ಚುನಾವಣೆ ಬಳಿಕ ಅಳಬೇಡಿ; ಅಖಿಲೇಶ್ ಯಾದವ್​ಗೆ ಮೈತ್ರಿಯ ಆಫರ್ ಕೊಟ್ಟ ಅಸಾದುದ್ದೀನ್ ಓವೈಸಿ | Asaduddin Owaisi

ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ
ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ
Published on
ಲಖನೌ: 2029ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ನೋಡುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಸಮಾಜವಾದಿ ಪಕ್ಷದ ಜೊತೆ ಮೈತ್ರಿಗೆ ಸಿದ್ದವಿದ್ದೇವೆ ಎಂದು ಅದರ ಮುಖ್ಯಸ್ಥ ಅಖಿಲೇಶ್ ಯಾದವ್​​ ಅವರಿಗೆ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ(Asaduddin Owaisi) ಆಫರ್ ನೀಡಿದ್ದಾರೆ.
ಮೊರಾದಾಬಾದ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸುವುದನ್ನು ಎಐಎಂಐಎಂ ಬಯಸುವುದಿಲ್ಲ. ನಿಮ್ಮ ಜೊತೆ ಕೈಜೊಡಿಸಲು ಮತ್ತು ಮೈತ್ರಿ ಮಾಡಿಕೊಳ್ಳಲು ಸಿದ್ದನಿದ್ದೇನೆ. ತುಂಬಾ ತಡವಾಗುವ ಮೊದಲೇ ಇದು ಮಾತುಕತೆಯ ಸಮಯ. ಚುನಾವಣೆ ಬಳಿಕ ಮತ್ತೆ ಅಳಬೇಡಿ ಎಂದಿದ್ದಾರೆ.
ಪ್ರತಿಸ್ಪರ್ಧಿಗಳಾಗಿ ಕೊನೆಗೊಂಡು ಪರಸ್ಪರರ ಮತಗಳನ್ನು ಪಡೆಯುವ ಬದಲು ನಿಮ್ಮೊಂದಿಗೆ ಹೋರಾಡಲು ಸಿದ್ದನಿದ್ದೇನೆ. ಓವೈಸಿ ಸ್ಪರ್ಧಿಸುವುದರಿಂದ ನಮಗೆ ಹಾನಿಯಾಗುತ್ತದೆ ಎಂದು ನೀವು ಹೇಳುತ್ತೀರಿ. ನಾನು ನಿಮ್ಮೊಂದಿಗೆ ಹೋರಾಡಲು ಸಿದ್ಧನಿದ್ದೇನೆ. ಎಐಎಂಐಎಂನ ಹೋರಾಟ ಯಾವುದೇ ಧರ್ಮದ ವಿರುದ್ಧವಾಗಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಹೋರಾಟ ನಮ್ಮ ಗೌರವ ಮತ್ತು ನ್ಯಾಯಕ್ಕಾಗಿ. ನಾವು ಚಾಪೆಯ ಮೇಲೆ ಕುಳಿತುಕೊಳ್ಳಲು ಬಯಸುವುದಿಲ್ಲ. ನಮಗೆ ಸಮಾನತೆ ಬೇಕು. ಅಖಿಲೇಶ್ ಆ ಕುರ್ಚಿಯ ಮುಂದೆ ಕುಳಿತರೆ, ಓವೈಸಿ ಆ ಕುರ್ಚಿಯ ಮುಂದೆ ಕಾಲು ಚಾಚಿ ಕುಳಿತು ಹಕ್ಕುಗಳು ಮತ್ತು ನ್ಯಾಯದ ಬಗ್ಗೆ ಮಾತನಾಡುತ್ತೇನೆ ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿ ವ್ಯಂಗ್ಯ

ಇನ್ನೂ ಅಖಿಲೇಶ್ ಯಾದವ್​​ಗೆ ಓವೈಸಿ ಅವರ ಮೈತ್ರಿ ಆಫರ್ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಅಖಿಲೇಶ್ ಯಾದವ್ ಮತ್ತು ಓವೈಸಿ ಓಲೈಕೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಸ್ಪರ್ಧೆಯನ್ನು ಬದಿಗಿಟ್ಟು ಭಾಯಿಜಾನ್ ಸಹಯೋಗವನ್ನು ಮಾಡೋಣ ಎಂದು ಓವೈಸಿ ಅಖಿಲೇಶ್ ಜಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ಓವೈಸಿ ಮತ್ತು ಯಾದವ್ ಒಂದೇ ನಾಣ್ಯದ ಎರಡು ಬದಿಗಳು ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net