ಝೂಮ್​ ಮಾಡ್ಬೇಡಿ!

Don't zoom in!
Don't zoom in!
Published on
ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರ ವೇಳೆ ಅಸಭ್ಯ ಕೋನದಲ್ಲಿ ಚಿತ್ರೀಕರಣಗೊಂಡ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ನಟಿ ಸಪ್ತಮಿ ಗೌಡ ಹೌಹಾರಿದ್ದಾರೆ. ಈ ಬಗ್ಗೆ ಇತರ ನಟಿಯರ ಜತೆ ಮಾತನಾಡಿದಾಗ ಅವರಿಗೂ ಇದೇ ಅನುಭವ ಆಗಿರುವುದು ದೃಢಪಟ್ಟಿದೆ. ಆ ನಟಿಯರೆಲ್ಲ ‘ಯಾಕೆ ಸುಮ್ನೆ ವಿವಾದ’ ಅಂತ ಸುಮ್ಮನಿದ್ದರೆ, ಸಪ್ತಮಿ ಗೌಡ ಮಾತ್ರ ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ‘ನಟಿಯರು ವಸ್ತುಗಳಲ್ಲ’ (ಆಕ್ಟರ್ಸ್ ನಾಟ್ ಆಬ್ಜೆಕ್ಟ್ಸ್) ಎಂಬ ಅಭಿಯಾನವನ್ನೂ ಶುರು ಮಾಡಿದ್ದಾರೆ. ಇದರಿಂದಾಗಿ ಈಗ ‘ಪಾಪರಾಜಿ’ಗಳ (ಫೋಟೋಗ್ರಾಫರ್​ಗಳು, ವಿಡಿಯೋಗ್ರಾಫರ್​ಗಳು) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿಗಳ ಪಾಲಿಗೆ ದುಃಸ್ವಪ್ನವಾಗಿರುವ ಈ ಪಾಪರಾಜಿಗಳು ಯಾರು, ಯಾಕೆ ಇಂತಹ ಕೆಲಸ ಮಾಡುತ್ತಾರೆ, ಇದುವರೆಗೆ ಇವರಿಂದ ತೊಂದರೆ ಎದುರಿಸಿರುವ ದೇಶ-ವಿದೇಶಗಳ ಸೆಲೆಬ್ರಿಟಿಗಳು ಯಾರ್ಯಾರು, ಇದಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನೀತಿ-ನಿಯಮಗಳೇನು ಎಂಬುದರ ಕುರಿತು ವಿಸõತ ಮಾಹಿತಿ ಇಲ್ಲಿದೆ.
‘ಒಂದು ಫೋಟೋ ಸಾವಿರ ಪದಗಳಿಗೆ ಸಮಾನ’ ಎಂಬ ಮಾತು ಬಹುಕಾಲದಿಂದ ಪ್ರಚಲಿತದಲ್ಲಿದೆ. ಆದರೆ ಈ ಮಾತು ಪಾಪರಾಜಿಗಳಿಗೆ ಅನ್ವಯವಾಗುವುದಿಲ್ಲ. ‘ಒಂದು ಎಕ್ಸ್​ಕ್ಲೂಸಿವ್ ಫೋಟೋ ಲಕ್ಷಾಂತರ ರೂಪಾಯಿಗೆ ಸಮಾನ’ ಎಂಬ ಮಾತು ಮಾತ್ರ ಅವರಿಗೆ ಅನ್ವಯವಾಗುತ್ತದೆ. ಅವರ ಅತಿರೇಕದ ವರ್ತನೆಗೆ ಈ ಆರ್ಥಿಕ ಲಾಭವೇ ಮೂಲ ಕಾರಣ. ಬೆಳ್ಳಿತೆರೆಯ ತಾರೆಗಳ ಖಾಸಗಿ ಬದುಕೇ ಅವರಿಗೆ ಬಂಡವಾಳ. ಇದರಿಂದಾಗಿ ಸ್ಟಾರ್​ಗಳು ಇಂದು ಜಿಮ್ೆ, ರೆಸ್ಟೋರೆಂಟ್​ಗೆ ಹೋಗುವುದೂ ದುಸ್ತರವಾಗಿದೆ. ಮನೆಯ ಗೇಟು ತೆರೆದರೆ ಸಾಕು, ಪಾಪರಾಜಿಗಳು ಎದುರಿಗೇ ನಿಂತಿರುತ್ತಾರೆ. ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲೂ ಅವರು ಹಾಜರು. ಅಷ್ಟೇ ಏಕೆ, ಮನೆಯ ಕಾಂಪೌಂಡ್ ಒಳಗಿನ ದೃಶ್ಯಗಳನ್ನು ಕೂಡ ಸೆರೆಹಿಡಿಯಲು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ಡ್ರೋನ್ ಬಳಸಿಯೂ ಫೋಟೋ ತೆಗೆಯತೊಡಗಿದ್ದಾರೆ. ಮಕ್ಕಳನ್ನು ಹಿಂಬಾಲಿಸುತ್ತಾರೆ. ಅಸಭ್ಯ ಕ್ಯಾಮೆರಾ ಆಂಗಲ್​ಗಳ ಮೂಲಕ ಮುಜುಗರ ಉಂಟುಮಾಡುತ್ತಾರೆ. ಇದು ಸೆಲೆಬ್ರಿಟಿಗಳ ನೆಮ್ಮದಿಯನ್ನೇ ಕೆಡಿಸಿದೆ. ಪಾಪರಾಜಿಗಳ ಈ ಕಸರತ್ತು ಅನೇಕ ಬಾರಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಕಾಣಿಸುತ್ತದೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಪಾಪರಾಜಿಗಳ ಹಾವಳಿ ಸೆಲೆಬ್ರಿಟಿಗಳ ಪಾಲಿಗೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಯಾರು ಈ ಪಾಪರಾಜಿಗಳು?
ಪಾಪರಾಜಿಗಳೆಂದರೆ ಪ್ರಸಿದ್ಧ ವ್ಯಕ್ತಿಗಳ ಫೋಟೋ/ವಿಡಿಯೋಗಳನ್ನು ಅವರ ಅನುಮತಿಯಿಲ್ಲದೆ, ರಹಸ್ಯವಾಗಿ ಅಥವಾ ಬೆನ್ನಟ್ಟಿ ತೆಗೆಯುವ ಸ್ವತಂತ್ರ ಛಾಯಾಗ್ರಾಹಕರು. ಇಟಾಲಿಯನ್ ಭಾಷೆಯ ಪಪರಾಜೋ (ಗುಂಯ್ ಎನ್ನುವ ಸೊಳ್ಳೆ) ಎಂಬ ಪದದಿಂದ ಈ ಹೆಸರು ಬಂದಿದೆ. ಇವರು ಯಾವುದೇ ಸುದ್ದಿಸಂಸ್ಥೆಯ ಕಾಯಂ ಉದ್ಯೋಗಿಗಳಲ್ಲ (ಕೆಲವರು ಕಾಯಂ ನೌಕರರೂ ಇರಬಹುದು); ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳ ವಿಶಿಷ್ಟ ಫೋಟೋ, ವಿಡಿಯೋ ಚಿತ್ರೀಕರಿಸಿ ದೊಡ್ಡ ಮೊತ್ತಕ್ಕೆ ಮಾಧ್ಯಮ ಸಂಸ್ಥೆಗಳಿಗೆ ಅಥವಾ ವೆಬ್​ಸೈಟ್​ಗಳಿಗೆ ಮಾರುತ್ತಾರೆ. ವಿಮಾನ ನಿಲ್ದಾಣ, ಜಿಮ್ ಪಾರ್ಟಿಹಾಲ್​ಗಳ ಹೊರಗೆ ಗಂಟೆಗಟ್ಟಲೆ, ದಿನಗಟ್ಟಲೆ ಕಾಯುತ್ತಾರೆ. ಸೆಲೆಬ್ರಿಟಿಗಳ ಜೀವನದ ಎಕ್ಸ್ ಕ್ಲೂಸಿವ್ ಚಿತ್ರಗಳಿಗಾಗಿ ಸುರಕ್ಷತಾ ನಿಯಮಗಳನ್ನು ಮೀರಿ ವರ್ತಿಸುತ್ತಾರೆ. ಕೆಲವು ಸಲವಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟಂತೆ ವರ್ತಿಸುತ್ತಾರೆ. ಇದು ವಿವಾದಕ್ಕೆ, ಸಂಘರ್ಷಕ್ಕೆ ಕಾರಣವಾಗಿದ್ದೂ ಇದೆ. ದೆಹಲಿ, ಮುಂಬೈನಂತಹ ನಗರಗಳಲ್ಲಿ ಇವರ ಹಾವಳಿ ಇತ್ತೀಚೆಗೆ ಜಾಸ್ತಿಯಾಗಿದೆ.
