

ನವದೆಹಲಿ: ನಿನ್ನೆ (ನವೆಂಬರ್, 10) ಬಿಡುಗಡೆಯಾಗಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಬಿಲಾಂಗಿಂಗ್: ಅ ಜರ್ನಿ ಆಫ್ ಲವ್ ಪುಸ್ತಕ ಈಗ, ದೊಡ್ಡ ಮಟ್ಟದ ಚರ್ಚಾ ವಸ್ತುವಾಗಿ ಮಾರ್ಪಟ್ಟಿದೆ. ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರ ರಾಜಕೀಯ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಕುರಿತು ವಿವರಣೆ ನೀಡಲಾಗಿದೆ. ಹೀಗಾಗಿ ಇತಿಹಾಸದಲ್ಲಿ ನಡೆದ ಕೆಲ ಘಟನೆಗಳು ಈಗ ಮತ್ತೊಮ್ಮೆ ಮುನ್ನಲೆಗೆ ಬರುತ್ತಿವೆ.
ಭಾರತದ ಕಾನೂನು ಹಾಗೂ ರಾಜಕೀಯ ತಿಕ್ಕಾಟದ ವಿಷಯಗಳು ಬಂದಾಗ ಅದರಲ್ಲಿ ಶಾ ಬಾನೋ. ಪ್ರಕರಣ ಪ್ರಮುಖವಾಗಿದೆ. ಗಂಡನಿಂದ ತಲಾಕ್ ಪಡೆದು, ತನ್ನ ಹಾಗೂ ಮಗನ ಜೀಪನೋಪಾಯಕ್ಕೆಂದು, ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದ ಬಡ ಮುಸ್ಲಿಂ ಹೆಣ್ಣು ಮಗಳಿಗೆ ನ್ಯಾಯಾಲಯದಲ್ಲಿ ನ್ಯಾಯ ದೊರಕಿದರೂ, ಅಂದಿನ ರಾಜೀವ್ ಗಾಂಧಿ ಸರ್ಕಾರ, ಸಂಸತ್ತಿನಲ್ಲಿ, ವಿಶೇಷ ಮಸೂದೆಯನ್ನು ಅಂಗೀಕರಿಸಿ, ಈ ತೀರ್ಪನ್ನೇ ಬುಡಮೇಲು ಮಾಡಿತ್ತು.
ಈ ಘಟನೆ ಮತ್ತು ಅಂದಿನ ಸಂದರ್ಭವನ್ನು ನೆನಪಿಸಿಕೊಂಡಿರುವ ಸೋನಿಯಾ ಗಾಂಧಿ, ರಾಜೀವ್ ನೇತೃತ್ವದ ಸರ್ಕಾರ, ಈ ತೀರ್ಮಾನವನ್ನು ತೆಗೆದುಕೊಂಡಾಗ, ಅಂದಿನ ಪತ್ರಿಕೆಗಳು, ರಾಜೀವ್ ಗಾಂಧಿ ವೋಟ್ ಬ್ಯಾಂಕ್ ಪೊಲಿಟಿಕ್ಸ್ ಸಲುವಾಗಿ ಬಡ ಮುಸ್ಲಿಂ ಹೆಣ್ಣು ಮಗಳ ನ್ಯಾಯವನ್ನು ಕಿತ್ತುಕೊಂಡರೆಂದು ಬರೆದಿದ್ದರು. ಇದನ್ನು ನೋಡಿ ನನಗೆ ಬೇಸರ ಮತ್ತು ಕೋಪ ಬಂದಿತ್ತು. ಹೀಗಾಗಿ, ನಾನು ರಾಜೀವ್ ಬಳಿ, ನೀವು ಈ ರೀತಿ ಏಕೆ ಮಾಡಿದ್ರಿ? ಅವಳಿಗೆ ಸಿಗಬೇಕಾದ ಅತ್ಯಲ್ಪ ಹಣವನ್ನು ಕಿತ್ತುಕೊಂಡಿರಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದ್ದೆ ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.
ನನ್ನ ಈ ಆರೋಪಗಳಿಗೆ ಸ್ವಲ್ಪ ಕಿರಿಕಿರಿ ಧ್ವನಿ ಇಂದಲೇ ಉತ್ತರಿಸಿದ ಅವರು, ನಾನು ಏನೆಂದು ನಿನಗೆ ತಿಳಿದಿಲ್ಲವೇ? ನಾನು ಮಹಿಳಾ ಹಕ್ಕುಗಳನ್ನು ಸಮರ್ಥಿಸಿಕೊಳ್ಳುವುದಿಲ್ಲವೇ? ಇಲ್ಲಿ ಹೆಣ್ಣಿನ ಸ್ವಾಂತತ್ರ್ಯದ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಸಂಭಾಳಿಸಬೇಕಿದೆ. ಮುಸ್ಲಿಂ ವೈಯಕ್ತಿಕ ಕಾನೂನಿಗೆ ಧಕ್ಕೆ ಬರದಂತೆ ಕಾನೂನನ್ನು ರೂಪಿಸಬೇಕಿದೆ. ಶಾ ಬಾನೋ ಮತ್ತು ಅವರಂತೆಯೇ ಇರುವ ಇತರ ಮಹಿಳೆಯರ ಸಮಸ್ಯೆಯನ್ನು ಬಗೆಹರಿಸಲು ತಾನು ದಾರಿಯನ್ನು ಹುಡುಕುತ್ತಿರುವುದಾಗಿ ರಾಜೀವ್ ಗಾಂಧಿ ತಿಳಿಸಿದ್ದರೆಂದು ಸೋನಿಯಾ ಬರೆದುಕೊಂಡಿದ್ದಾರೆ.
ಆದರೆ, ರಾಜೀವ್ ಗಾಂಧಿ ತೆಗೆದುಕೊಂಡ ನಿರ್ಧಾರವನ್ನು ವಿರೋಧ ಪಕ್ಷವಾದ ಬಿಜೆಪಿ, ಇದು ಕೇವಲ ವೋಟ್ ಬ್ಯಾಂಕ್ ರಾಜಕೀಯ, ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು, ಮುಸ್ಲಿಂ ಮಹಿಳೆಯ ಸ್ವಾತಂತ್ರವನ್ನು ಬಲಿಕೊಡಲಾಗುತ್ತಿದೆ ಎಂದು ಬಿಂಬಿಸಿದ್ದರು ಎಂದು ಹೇಳಿದ್ದಾರೆ, (ಏಜೆನ್ಸೀಸ್).