ತಮಿಳುನಾಡಿನಲ್ಲಿ ಹೈಡ್ರಾಮಾ: ವಿಜಯ್ ಪ್ರಮಾಣವಚನಕ್ಕೆ ರಾಜ್ಯಪಾಲರ ಬ್ರೇಕ್! ಮ್ಯಾಜಿಕ್ ನಂಬರ್ ಇಲ್ಲದೆ ದಳಪತಿಗೆ ಸಂಕಷ್ಟ..? Dalapathy Vijay

ತಮಿಳುನಾಡಿನಲ್ಲಿ ಹೈಡ್ರಾಮಾ: ವಿಜಯ್ ಪ್ರಮಾಣವಚನಕ್ಕೆ ರಾಜ್ಯಪಾಲರ ಬ್ರೇಕ್! ಮ್ಯಾಜಿಕ್ ನಂಬರ್ ಇಲ್ಲದೆ ದಳಪತಿಗೆ ಸಂಕಷ್ಟ..?
ತಮಿಳುನಾಡಿನಲ್ಲಿ ಹೈಡ್ರಾಮಾ: ವಿಜಯ್ ಪ್ರಮಾಣವಚನಕ್ಕೆ ರಾಜ್ಯಪಾಲರ ಬ್ರೇಕ್! ಮ್ಯಾಜಿಕ್ ನಂಬರ್ ಇಲ್ಲದೆ ದಳಪತಿಗೆ ಸಂಕಷ್ಟ..?
Published on
ಚೆನ್ನೈ: ದಕ್ಷಿಣದ ರಾಜ್ಯ ತಮಿಳುನಾಡಿನಲ್ಲಿ ರಾಜಕೀಯ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್(Dalapathy Vijay) ಅವರು ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಬಳಿ ಸರ್ಕಾರ ರಚಿಸಲು ಬೇಕಾದ ಸ್ಪಷ್ಟ ಬಹುಮತವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ನಾಳೆಯ ಪ್ರಮಾಣವಚನ ಸಮಾರಂಭಕ್ಕೆ ತಡೆ ನೀಡಿದ್ದಾರೆ. ಈ ಬೆಳವಣಿಗೆಯು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಬಹುಮತದ ಲೆಕ್ಕಾಚಾರದಲ್ಲಿ ಸಿಲುಕಿದ ಟಿವಿಕೆ

ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತ ಸಾಬೀತುಪಡಿಸಲು 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಮ್ಯಾಜಿಕ್ ನಂಬರ್ ತಲುಪಲು ಇನ್ನೂ 10 ಸ್ಥಾನಗಳ ಕೊರತೆಯಿದೆ.
ಕಾಂಗ್ರೆಸ್ ಪಕ್ಷದ 5 ಶಾಸಕರು ಬೆಂಬಲ ಘೋಷಿಸಿದ್ದು, ಇದರಿಂದ ಟಿವಿಕೆ ಬಲ 112ಕ್ಕೆ ಏರಿದೆ (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನವನ್ನು ಹೊರತುಪಡಿಸಿ). ಇನ್ನೂ 6 ಶಾಸಕರ ಬೆಂಬಲವಿದ್ದರೆ ಮಾತ್ರ ವಿಜಯ್ ಸಿಎಂ ಕುರ್ಚಿಯಲ್ಲಿ ಕೂರಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ರಾಜ್ಯಪಾಲರು ಸರ್ಕಾರ ರಚನೆಯ ಹಕ್ಕು ಮಂಡನೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಮೈತ್ರಿ ಸಮೀಕರಣ ಮತ್ತು ಕಾಂಗ್ರೆಸ್ ನಡೆ

ಕಾಂಗ್ರೆಸ್ ಪಕ್ಷವು ಟಿವಿ ಕೆಗೆ ಬೆಂಬಲ ನೀಡುವ ಮೂಲಕ ಡಿಎಂಕೆ ಜೊತೆಗಿನ ತನ್ನ ಹಳೆಯ ಸಂಬಂಧವನ್ನು ಕಡಿದುಕೊಂಡಿದೆ. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ನಾವು ಜಾತ್ಯತೀತ ಸರ್ಕಾರವನ್ನು ಬೆಂಬಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ತಿಳಿಸಿದ್ದಾರೆ. ಈ ನಿರ್ಧಾರದಿಂದ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದ್ದರೆ, ಇತ್ತ ಡಿಎಂಕೆ ಮಾತ್ರ ಕಾಂಗ್ರೆಸ್ ವಿರುದ್ಧ ಕೆಂಡಕಾರಿದೆ.
ಪಕ್ಷಗಳ ಬಲಾಬಲ ಹೀಗಿದೆ:
TVK: 108
DMK: 59
AIADMK: 47
ಕಾಂಗ್ರೆಸ್: 05
ಇತರರು (VCK, Left, PMK): ಸಣ್ಣ ಪಕ್ಷಗಳ ನಿರ್ಧಾರ ಬಾಕಿ ಇದೆ.