ಈ ವರ್ತನೆಗೆ ಏನು ಕಾರಣ?
ಪಾಪರಾಜಿಗಳು ಇಷ್ಟೊಂದು ಸಾಹಸ ಮತ್ತು ಅತಿರೇಕದ ವರ್ತನೆ ತೋರಲು ಮುಖ್ಯ ಕಾರಣ ಹಣ ಮತ್ತು ಜನಪ್ರಿಯತೆ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ಒಂದು ಎಕ್ಸ್​ಕ್ಲೂಸಿವ್ ಅಥವಾ ವಿಭಿನ್ನವಾದ ಫೋಟೋ ಅಥವಾ ವಿಡಿಯೋ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ.ಗೆ ಮಾರಾಟವಾಗುತ್ತದೆ. ಕೆಲವು ಸಂಸ್ಥೆಗಳು ಇಂತಹ ಫೋಟೋಗಳಿಗಾಗಿ ದೊಡ್ಡ ಮೊತ್ತ ನೀಡಲು ಸಿದ್ಧವಿರುತ್ತವೆ. ಮತ್ತೊಂದು ಕಾರಣ- ಯಾರು ಮೊದಲು ಫೋಟೋ ಪೋಸ್ಟ್ ಮಾಡುತ್ತಾರೆ ಎಂಬ ಪೈಪೋಟಿ. ಅತಿ ಹೆಚ್ಚು ಲೈಕ್ಸ್ ಮತ್ತು ವ್ಯೂವ್ಸ್ ಪಡೆಯುವ ಹಂಬಲ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕರಲ್ಲಿರುವ ಕುತೂಹಲವೇ ಇವರಿಗೆ ಬಂಡವಾಳ. ಜನರು ಇಂತಹ ಫೋಟೋಗಳನ್ನು ನೋಡಲು ಇಷ್ಟಪಡುವವರೆಗೆ, ಪಾಪರಾಜಿಗಳು ಲಾಭಕ್ಕಾಗಿ ಈ ಅಪಾಯಕಾರಿ ವೃತ್ತಿಯನ್ನು ಮುಂದುವರಿಸುತ್ತಲೇ ಇರುತ್ತಾರೆ.
ಕರ್ನಾಟಕದ ಕೇಸು ಭಿನ್ನ...
ಇದೆಲ್ಲವೂ ದೇಶದ ವಿವಿಧೆಡೆ ಮತ್ತು ವಿದೇಶಗಳಲ್ಲಿ ಪಾಪರಾಜಿಗಳು ಸೃಷ್ಟಿಸಿರುವ ಹಾವಳಿಯಾದರೆ, ಕರ್ನಾಟಕದಲ್ಲಿ ಈಗ ಭುಗಿಲೆದ್ದಿರುವ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಇಲ್ಲಿ ಸಿನಿಮಾ ತಂಡಗಳೇ ಅಧಿಕೃತವಾಗಿ ಫೋಟೋಗ್ರಾಫರ್​ಗಳನ್ನು ಮತ್ತು ಯೂಟ್ಯೂಬರ್​ಗಳನ್ನು ಕರೆಸುತ್ತಿವೆ. ನಟ-ನಟಿಯರನ್ನು ಚಿತ್ರೀಕರಿಸುವಾಗ ಅವರು ಸೆಟ್ ಮಾಡುವ ಆಂಗಲ್​ಗಳು ಕೆಲವೊಮ್ಮೆ ಅಶ್ಲೀಲ, ಅಸಭ್ಯ ಪೋಸ್​ಗಳ ಹಾಗೆ ಕಾಣಿಸುವಂತಿರುತ್ತವೆ. ಇದನ್ನು ಎಡಿಟ್ ಮಾಡಲು ಅವಕಾಶವಿದ್ದರೂ ಮಾಡದೇ ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಇದು ಈಗ ವಿವಾದವಾಗಿದೆ.

ಸಪ್ತಮಿ ಗೌಡ ಹೇಳುವುದೇನು?

