ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬಿಜೆಪಿ ಎಂಬ ಪಕ್ಷದ ಮೂಲಕ ಅರ್ಥ ಮಾಡಿಕೊಳ್ಳುವುದು ದೊಡ್ಡ ತಪ್ಪು ಎಂದು ಭಾನುವಾರ(ಡಿ. 21) ಅದರ ಮುಖ್ಯಸ್ಥರಾದ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಆರ್‌ಎಸ್‌ಎಸ್ 100 ವ್ಯಾಖ್ಯಾನ ಮಾಲಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಹೋಲಿಕೆಗಳು ಅಥವಾ ರಾಜಕೀಯದ ಮೂಲಕ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಹೆಚ್ಚಾಗಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಅನ್ನು ಕೇವಲ ಮತ್ತೊಂದು ಸೇವಾ ಸಂಘಟನೆಯಾಗಿ ನೋಡುವುದು ತಪ್ಪು. ಮತ್ತೊಂದು ಸೇವಾ ಸಂಸ್ಥೆ ಎಂದು ತಪ್ಪಾಗಿ ಭಾವಿಸಬೇಡಿ. ನೀವು ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ಯಾವುದೇ ಹೋಲಿಕೆಗಳನ್ನು ಮಾಡಬೇಡಿ ಎಂದು ಪ್ರತಿಪಾದಿಸಿದ್ದಾರೆ.
"ರಾಷ್ಟ್ರೀಯ ಸ್ವಯಂಸೇವಕ ಸಂಘ: 100 ವರ್ಷಗಳ ಪಯಣ" ಎಂಬ ಶೀರ್ಷಿಕೆಯ ಈ ಸಮ್ಮೇಳನದಲ್ಲಿ ಉತ್ತರ ಬಂಗಾಳದ ಎಂಟು ಜಿಲ್ಲೆಗಳಿಂದ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ನೂರಕ್ಕೂ ಹೆಚ್ಚು ಪ್ರಬುದ್ಧ ನಾಗರಿಕರು ಮತ್ತು ನೆರೆಯ ರಾಜ್ಯವಾದ ಸಿಕ್ಕಿಂನಿಂದಲೂ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ರಾವ್ ಭಾಗವತ್ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು (ಏಜೆನ್ಸೀಸ್).