ಹಾಗಾದರೆ, ಮದುವೆ, ಸಪ್ತಪದಿ, ದಾಂಪತ್ಯಗಳ ಅರ್ಥವಾದರೂ ಏನು?ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯಾದರೂ ಏನು? ತಾನು, ತನ್ನವರು ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಹೊಸ ಮನೆ, ಹೊಸ ಜನ, ಹೊಸ ಪರಿಸರಕ್ಕೆ ಕಾಲಿಡುವ ಮಗಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುವ, ಹೊಂದಿಕೊಳ್ಳುವ, ಹೊಂದಿಸಿಕೊಳ್ಳುವ ಗುಣ ಯಾಕೆ ಕಡಿಮೆಯಾಗುತ್ತಿದೆ? ಕಣ್ಣುಗಳನ್ನು ರೆಪ್ಪೆಗಳು ಕಾಯುವಂತೆ ಜೋಪಾನ ಮಾಡಿದ ಮಗಳನ್ನು ವರಿಸಿದ ವ್ಯಕ್ತಿ ಸಾತ್ವಿಕನೋ, ಗಿಡುಗನೋ, ಕಟುಕನೋ ಎಂದು ಅರಿಯುವುದು ಹೇಗೆ? ಹೊಸದಾಗಿ ಮನೆಗೆ ಬಂದ ಸೊಸೆಯನ್ನು ಮಗಳಂತೆ ಪ್ರೀತಿಯಿಂದ, ತಾರತಮ್ಯವಿಲ್ಲದೆ ನೋಡಿಕೊಂಡರೆ, ಅದೇ ಸೊಸೆ ಮುಂದೆ ಅತ್ತೆ-ಮಾವಂದಿರನ್ನೂ ವೃದ್ಧಾಪ್ಯದಲ್ಲಿ ತಂದೆ-ತಾಯಿಯಂತೆ ನೋಡಿಕೊಳ್ಳಲಾರಳೇ? ನಿಜ, ಎಲ್ಲ ಮನೆಯ ಪರಿಸ್ಥಿತಿಯೂ ಒಂದೇ ರೀತಿ ಇರುವುದಿಲ್ಲ. ಎಲ್ಲ ಸಂದರ್ಭದಲ್ಲಿ ಗಂಡ- ಅತ್ತೆ-ಮಾವಂದಿರ ತಪ್ಪು ಇರುವುದಿಲ್ಲ. ಪ್ರತೀ ಕುಟುಂಬದಲ್ಲೂ ಸನ್ನಿವೇಶಗಳು ಬೇರೆ ಬೇರೆ ರೀತಿಯಾಗಿರುತ್ತದೆ. ಆದರೂ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಶೀಲ ಶಂಕಿಸಿ ಚಿತ್ರಹಿಂಸೆ, ಸಾಮಾಜಿಕ ಸ್ಟೇಟಸ್ ಮತ್ತಿತರ ಕಾರಣಗಳಿಗೆ ರಾಣ-ರಂಪ ನಡೆಯುವ ಮನೆಗಳಲ್ಲಿ ಸೊಸೆಗೆ ಕೊಡಬಾರದ ಕಷ್ಟ ಕೊಟ್ಟು, ನೇಣು ಹಾಕಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ರೈಲು ಹಳಿ ಮೇಲೆ ಎಸೆದು, ಕೆರೆ, ಬಾವಿ, ನಾಲೆಗೆ ದೂಡಿ ಹತ್ಯೆ ಮಾಡುವಂಥ ಪ್ರಕರಣಗಳು ಮಾನವೀಯತೆ ಸತ್ತು ರಾಕ್ಷಸೀಗುಣದ ಅಟ್ಟಹಾಸ ಮೆರೆಯುವ ಸಮಾಜದ ಕ್ರೂರ ಮುಖವನ್ನು ವಿಡಂಬಿಸುತ್ತದೆ.