ಸಿನಿಮಾ ಈವೆಂಟ್ ಅಥವಾ ಶೂಟಿಂಗ್ ವೇಳೆ ಪ್ರಚಾರಕ್ಕಾಗಿ ಫೋಟೋಗ್ರಾಫರ್​ಗಳು ಮತ್ತು ಯೂಟ್ಯೂಬರ್​ಗಳನ್ನು ನಿರ್ವಪಕರು/ನಿರ್ದೇಶಕರು ಕರೆಸುತ್ತಾರೆ. ನಟಿಯರು ಕಾರ್ ಇಳಿಯುವಾಗಿನಿಂದ ಹಿಡಿದು ವಾಪಸ್ ಮನೆಗೆ ಹೋಗುವವರೆಗಿನ ದೃಶ್ಯಗಳನ್ನು ಇವರು ಸೆರೆಹಿಡಿಯುತ್ತಾರೆ. ಅದರಲ್ಲಿ ಕೆಲವು ಅಸಭ್ಯ ಆಂಗಲ್​ಗಳೂ ಇರುತ್ತವೆ. ಅದನ್ನೇ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುತ್ತಾರೆ. ಲಕ್ಷಾಂತರ ಜನ ನೋಡಿ ಲೈಕ್ ಒತ್ತುತ್ತಾರೆ. ಆ ಪೈಕಿ ಅರ್ಧದಷ್ಟು ಜನ ಸಿನಿಮಾ ನೋಡಿದರೂ ಆ ಸಿನಿಮಾ ಉದ್ಧಾರವಾಗಿಬಿಡುತ್ತದೆ. ಆದರೆ ಹಾಗಾಗುವುದಿಲ್ಲ. ಇದರಿಂದ ಸಿನಿಮಾಕ್ಕೇನು ಪ್ರಯೋಜನವಾದಂತಾಯಿತು? ಇಂತಹ ಪಾಪರಾಜಿಗಳನ್ನು ಸಿನಿಮಾತಂಡಗಳು ದೂರ ಇಡಬೇಕು. ಇಲ್ಲವೇ ಚಲನಚಿತ್ರ ವಾಣಿಜ್ಯ ಮಂಡಳಿಯವರು ಇದಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು.

ತೊಂದರೆಗೆ ಒಳಗಾದ ಸೆಲೆಬ್ರಿಟಿಗಳು

ಪಾಪರಾಜಿಗಳಿಂದ ತೊಂದರೆ ಅನುಭವಿಸಿದ ಸೆಲೆಬ್ರಿಟಿಗಳ ಸಂಖ್ಯೆ ದೊಡ್ಡದಿದೆ. ಅಮೆರಿಕದ ಪ್ರಸಿದ್ಧ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಅವರನ್ನು 2007ರ ಅವಧಿಯಲ್ಲಿ ಪಾಪರಾಜಿಗಳು ಎಷ್ಟು ಕಾಡಿದ್ದರೆಂದರೆ, ಆಕೆ ತನ್ನ ಕೂದಲನ್ನು ತಾನೇ ಸಾರ್ವಜನಿಕವಾಗಿ ಕ್ಷೌರ ಮಾಡಿಕೊಂಡು ಆಕ್ರೋಶ ಹೊರಹಾಕಿದ್ದರು. ಆ ಫೋಟೋಗಳನ್ನು ಕೂಡ ಪಾಪರಾಜಿಗಳು ದೊಡ್ಡ ಮೊತ್ತಕ್ಕೆ ಮಾರಿಕೊಂಡಿದ್ದರು! ಕೆನಡಾದ ಗಾಯಕ ಜಸ್ಟಿನ್ ಬೈಬರ್ ಅನೇಕ ಬಾರಿ ಪಾಪರಾಜಿಗಳ ಮೇಲೆ ಹಲ್ಲೆ ನಡೆಸಿದ್ದರು. ಪಾಪರಾಜಿಗಳು ಅವರ ಕಾರನ್ನು ಹಿಂಬಾಲಿಸಿದಾಗ, ಅಡ್ಡಗಟ್ಟಿದಾಗ ಹಲವು ಸಲ ಅಪಘಾತಗಳೂ ಸಂಭವಿಸಿದ್ದವು. ಭಾರತದಲ್ಲಿ, ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ತಮ್ಮ ಮಗಳಾದ ವಾಮಿಕಾಳ ಫೋಟೋ ತೆಗೆಯದಂತೆ ಪದೇಪದೆ ವಿನಂತಿಸಿದರೂ, ಪಾಪರಾಜಿಗಳು