ಡಿಎಂಕೆ ಕಿಡಿ: ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ

ಕಾಂಗ್ರೆಸ್‌ನ ಈ ದಿಢೀರ್ ನಿರ್ಧಾರವನ್ನು ಡಿಎಂಕೆ ತೀವ್ರವಾಗಿ ಖಂಡಿಸಿದೆ. ತಮಿಳುನಾಡಿನ ಜನತೆಗೆ ಕಾಂಗ್ರೆಸ್ ದ್ರೋಹ ಬಗೆದಿದೆ. ಕೇವಲ ಎರಡು ಸಚಿವ ಸ್ಥಾನಗಳಿಗಾಗಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ನಾಶಮಾಡಿಕೊಳ್ಳುತ್ತಿದೆ ಎಂದು ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ಕಿಡಿಕಾರಿದ್ದಾರೆ. ಇದೇ ವೇಳೆ ಬಿಜೆಪಿ ಕೂಡ ಲೇವಡಿ ಮಾಡಿದ್ದು, ಇಂಡಿಯಾ ಒಕ್ಕೂಟದ ಅಂತ್ಯಕ್ರಿಯೆ ಆರಂಭವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಎಐಎಡಿಎಂಕೆ ಮೇಲೆ ಎಲ್ಲರ ಕಣ್ಣು!

ರಾಜಕೀಯ ಪಂಡಿತರ ಪ್ರಕಾರ, ಎಐಎಡಿಎಂಕೆಯ 47 ಶಾಸಕರ ಪೈಕಿ ಸುಮಾರು 30 ಶಾಸಕರು ವಿಜಯ್ ಸರ್ಕಾರವನ್ನು ಬೆಂಬಲಿಸಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಎಐಎಡಿಎಂಕೆ ಬೆಂಬಲ ನೀಡಿದರೆ ಅಥವಾ ವಿರೋಧ ಪಕ್ಷದ ಒಂದು ಗುಂಪು ಟಿವಿಕೆ ಜೊತೆ ಕೈಜೋಡಿಸಿದರೆ ವಿಜಯ್ ಹಾದಿ ಸುಗಮವಾಗಲಿದೆ. ಆದರೆ, ವಿಸಿಪಿ ಮತ್ತು ಎಡಪಕ್ಷಗಳು ಮೇ 8ರವರೆಗೆ ಸಮಯ ಕೇಳಿರುವುದರಿಂದ ವಿಜಯ್ ಮತ್ತೊಂದು ದಿನ ಕಾಯಲೇಬೇಕಿದೆ.

ಸ್ಟಾಲಿನ್ ರಾಜೀನಾಮೆ, ವಿಜಯ್ ಉದಯ

ತಮಿಳುನಾಡಿನ ರಾಜಕೀಯದಲ್ಲಿ ಈ ಚುನಾವಣೆ ಒಂದು ಐತಿಹಾಸಿಕ ಬದಲಾವಣೆ ತಂದಿದೆ. ದಶಕಗಳ ಕಾಲ ರಾಜ್ಯವಾಳಿದ ಡಿಎಂಕೆ ಮತ್ತು ಎಐಎಡಿಎಂಕೆಗಳ ದ್ವಿಪಕ್ಷೀಯ ಆಡಳಿತಕ್ಕೆ ವಿಜಯ್ ಅಂತ್ಯ ಹಾಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಟಿವಿ ಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಸೋಲನುಭವಿಸಿ ರಾಜೀನಾಮೆ ನೀಡಿದ್ದಾರೆ.
ಸದ್ಯದ ಮಟ್ಟಿಗೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್ ಮತ್ತು ಕಾನೂನು ತಂಡವು ರಾಜ್ಯಪಾಲರನ್ನು ಭೇಟಿ ಮಾಡಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಲಿದ್ದಾರೆ. ದಳಪತಿ ವಿಜಯ್ ಅವರು ಈ ರಾಜಕೀಯ ಸುಳಿಯಿಂದ ಪಾರಾಗಿ ತಮಿಳುನಾಡಿನ ಹೊಸ ನಾಯಕನಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net