ಸಂಸತ್ತಿನ ಮೆಟ್ಟಿಲಲ್ಲೇ ಹೈಡ್ರಾಮಾ; ನೀನು ದೇಶದ್ರೋಹಿ ಎಂದ ರಾಹುಲ್‌ಗೆ, ನೀನು ದೇಶದ ಶತ್ರು ಎಂದು ಗುಡುಗಿದ ಬಿಟ್ಟು | Rahul Gandhi vs Ravneet Bittu
ಸಂಸತ್ತಿನ ಮೆಟ್ಟಿಲಲ್ಲೇ ಹೈಡ್ರಾಮಾ; ನೀನು ದೇಶದ್ರೋಹಿ ಎಂದ ರಾಹುಲ್‌ಗೆ, ನೀನು ದೇಶದ ಶತ್ರು ಎಂದು ಗುಡುಗಿದ ಬಿಟ್ಟು
Published on:
Copied
Follow Us
ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಮಾತಿನ ಚಕಮಕಿ ಹೊಸದೇನಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಬಳಸಲಾಗುತ್ತಿರುವ ಪದಬಳಕೆಗಳು ರಾಜಕೀಯ ಕಡುವೈರವನ್ನು ಎತ್ತಿ ತೋರಿಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ( Rahul Gandhi vs Ravneet Bittu) ಅವರು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆದ ಬೆನ್ನಲ್ಲೇ, ಬಿಟ್ಟು ಅವರು ರಾಹುಲ್ ಗಾಂಧಿಯನ್ನು ದೇಶದ ಶತ್ರುಗಳ ಮಿತ್ರ ಎಂದು ಕರೆಯುವ ಮೂಲಕ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ವಾಗ್ದಾಳಿ
ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸಂಸದರ ನಡುವೆ ರಾಹುಲ್ ಗಾಂಧಿ ಇದ್ದರು. ಆ ಸಮಯದಲ್ಲಿ ಸಚಿವ ರವನೀತ್ ಸಿಂಗ್ ಬಿಟ್ಟು ಅಲ್ಲಿಂದ ಹಾದುಹೋಗುತ್ತಿದ್ದಾಗ, ರಾಹುಲ್ ಗಾಂಧಿಯು, ಇಲ್ಲೊಬ್ಬ ದೇಶದ್ರೋಹಿ ಹೋಗುತ್ತಿದ್ದಾನೆ ನೋಡಿ. ಅವನ ಮುಖ ನೋಡಿ ಎಂದು ಸಿಬ್ಬಂದಿ ಮತ್ತು ಇತರ ಸಂಸದರ ಮುಂದೆ ಹೇಳಿದ್ದಾರೆ.
ಅಷ್ಟಕ್ಕೇ ನಿಲ್ಲಿಸದ ರಾಹುಲ್, ಬಿಟ್ಟು ಅವರತ್ತ ಕೈ ಚಾಚಿ ಸೌಜನ್ಯದ ನಟನೆಯೊಂದಿಗೆ, ನಮಸ್ತೆ ಭಾಯ್, ನನ್ನ ದೇಶದ್ರೋಹಿ ಗೆಳೆಯನೇ. ಚಿಂತಿಸಬೇಡ, ನೀನು ಮತ್ತೆ ಕಾಂಗ್ರೆಸ್‌ಗೆ ವಾಪಸ್ ಬರುತ್ತೀಯಾಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರು ನನ್ನ ದೇಶದ್ರೋಹಿ ಗೆಳೆಯ ಎಂದು ಕರೆದು ಕೈಕುಲುಕಲು ಮುಂದಾದಾಗ, ಬಿಟ್ಟು ಅವರು ಕೈಕುಲುಕಲು ನಿರಾಕರಿಸಿದ್ದಾರೆ.
ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಟ್ಟು, ನೀನು ದೇಶದ ಶತ್ರು ಎಂದು ನೇರವಾಗಿ ಕಿಡಿಕಾರಿದ್ದಾರೆ. ಅಲ್ಲದೆ, ಬಿಟ್ಟು ಅವರು ಮಾತನಾಡುತ್ತಾ, ಯಾರು ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಾರೋ ಮತ್ತು ದೇಶದ ಏಕತೆಗೆ ಧಕ್ಕೆ ತರುತ್ತಾರೋ ಅವರು ನಿಜವಾದ ಶತ್ರುಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು ಮಾತನಾಡಿರುವ ಬಿಟ್ಟು, ರಾಹುಲ್ ಅವರು ಮರಳಿ ಕಾಂಗ್ರೆಸ್‌ಗೆ ಬರುತ್ತೀಯಾ ಎಂದು ಕಾಲೆಳೆದಾಗ, ಬಿಟ್ಟು ಅವರು ನಿಮ್ಮ ಜೊತೆ ಯಾರು ಇರುತ್ತಾರೋ ಅವರು ದೇಶಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಎಂಬ ಧಾಟಿಯಲ್ಲಿ ಪ್ರತಿಕ್ರಿಯಿಸಿ ಅಲ್ಲಿಂದ ಹೊರಟಿದ್ದಾರೆ.
ಮಾಧ್ಯಮಗಳ ಮುಂದೆ ವಾಗ್ದಾಳಿ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಟ್ಟು, ಕಾಂಗ್ರೆಸ್ ಸಂಸದರು ಏನೋ ಯುದ್ಧ ಗೆದ್ದವರಂತೆ ಕುಳಿತಿದ್ದಾರೆ. ರಾಹುಲ್ ಗಾಂಧಿಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯವೇ ಮುಖ್ಯವಾಗಿದೆ. ಅವರಿಗೆ ದೇಶದ ಮೇಲೆ ಪ್ರೀತಿ ಇಲ್ಲ ಎಂದು ಆರೋಪಿಸಿದ್ದಾರೆ.
ಹಿನ್ನೆಲೆ ಏನು..?
ರವನೀತ್ ಸಿಂಗ್ ಬಿಟ್ಟು ಅವರು ಹಿಂದೆ ಕಾಂಗ್ರೆಸ್ ಸಂಸದರಾಗಿದ್ದರು ಮತ್ತು ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದರು. ಲೋಕಸಭಾ ಚುನಾವಣೆಗೆ ಮೊದಲು ಅವರು ಬಿಜೆಪಿಗೆ ಸೇರ್ಪಡೆಗೊಂಡು ಕೇಂದ್ರ ಸಚಿವರಾದರು. ಅಂದಿನಿಂದ ಬಿಟ್ಟು ಅವರು ರಾಹುಲ್ ಗಾಂಧಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ, ಈ ಹಿಂದೆ ರಾಹುಲ್ ಗಾಂಧಿಯನ್ನು ನಂಬರ್ 1 ಭಯೋತ್ಪಾದಕ ಎಂದೂ ಕರೆದಿದ್ದರು. ಇಂದು ರಾಹುಲ್ ಗಾಂಧಿ ಅವರು ಬಿಟ್ಟು ಅವರ ಪಕ್ಷಾಂತರವನ್ನು ಗುರಿಯಾಗಿಸಿಕೊಂಡು ಈ ದೇಶದ್ರೋಹಿ ಎಂಬ ಪದವನ್ನು ಬಳಸಿದ್ದಾರೆ,(ಏಜೆನ್ಸೀಸ್).