ರಹಸ್ಯವಾಗಿ ಫೋಟೋ ತೆಗೆದು ಹಂಚಿಕೊಂಡಿದ್ದರು. ಅದಕ್ಕೆ ವಿರುಷ್ಕಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಟಿ ಆಲಿಯಾ ಭಟ್ ತಮ್ಮ ಮನೆಯ ಲಿವಿಂಗ್ ರೂಮ್ಲ್ಲಿ ಕುಳಿತಿದ್ದಾಗ ಪಕ್ಕದ ಕಟ್ಟಡದಿಂದ ಪಾಪರಾಜಿಗಳು ಫೋಟೋ ತೆಗೆದಿದ್ದರು. ಇದನ್ನು ಕಂಡು ಆಲಿಯಾ ಆಘಾತಕ್ಕೆ ಒಳಗಾಗಿದ್ದರು. ಇದು ಖಾಸಗಿತನದ ಉಲ್ಲಂಘನೆಯ ಪರಾಕಾಷ್ಠೆ ಎಂದು ಖಂಡಿಸಿದ್ದರು. ಹಿರಿಯ ನಟಿ ಜಯಾ ಬಚ್ಚನ್ ಅವರಂತೂ ಪಾಪರಾಜಿಗಳನ್ನು ಕಂಡರೆ ಉರಿದುರಿದು ಬೀಳುವ ವಿಡಿಯೋಗಳು ಸಾಕಷ್ಟು ಬಾರಿ ವೈರಲ್ ಆಗಿವೆ.
ರಾಜಕುಮಾರಿ ಡಯಾನಾ ಸಾವು
ಪ್ಯಾರಿಸ್​ನಲ್ಲಿ 1997ರ ಆ. 31ರಂದು ಸಂಭವಿಸಿದ ವೇಲ್ಸ್​ನ ರಾಜಕುಮಾರಿ ಡಯಾನಾ ಅವರ ಕಾರು ಅಪಘಾತ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಪಾಪರಾಜಿಗಳು ಬೆನ್ನಟ್ಟಿದ್ದೇ ಈ ಭೀಕರ ಘಟನೆಗೆ ಮುಖ್ಯ ಕಾರಣ. ಡಯಾನಾ ಮತ್ತು ಅವರ ಸ್ನೇಹಿತ, ಈಜಿಪ್ಟ್​ನ ಬಿಲಿಯನೇರ್ ಡೋಡಿ ಅಲ್-ಫಾಯೆದ್ ಪ್ರಯಾಣಿಸುತ್ತಿದ್ದ ಕಾರನ್ನು ಅತಿ ವೇಗವಾಗಿ ಬೆನ್ನಟ್ಟಿದ ಪಾಪರಾಜಿಗಳು, ಅವರ ಖಾಸಗಿ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದು ಅಪಘಾತಕ್ಕೆಡೆ ಮಾಡಿಕೊಟ್ಟಿತು. ಜೀವನ್ಮರಣ ಹೋರಾಟದಲ್ಲಿದ್ದ ಗಾಯಾಳುಗಳಿಗೆ ಸಹಾಯ ಮಾಡುವ ಬದಲು ಅವರ ಫೋಟೋಗಳನ್ನು ತೆಗೆಯಲು ಪಾಪರಾಜಿಗಳು ಮುಗಿಬಿದ್ದಿದ್ದರು! ಡಯಾನಾಗೆ ಆಗಿನ್ನೂ 36 ವರ್ಷ ವಯಸ್ಸು. ಅಪಘಾತದಲ್ಲಿ ಡಯಾನಾ, ಡೋಡಿ ಮತ್ತು ಕಾರಿನ ಚಾಲಕ ಮೂವರೂ ಮೃತಪಟ್ಟರು. ಈ ಘಟನೆ ಪಾಪರಾಜಿ ಸಂಸ್ಕೃತಿಯ ಕ್ರೂರ ಮುಖವನ್ನು ಜಗತ್ತಿಗೆ ಪರಿಚಯಿಸಿತು.

ಕಾನೂನು ಏನು ಹೇಳುತ್ತದೆ?

ಪಾಪರಾಜಿಗಳ ಅತಿರೇಕದ ವರ್ತನೆಯನ್ನು ನಿಯಂತ್ರಿಸಲು ಭಾರತದಲ್ಲಿ ಪ್ರತ್ಯೇಕ ಕಾನೂನು ಇಲ್ಲದಿದ್ದರೂ, ಸಂವಿಧಾನ ಮತ್ತು ನಾಗರಿಕ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ.
