ನನ್ನ ಸಂದರ್ಶನ ಅರ್ಥ ಮಾಡಿಕೊಳ್ಳಲು ಒಬ್ಬ ಒಳ್ಳೆ ಟ್ರಾನ್ಸ್‌ಲೇಟರ್ ಇಟ್ಕೊಳ್ಳಿ!..ಮಾಧ್ಯಮಗಳ ವಿರುದ್ಧ ಸಂಸದೆ ಮಹುವಾ ಕಿಡಿ | Mahua Moitra

Mahua Moitra | ಸಂಸದೆ ಮಹುವಾ ಮೊಯಿತ್ರಾ
Mahua Moitra | ಸಂಸದೆ ಮಹುವಾ ಮೊಯಿತ್ರಾ
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿರುವ ಬೆನ್ನಲ್ಲೇ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರ ಸಂದರ್ಶನವೊಂದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ತಾವು ಹೊಗಳಿರುವುದಾಗಿ ಬಿಂಬಿಸುತ್ತಿರುವ ಮಾಧ್ಯಮಗಳ ವರದಿಗಳಿಗೆ ಮಹುವಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕೇವಲ ವೀಕ್ಷಕರ ಗಮನ ಸೆಳೆಯಲು ನನ್ನ ಹೇಳಿಕೆಗಳನ್ನು ಸಂದರ್ಭಕ್ಕೆ ತಕ್ಕಂತೆ ತಿರುಚಿ, ತಮಗೆ ಬೇಕಾದ ಆಕರ್ಷಕ ಭಾಗಗಳನ್ನು ಮಾತ್ರ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ. ದಯವಿಟ್ಟು ನನ್ನ ಸಂದರ್ಶನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮಾಧ್ಯಮಗಳು ಒಬ್ಬ ಉತ್ತಮ ಅನುವಾದಕನನ್ನು ನೇಮಿಸಿಕೊಳ್ಳಲಿ ಎಂದು ಅವರು ಲೇವಡಿ ಮಾಡುತ್ತಾ, ತಮಗೆ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಮಹುವಾ ಮೊಯಿತ್ರಾ ಹೇಳಿದ್ದೇನು..?

ಇತ್ತೀಚೆಗೆ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಹುವಾ ಮೊಯಿತ್ರಾ, ತಾವು ರಾಜಕೀಯಕ್ಕೆ ಬಂದ ಆರಂಭದ ದಿನಗಳಲ್ಲಿ ಸುವೇಂದು ಅಧಿಕಾರಿ ನೀಡಿದ್ದ ಬೆಂಬಲವನ್ನು ಸ್ಮರಿಸಿದ್ದಾರೆ. 2014ರಲ್ಲಿ ತಮಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗದಿದ್ದಾಗ ತೀವ್ರ ನಿರಾಶೆಯಾಗಿತ್ತು. ಆ ಸಮಯದಲ್ಲಿ ಸುವೇಂದು ಅಧಿಕಾರಿ ತಮಗೆ ಧೈರ್ಯ ತುಂಬಿದ್ದರು. ಅಷ್ಟೇ ಅಲ್ಲದೆ, ಕರಿಂಪುರ ಕ್ಷೇತ್ರದಿಂದ ತಾವು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ, ಸುವೇಂದು ಅವರೇ ಖುದ್ದಾಗಿ ಬಂದು ತಮ್ಮ ಪರವಾಗಿ ಮೊದಲ ಚುನಾವಣಾ ರ‍್ಯಾಲಿ ನಡೆಸಿಕೊಟ್ಟಿದ್ದರು ಎಂದು ತಿಳಿಸಿದರು.
ರಾಜಕೀಯ ಸಿದ್ದಾಂತಗಳು ಏನೇ ಇದ್ದರೂ, ಕಷ್ಟದ ಸಮಯದಲ್ಲಿ ಹೆಗಲು ಕೊಟ್ಟವರ ಬಗೆಗಿನ ವೈಯಕ್ತಿಕ ಗೌರವ ಮತ್ತು ಮಾನವೀಯ ಸಂಬಂಧಗಳು ರಾಜಕೀಯ ಪಕ್ಷಗಳ ಗಡಿಗಿಂತ ಮಿಗಿಲಾದದ್ದು ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ, ಸುವೇಂದು ಅವರು 2020 ರಲ್ಲಿ ಬಿಜೆಪಿ ಸೇರಿದ ನಂತರ ಅವರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕ ಹೊಂದಿಲ್ಲ ಎಂಬುದನ್ನೂ ಮೊಯಿತ್ರಾ ಸ್ಪಷ್ಟಪಡಿಸಿದ್ದರು.
ಇದೇ ವೇಳೆ, ಬಂಡಾಯವೆದ್ದಿರುವ ಟಿಎಂಸಿ ಶಾಸಕರು ಮತ್ತು ಸಂಸದರ ವಿರುದ್ಧ ಮಹುವಾ ಮೊಯಿತ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುವೇಂದು ಅಧಿಕಾರಿ ಅವರ ನಿರ್ಧಾರವನ್ನು ಉದಾಹರಣೆಯಾಗಿ ನೀಡಿದ ಅವರು, ಸುವೇಂದು ಅವರಿಗೆ ಪಕ್ಷದ ನಾಯಕತ್ವದ ಶೈಲಿ ಇಷ್ಟವಾಗದಿದ್ದಾಗ, ಅವರು ನೇರವಾಗಿ ತಮ್ಮ ನಿಲುವನ್ನು ಪ್ರಕಟಿಸಿ ಪಕ್ಷದಿಂದ ಹೊರನಡೆದರು. ಅವರ ಆ ರಾಜಕೀಯ ಸ್ಪಷ್ಟತೆಯನ್ನು ನಾನು ಗೌರವಿಸುತ್ತೇನೆ. ಆದರೆ ಇಂದು ಬಂಡಾಯ ಸಾರುತ್ತಿರುವ ನಾಯಕರು ಇಷ್ಟು ದಿನ ಪಕ್ಷದಲ್ಲೇ ಇದ್ದು, ಅಧಿಕಾರ ಅನುಭವಿಸುವಾಗ ಏಕೆ ಸುಮ್ಮನಿದ್ದರು? ಅಂದೇ ಈ ನಾಯಕತ್ವದ ಶೈಲಿಯನ್ನು ಏಕೆ ವಿರೋಧಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಮಮತಾ ಬ್ಯಾನರ್ಜಿ ಬಣ ಮತ್ತು ಬಂಡಾಯ ನಾಯಕರ ಬಣಗಳು ಪಕ್ಷದ ಅಧಿಕೃತ ಹಕ್ಕಿಗಾಗಿ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಪಟ್ಟಿಗಳನ್ನು ಸಲ್ಲಿಸಿವೆ. ಈ ತೀವ್ರ ರಾಜಕೀಯ ಜಿದ್ದಾಜಿದ್ದಿನ ನಡುವೆಯೇ ಮಹುವಾ ಮೊಯಿತ್ರಾ ಅವರ ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net