ್​ ಗುಡುಗಿದ್ದಾರೆ.
ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟವಾದ ಗ್ಲೋಬಲ್ ಸೌತ್ ದೇಶಗಳಿಗೆ ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಮತ್ತು ಆರ್ಥಿಕ ಸಹಕಾರದ ಚೌಕಟ್ಟುಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಬಲವಾದ ಧ್ವನಿಯನ್ನು ನೀಡಬೇಕು. ಆಗ ಮಾತ್ರ ಜಾಗತಿಕ ಭದ್ರತಾ ನೀತಿಗಳು ನ್ಯಾಯಯುತವಾಗಿ ರೂಪಿತಗೊಳ್ಳಲು ಸಾಧ್ಯ ಎಂದು ದೋವಲ್​ ಸ್ಪಷ್ಟಪಡಿಸಿದ್ದಾರೆ.

ಹೊರ್ಮುಜ್ ಮತ್ತು ಕೆಂಪು ಸಮುದ್ರದ ಜಲಮಾರ್ಗ ರಕ್ಷಣೆಗೆ ಮಾಸ್ಟರ್ ಪ್ಲಾನ್!

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ತೀವ್ರ ಅಸ್ಥಿರತೆ ಮತ್ತು ಪ್ರಾದೇಶಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಜಾಗತಿಕ ಹಡಗು ಸಾಗಣೆ ಭದ್ರತೆ ಹಾಗೂ ಇಂಧನ ಪೂರೈಕೆ ಸರಪಳಿಗಳು ಅಪಾಯಕ್ಕೆ ಸಿಲುಕಿರುವುದನ್ನು ದೋವಲ್ ಪ್ರಸ್ತಾಪಿಸಿದರು. ವಿಶ್ವದ ಅತ್ಯಂತ ಆಯಕಟ್ಟಿನ ವ್ಯಾಪಾರ ಮಾರ್ಗಗಳಾದ ಸ್ಟ್ರೈಟ್ ಆಫ್ ಹೊರ್ಮುಜ್ ಮತ್ತು ಕೆಂಪು ಸಮುದ್ರ ಜಲಮಾರ್ಗಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತ ಹಾಗೂ ನಿರಂತರ ನೌಕಾಯಾನ ಚಲನವಲನವನ್ನು ಕಾಯ್ದುಕೊಳ್ಳುವುದು ಇಂದಿನ ಜಾಗತಿಕ ಆರ್ಥಿಕತೆಗೆ ಅತ್ಯಂತ ಅತ್ಯಗತ್ಯವಾಗಿದೆ ಎಂದು ದೋವಲ್​ ಅಭಿಪ್ರಾಯಪಟ್ಟರು.
ಮುಂದಿನ ಎರಡು ದಿನಗಳ ಕಾಲ ಮಾಸ್ಕೋ ಸಮ್ಮೇಳನದ ನೆಪದಲ್ಲಿ ಅಜಿತ್ ದೋವಲ್ ಅವರು ವಿಶ್ವದ ಪ್ರಮುಖ ದೇಶಗಳ ರಕ್ಷಣಾ ಪ್ರತಿನಿಧಿಗಳೊಂದಿಗೆ ಸರಣಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಈ ಸಭೆಗಳಲ್ಲಿ ಪ್ರಾದೇಶಿಕ ರಕ್ಷಣಾ ಸಹಕಾರ, ಕೌಂಟರ್-ಟೆರರಿಸಂ ಕಾರ್ಯಾಚರಣೆಗಳು ಮತ್ತು ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ಕುರಿತು ಹೈ-ಲೆವೆಲ್ ಚರ್ಚೆಗಳು ನಡೆಯಲಿದ್ದು, ಜಾಗತಿಕ ಭದ್ರತೆಯಲ್ಲಿ ಭಾರತದ ನಾಯಕತ್ವವನ್ನು ಇದು ಮತ್ತಷ್ಟು ಬಲಪಡಿಸಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net