ಗೌಪ್ಯತೆಯ ಹಕ್ಕು (ಆರ್ಟಿಕಲ್ 21): ಸುಪ್ರೀಂ ಕೋರ್ಟ್ ‘ಗೌಪ್ಯತೆ’ಯನ್ನು ಮೂಲಭೂತ ಹಕ್ಕು ಎಂದು ಘೊಷಿಸಿದೆ. ಸೆಲೆಬ್ರಿಟಿಗಳ ಮನೆ, ಹೋಟೆಲ್ ರೂಮ್ಂತಹ ಖಾಸಗಿ ಸ್ಥಳಕ್ಕೆ ಕ್ಯಾಮೆರಾ ಹಾಕುವುದು ಅತಿಕ್ರಮಣ ಎಂದು ಪರಿಗಣಿಸಲಾಗುತ್ತದೆ.
ಪರ್ಸನಾಲಿಟಿ ರೈಟ್ಸ್: ಇತ್ತೀಚೆಗೆ ದೆಹಲಿ ಹೈಕೋರ್ಟ್ ಅಮಿತಾಭ್ ಬಚ್ಚನ್ ಮತ್ತು ಅನಿಲ್ ಕಪೂರ್ ಪ್ರಕರಣ ಗಳಲ್ಲಿ ‘ಸೆಲೆಬ್ರಿಟಿಗಳ ಅನುಮತಿಯಿಲ್ಲದೆ ಅವರ ಚಿತ್ರ ಅಥವಾ ಧ್ವನಿಯನ್ನು ವಾಣಿಜ್ಯ ಲಾಭಕ್ಕೆ ಬಳಸುವುದು ಶಿಕ್ಷಾರ್ಹ’ ಎಂದು ಮಹತ್ವದ ತೀರ್ಪು ನೀಡಿದೆ.
ಡಿಜಿಟಲ್ ಡೇಟಾ ಸಂರಕ್ಷಣಾ ಕಾಯ್ದೆ (ಡಿಪಿಡಿಪಿ 2023): ಈ ಕಾಯ್ದೆಯಡಿ ವ್ಯಕ್ತಿಯ ಸಮ್ಮತಿಯಿಲ್ಲದೆ ಅವರ ವೈಯಕ್ತಿಕ ಮಾಹಿತಿಯನ್ನು (ಫೋಟೋ, ವಿಡಿಯೋ ಸೇರಿದಂತೆ) ಡಿಜಿಟಲ್ ರೂಪದಲ್ಲಿ ಬಳಸುವುದರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತದೆ.
ವಿದೇಶಗಳಲ್ಲಿರುವ ನಿಯಮಗಳು
ಕ್ಯಾಲಿಫೋರ್ನಿಯಾ (ಅಮೆರಿಕ): ಪಾಪರಾಜಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನುಗಳಿವೆ. ಸೆಲೆಬ್ರಿಟಿಗಳ ಮಕ್ಕಳ ಫೋಟೋ ತೆಗೆಯುವುದು ಅಥವಾ ಅಪಾಯಕಾರಿ ರೀತಿಯಲ್ಲಿ ವಾಹನವನ್ನು ಬೆನ್ನಟ್ಟುವುದು ಕ್ರಿಮಿನಲ್ ಅಪರಾಧ.
ಫ್ರಾನ್ಸ್: ಇಲ್ಲಿನ ಗೌಪ್ಯತೆಯ ಕಾನೂನುಗಳು ಜಗತ್ತಿನಲ್ಲೇ ಅತ್ಯಂತ ಕಠಿಣ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯ ಫೋಟೋ ತೆಗೆಯಲು ಅವರ ಸಮ್ಮತಿ ಇರಬೇಕು, ಇಲ್ಲದಿದ್ದರೆ ಭಾರಿ ದಂಡ ಖಚಿತ.
ಯುನೈಟೆಡ್ ಕಿಂಗ್ಡಮ್ ‘ಪೊ›ಟೆಕ್ಷನ್ ಫ್ರಮ್ ಹರಾಸ್​ವೆುಂಟ್ ಆಕ್ಟ್’ನಡಿ ಸೆಲೆಬ್ರಿಟಿಗಳಿಗೆ ಕಿರುಕುಳ ನೀಡುವ ಪಾಪರಾಜಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net